ADVERTISEMENT

ಪ್ರವಾಸ ಕಥನಕ್ಕೆ ಸವಾಲುಗಳು ಅನೇಕ

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಶಂಕರಪ್ಪ

​ಪ್ರಜಾವಾಣಿ ವಾರ್ತೆ
Published 15 ಮೇ 2017, 4:30 IST
Last Updated 15 ಮೇ 2017, 4:30 IST
ಪ್ರವಾಸ ಕಥನಕ್ಕೆ ಸವಾಲುಗಳು ಅನೇಕ
ಪ್ರವಾಸ ಕಥನಕ್ಕೆ ಸವಾಲುಗಳು ಅನೇಕ   
ಶಿವಮೊಗ್ಗ:  ನಿರ್ದಿಷ್ಟ ಚೌಕಟ್ಟಿನ ಒಳಗೆ ಪ್ರವಾಸ ಕಥನ ರಚಿಸಬೇಕಾ ಗಿರುವುದರಿಂದ ಬರಹಗಾರನಿಗೆ  ಸವಾಲು ಹೆಚ್ಚು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ. ಶಂಕರಪ್ಪ ಅಭಿಪ್ರಾಯಪಟ್ಟರು.
 
ನಗರದ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಸಾಗರ ತಾಲ್ಲೂಕಿನ ಜೋಷಿ ಫೌಂಡೇಷನ್ ಹಾಗೂ ಮಾನಸ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ ‘ಹರಹರ ಶಂಭೋ ಅಮರನಾಥ ಕ್ಷೇತ್ರ ದರ್ಶನ ಪ್ರವಾಸ ಕಥನ’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
 
ಕಥೆ, ಕವನ, ಕಾದಂಬರಿ ಬರೆಯಲು ಹೊರಟವರು ಕಲ್ಪನೆಗೆ ತಕ್ಕಂತೆ ಬರೆಯುತ್ತಾ ಸಾಗಬಹುದು. ಮನಸ್ಸಿಗೆ ಅನಿಸಿದ ಭಾವನೆ ವರ್ಣಿಸಬಹುದು. ಆದರೆ, ಪ್ರವಾಸ ಕಥನ ಸೀಮಿತ ಪರಿಧಿಯಲ್ಲಿ ಸಾಗುವುದರಿಂದ ಬರವಣಿಗೆಗೆ ಸ್ವಾತಂತ್ರ್ಯ ಕಡಿಮೆ ಇರುತ್ತದೆ. ಇಂತಹ ಕ್ಲಿಷ್ಟಕರ ಸವಾಲು ಎದುರಿಸಿಯೂ  ಅಮರನಾಥ ಪ್ರವಾಸ ಕಥನವನ್ನು ಕಟ್ಟಿಕೊಟ್ಟಿದ್ದಾರೆ ಎಂದು ತಿಳಿದರು. 
 
ಎಂ.ಎನ್. ಮಾನಸ ಈ ಪುಸ್ತಕದ ಮೂಲಕ ಸಾಹಿತ್ಯ ಲೋಕ ಪ್ರವೇಶಿಸಿದ್ದಾರೆ. ಅವರ ‘ಹರಹರ ಶಂಭೋ’ ಕೃತಿ ಸಂದೇಶ ನೀಡುವುದರ ಜತೆಗೆ, ಮಾರ್ಗದರ್ಶಕವೂ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. 
 
ಡಾ.ಶಂಕರ ಶಾಸ್ತ್ರಿ ಮಾತನಾಡಿ, ‘ಹರಹರಶಂಭೋ’  ಕೃತಿ ದೇಶದ ಧಾರ್ಮಿಕ ಪ್ರಜ್ಞೆ, ಸಂಸ್ಕಾರ ಪ್ರತಿಬಿಂಬಿಸುತ್ತದೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸ್ನೇಹ, ಸೌಹಾರ್ದತೆ  ಸಾರುತ್ತದೆ.
 
ಕೃತಿಯಲ್ಲಿ ಒಟ್ಟು 11 ಅಧ್ಯಾಯಗಳಿದ್ದು, ಹಿಮಾಲಯದ ಚಿತ್ರಣ, ದೇವರ ಮಹತ್ವ ಬಹು ಸುಂದರವಾಗಿ ಓದುಗರಿಗೆ ಕಟ್ಟಿಕೊಡಲಾಗಿದೆ. ಯುವಜನತೆ ಬರವಣಿಗೆಯಲ್ಲಿ ತೊಡಗಿಸಿ ಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ’ ಎಂದು ಸಂತಸಪಟ್ಟರು. 
 
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಲೇಖಕಿ ಮಾನಸ ಕಿರು ವಯಸ್ಸಿನಲ್ಲೇ ಪುಸ್ತಕ ರಚನೆಯಂತಹ ಸಾಹಸಕ್ಕೆ ಇಳಿದಿದ್ದಾರೆ. ಅಮರನಾಥ ದರ್ಶನ ಪೂರ್ಣಗೊಳಿಸಿ, ಜೀವನದಲ್ಲಿ ಭಿನ್ನ ಅನುಭವ ತಮ್ಮದಾಗಿಸಿ ಕೊಂಡಿರುವ ಅವರು ಪುಸ್ತಕದ ಮೂಲಕ ಅನೇಕ ವಿಚಾರ ಸಮಾಜಕ್ಕೆ ತಿಳಿಸಿದ್ದಾರೆ ಎಂದರು.
 
ವಾಗ್ಮಿ ಹಿರೇಮಗಳೂರು ಕಣ್ಣನ್ ‘ವಾಟ್ಸ್‌ ಆ್ಯಪ್‌ನಿಂದ ಈಚೆಗೆ ಬಂದು ವಾಕ್ ಸಂಪರ್ಕ ಗಳಿಸುವುದು ಹೇಗೆ’   ಕುರಿತು ಉಪನ್ಯಾಸ ನೀಡಿದರು. 
ಜೋಷಿ ಫೌಂಡೇಷನ್‌ನ ಅಬಸೆ ದಿನೇಶ್ ಕುಮಾರ್‌, ರಾಜ್ಯ ಅರಣ್ಯ ಇಲಾಖಾ ನೌಕರರ ಮಹಾಮಂಡಳದ ಅಧ್ಯಕ್ಷ ಎನ್.ರಘುರಾಮ್ ದೇವಾಡಿಗ, ಜಿಲ್ಲಾ ವಿಪ್ರ ನೌಕರರ ಸಂಘದ ಅಧ್ಯಕ್ಷ ಎಚ್.ಕೆ. ಕೇಶವಮೂರ್ತಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ, ಮತ್ತೂರಿನ ಮಾರ್ಕಂಡೇಯ ಅವಧಾನಿ, ಲೇಖಕಿ ಎಂ.ಎನ್. ಮಾನಸ ಇದ್ದರು. ವಿದ್ಯಾ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.