ADVERTISEMENT

ನೈರುತ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 9:10 IST
Last Updated 22 ಮೇ 2018, 9:10 IST

ಶಿವಮೊಗ್ಗ: ಜೂನ್‌ 8ರಂದು ನಡೆಯಲಿರುವ ನೈರುತ್ಯ ಪದವೀಧರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳಾದ ಆಯನೂರು ಮಂಜುನಾಥ, ಗಣೇಶ್ ಕಾರ್ಣಿಕ್ ಹಾಗೂ ನಿರಂಜನಮೂರ್ತಿ ಅವರು ತಮ್ಮ ತಮ್ಮ ಕ್ಷೇತ್ರಗಳಿಗೆ ಮೈಸೂರಿನಲ್ಲಿ ಸೋಮವಾರ ಉಮೇದುವಾರಿಕೆಯನ್ನು ಸಲ್ಲಿಸಿದರು.

ಉಮೇದುವಾರಿಕೆ ಸಲ್ಲಿಕೆ ನಂತರ ಮೈಸೂರಿನ ರಾಜೇಂದ್ರ ಕಲಾಮಂದಿರದಲ್ಲಿ ನಡೆದ ಸಭೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ‘ವಿಧಾನಪರಿಷತ್‌ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಈಗಾಗಲೇ ಸಿದ್ಧವಾಗಿದ್ದು, ಕಾರ್ಯಕರ್ತರು ಮತದಾರರನ್ನು ಸಂಪರ್ಕಿಸಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡುವಂತೆ ಮನವಿ ಮಾಡ ಬೇಕು’ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮುಖಂಡರಾದ ಎಸ್.ರುದ್ರೇಗೌಡ, ಶಾಸಕ ರಾಮದಾಸ್, ಮಾಜಿ ಶಾಸಕ ಜೀವರಾಜ್, ಸಂಸದ ಪ್ರತಾಪಸಿಂಹ ಅವರೂ ಇದ್ದರು.

ADVERTISEMENT

ಅದೇ ರೀತಿ ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಸ್‌.ಪಿ.ದಿನೇಶ್ ಕೂಡ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದಲ್ಲಿ ಸೋಮವಾರ ನಾಮಪತ್ರ ಸಲ್ಲಿಸಿದರು.

ಸಂಸದ ಧ್ರುವನಾರಾಯಣ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್‌, ವಿಶ್ವವಿದ್ಯಾಲಯ ಶೈಕ್ಷಣಿಕ ಪರಿಷತ್ ಸದಸ್ಯ ಪವನ್‌ಕುಮಾರ್‌, ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾದ ಹರಿಗೆ ರಾಜಶೇಖರ್, ಎಚ್.ಸಿ.ಯೋಗೀಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್.ಕಿರಣ್, ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಗಿರೀಶ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಲೋಕೇಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.