ADVERTISEMENT

ಪೈಪ್‌ಲೈನ್ ಕಾಮಗಾರಿ ಪೂರ್ಣ: ನೀರು ಸೋರಿಕೆಗೆ ಕಡಿವಾಣ

ಶಾಸಕ ಕೆ.ಬಿ. ಪ್ರಸನ್ನ ಕುಮಾರ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 5:22 IST
Last Updated 14 ಏಪ್ರಿಲ್ 2017, 5:22 IST
ಶಿವಮೊಗ್ಗದ ಕೆ.ಆರ್. ವಾಟರ್‌ ವರ್ಕ್ಸ್‌ನಲ್ಲಿ ಗಾಜನೂರಿನ ತುಂಗಾ ಜಲಾಶಯದಿಂದ ನೀರು ಪೂರೈಕೆ ಮಾಡುವ ಹೊಸ ಪೈಪ್‌ಲೈನ್‌ ಸಂಪರ್ಕಕ್ಕೆ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಗುರುವಾರ ಚಾಲನೆ ನೀಡಿದರು.
ಶಿವಮೊಗ್ಗದ ಕೆ.ಆರ್. ವಾಟರ್‌ ವರ್ಕ್ಸ್‌ನಲ್ಲಿ ಗಾಜನೂರಿನ ತುಂಗಾ ಜಲಾಶಯದಿಂದ ನೀರು ಪೂರೈಕೆ ಮಾಡುವ ಹೊಸ ಪೈಪ್‌ಲೈನ್‌ ಸಂಪರ್ಕಕ್ಕೆ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಗುರುವಾರ ಚಾಲನೆ ನೀಡಿದರು.   

ಶಿವಮೊಗ್ಗ: ಗಾಜನೂರಿನ ತುಂಗಾ ಜಲಾಶಯದಿಂದ ನಗರದ ಕೆ.ಆರ್. ವಾಟರ್‌ ವರ್ಕ್ಸ್‌ಗೆ 12 ಕೋಟಿ ಲೀಟರ್ ನೀರು ಪೂರೈಕೆ ಮಾಡುವ ಸಾಮರ್ಥ್ಯದ ಹೊಸ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ.

ನಗರದ ಮಂಡ್ಲಿ ಬಳಿಯ ಕೆ.ಆರ್.ವಾಟರ್‌ ವರ್ಕ್ಸ್‌ ಆವರಣದಲ್ಲಿ ಮಹಾನಗರ ಪಾಲಿಕೆ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹೊಸ ಪೈಪ್‌ಲೈನ್‌ ಸಂಪರ್ಕಕ್ಕೆ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಚಾಲನೆ ನೀಡಿದರು.

ನಂತರ   ಮಾತನಾಡಿದ ಅವರು, ‘ನೂತನ ಪೈಪ್‌ಲೈನ್ ಅಳವಡಿಕೆಯಿಂದ ನೀರು  ಸೋರಿಕೆಗೆ ಕಡಿವಾಣ ಬಿದ್ದಿದೆ. ದಿನದ 24 ಗಂಟೆಯೂ ನೀರು ಪೂರೈಸಲು ಇದರಿಂದ ಅನುಕೂಲ’ ಎಂದರು.

‘ಈವರೆಗೂ ಗಾಜನೂರಿನಿಂದ ನೀರು ಪೂರೈಸುವ ಪೈಪ್‌ಲೈನ್ ಕಳಪೆ ಗುಣಮಟ್ಟದ್ದಾಗಿತ್ತು. ಒಡೆದು ಹೋಗುವುದು, ಸೋರುವುದು ಇತ್ಯಾದಿ ಸಮಸ್ಯೆ ಉಂಟಾಗಿತ್ತು. ಇದರಿಂದ ಶೇ 30ರಷ್ಟು ನೀರು ವ್ಯರ್ಥವಾಗುತ್ತಿತ್ತು. ಪೈಪ್‌ಗಳನ್ನು ದುರಸ್ತಿ ಮಾಡುವುದೇ ದೊಡ್ಡ ತಲೆನೋವಾಗಿತ್ತು. ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಕಾಣಿಸುವ ಸಲುವಾಗಿ ಹೊಸ ಪೈಪ್‌ಲೈನ್ ಅಳವಡಿಸಲಾಗಿದೆ’ ಎಂದು ತಿಳಿಸಿದರು.

‘ಗಾಜನೂರಿನಿಂದ ವಾಟರ್ ವರ್ಕ್ಸ್‌ಗೆ 11.3 ಕಿ. ಮೀ ಉದ್ದದ ಈ ಪೈಪ್‌ಲೈನ್‌ ಅನ್ನು ತುಂಗಾನದಿ ದಡದ ಮೂಲಕ ತರಲಾಗಿದೆ. ಈ ಹಿಂದಿನ ಪೈಪ್‌ಲೈನ್ ತೀರ್ಥಹಳ್ಳಿ ರಸ್ತೆಯ ಅಂಚಿ ನಲ್ಲಿತ್ತು. ಇದು ಹಲವು ಸಮಸ್ಯೆಗಳಿಗೆ ಕಾರಣವಾಗಿತ್ತು. ಶಿವಮೊಗ್ಗ ತೀರ್ಥಹಳ್ಳಿ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗುತ್ತಿರುವುದರಿಂದ ಪೈಪ್ ತೆರವಿಗೆ ಒತ್ತಾಯ ಕೇಳಿ ಬಂದಿತ್ತು’ ಎಂದರು.

‘ಪೈಪ್‌ ಮೂಲಕ 8 ಕೋಟಿ  ಲೀಟರ್ ನೀರನ್ನು ಜಲಾಶಯದಿಂದ ತರಲಾಗುತ್ತಿದೆ. ಇದರ ಸಾಮರ್ಥ್ಯ 12 ಕೋಟಿ ಲೀಟರ್‌ವರೆಗಿದೆ. ಮುಂದಿನ 25 ವರ್ಷಗಳಿಗೆ ನಗರದಲ್ಲಿ ನಿರಂತರ ನೀರು ಸರಬರಾಜು ಮಾಡಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ₹ 30 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಮನೆಗಳ ನೀರು ಪೂರೈಕೆಗೆ ಮೀಟರ್ ಅಳವಡಿಕೆ, ನೀರು ಪೋಲಾಗದಂತೆ ತಡೆಗಟ್ಟುವಿಕೆ ಹಾಗೂ ನಿರಂತರ ನೀರು ಸರಬರಾಜಿಗೆ ನಾಗರಿಕರಿಗೆ ತೊಂದರೆಯಾಗದಂತೆ  ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಮೇಯರ್ ಏಳುಮಲೈ ಮಾತನಾಡಿ, ‘ಕೇಂದ್ರ ಸರ್ಕಾರದ ಅಮೃತ್ ಯೋಜನೆ ಯಡಿ ವಿವಿಧ ಕಾಮಗಾರಿಗಳಿಗೆ ಅನುದಾನ ಲಭ್ಯವಾಗಿದೆ. ಅನುದಾನ ವ್ಯರ್ಥವಾಗದ ರೀತಿಯಲ್ಲಿ  ನೀರು ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದೆ’  ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಪಾಲಿಕೆ ಆಯುಕ್ತೆ ತುಷಾರಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಲ್ ಗೋಪಿ, ಸದಸ್ಯರಾದ ವಿಶ್ವನಾಥ್ ಕಾಶಿ, ಫಾಲಾಕ್ಷಿ, ಯೋಗೀಶ್, ರೇಖಾ ಚಂದ್ರಶೇಖರ್, ರೇಣುಕಾ ನಾಗರಾಜ್, ಓಂಪ್ರಕಾಶ್ ತೇಲ್ಕರ್, ಎಸ್.ಕೆ. ಮರಿಯಪ್ಪ       ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.