ADVERTISEMENT

ಪಡಿತರ ಚೀಟಿಗಾಗಿ ಮತ್ತೆ 46,721 ಅರ್ಜಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 6:19 IST
Last Updated 7 ಜುಲೈ 2017, 6:19 IST

ಶಿವಮೊಗ್ಗ: ಬಿಪಿಎಲ್‌ ಪಡಿತರ ಚೀಟಿಗಾಗಿ ಜಿಲ್ಲೆಯಲ್ಲಿ ಹೊಸದಾಗಿ ಮತ್ತೆ 46,721 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೂ, ಅರ್ಹ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ವಿತರಣೆ ವಿಳಂಬವಾಗಿದೆ. ಕಳೆದ ವರ್ಷದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅರ್ಹ ಕುಟುಂಬಗಳಿಗೆ ಪಡಿತರ ಚೀಟಿ ನೀಡಲು ಅರ್ಜಿ ಆಹ್ವಾನಿಸಿತು. ಈ ವರ್ಷ ಮತ್ತೆ ಇಷ್ಟೊಂದು ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾಗಿವೆ.

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 34,934 ಅರ್ಜಿಗಳು, ನಗರ–ಪಟ್ಟಣ ಪ್ರದೇಶದಲ್ಲಿ 12,697 ಅರ್ಜಿಗಳು ಸಲ್ಲಿಕೆಯಾಗಿವೆ. ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ ತಾಲ್ಲೂಕು ವ್ಯಾಪ್ತಿಯಲ್ಲಿ ಸಲ್ಲಿಕೆಯಾದ ಹೊಸ ಅರ್ಜಿಗಳನ್ನು ಆಯಾ ಗ್ರಾಮ ಲೆಕ್ಕಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಪಟ್ಟಣ ವ್ಯಾಪ್ತಿಯಲ್ಲಿ ಇಬ್ಬರು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇದರ ಜತೆಗೆ ಆಹಾರ ಹಾಗೂ ಕಂದಾಯ ಮಾಹಿತಿಗಳನ್ನೂ ಪ್ರತ್ಯೇಕವಾಗಿ ಪರಿಶೀಲನೆ ನಡೆಸುತ್ತಿರುವ ಕಾರಣ ಹೊಸ ಕಾರ್ಡ್‌ ವಿತರಣೆಗೆ ಒಂದು ವರ್ಷ ವಿಳಂಬವಾಗಿದೆ.

ಎಲ್ಲ ಅಂಗಡಿಗಳಿಗೂ ಬಯೊಮೆಟ್ರಿಕ್‌: ಜಿಲ್ಲೆಯಲ್ಲಿರುವ 254 ಪಡಿತರ ಅಂಗಡಿಗಳಿಗೆ ಈಗಾಗಲೇ ಬಯೊ ಮೆಟ್ರಿಕ್ ಅಳವಡಿಸಲಾಗಿದೆ. ಎಲ್ಲ ಕಾರ್ಡ್‌ದಾರಿಗೂ ಸರ್ಕಾರ ನಿಗದಿ ಪಡಿಸಿದ ಪಡಿತರ ವಿತರಿಸಲಾಗುತ್ತಿದೆ. ಬಿಪಿಎಲ್‌ ಪಡಿತರ ಚೀಟಿಯಿಂದ ಬಡವರಿಗೆ ಅನುಕೂಲವಾಗುವಂತೆ ಸರ್ಕಾರ 25 ತರಹದ ಉಪಯೋಗ ಕಲ್ಪಿಸಿದೆ. ಬ್ಯಾಂಕ್‌
ಸಾಲ, ಉಚಿತ ಚಿಕಿತ್ಸೆ ಸೇರಿದಂತೆ ಹಲವು ಸೌಲಭ್ಯ ನೀಡಿದೆ.

ADVERTISEMENT

ಹಾಗಾಗಿ, ಈ ಪಡಿತರ ಚೀಟಿ ಪಡೆಯಲು ಬೇಡಿಕೆ ಹೆಚ್ಚಾಗಿದೆ. ದಾಖಲೆಗಳ ಪರಿಶೀಲನೆಯ ನಂತರ ಎಲ್ಲ ಅರ್ಹರಿಗೂ ಕಾರ್ಡ್‌ ವಿತರಿಸಲಾಗುವುದು ಎನ್ನುತ್ತಾರೆ ಆಹಾರ ಇಲಾಖೆ ಉಪ ನಿರ್ದೇಶಕ ಟಿ.ಕೆ. ಲಕ್ಷ್ಮೀನಾರಾಯಣ ರೆಡ್ಡಿ.

ಬಿಪಿಎಲ್‌ ಕಾರ್ಡ್‌ ಪಡೆಯಲು ಯಾರು ಅರ್ಹರಲ್ಲ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ–2013 ರಂತೆ ಆದ್ಯತಾ ಪಡಿತರ ಚೀಟಿಗಾಗಿ   ಅರ್ಹ ಕುಟುಂಬ ಗುರುತಿಸಲು ನಾಲ್ಕು ಮಾನದಂಡಗಳನ್ನು ಪರಿಷ್ಕರಿಸಿ, ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರಿ ನೌಕರರು, ಆದಾಯ ತೆರಿಗೆ, ವೃತ್ತಿ ತೆರಿಗೆ, ಸೇವಾ ತೆರಿಗೆ ಪಾವತಿಸುವ ಕುಟುಂಬಗಳು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ಸಮಾನವಾದ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು, ನಗರ ಪ್ರದೇಶಗಳಲ್ಲಿ ಒಂದು ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಸ್ವಂತ ಮನೆ ಹೊಂದಿರುವ ಕುಟುಂಬಗಳು. ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ವಾಣಿಜ್ಯ ವಾಹನ ಹೊಂದಿದ ಕುಟುಂಬ ಹೊರತುಪಡಿಸಿ, ನಾಲ್ಕು ಚಕ್ರದ ವಾಹನ ಹೊಂದಿರುವ ಎಲ್ಲಾ ಕುಟುಂಬಗಳು. ವಾರ್ಷಿಕ ಆದಾಯ ₹ 1.20 ಲಕ್ಷಗಳಿಗಿಂತ ಹೆಚ್ಚು ಇರುವ ಕುಟುಂಬಗಳು ಬಿಪಿಎಲ್ ಕಾರ್ಡ್‌ ಪಡೆಯಲು ಅರ್ಹತೆ ಹೊಂದಿರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.