ADVERTISEMENT

ಪ್ರಾಧಿಕಾರದ ಸೂಚನೆಗಿಲ್ಲ ಕಿಮ್ಮತ್ತು

​ಪ್ರಜಾವಾಣಿ ವಾರ್ತೆ
Published 19 ಮೇ 2017, 5:04 IST
Last Updated 19 ಮೇ 2017, 5:04 IST

ಶಿವಮೊಗ್ಗ: ಇರುವ ಎಲ್ಲ ಮರಗಳನ್ನೂ ಉಳಿಸಿಕೊಂಡು ರಸ್ತೆ ಕಾಮಗಾರಿ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದ್ದರೂ  ಶಿವಮೊಗ್ಗ–ತೀರ್ಥಹಳ್ಳಿ ರಸ್ತೆಯ ಮರಗಳನ್ನು ಕಡಿಯಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು  ಅಣ್ಣಾ ಹಜಾರೆ ಹೋರಾಟ ಸಮಿತಿ ಕಾರ್ಯಕರ್ತರು ದೂರಿದ್ದಾರೆ.

ಶಿವಮೊಗ್ಗ– ತೀರ್ಥಹಳ್ಳಿ– ಶೃಂಗೇರಿ ಹೆದ್ದಾರಿ–169 ರಸ್ತೆ ವಿಸ್ತರಣೆ ಮಾಡುವಾಗ  ಮರಗಳನ್ನು ಕಡಿಯಬಾರದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದೆ.

ಶಿವಮೊಗ್ಗ – ತೀರ್ಥಹಳ್ಳಿ ಚತುಷ್ಪಥ ಮಾರ್ಗದ ಆವಶ್ಯಕತೆ ಇಲ್ಲ. ಸಂಚಾರ ದಟ್ಟಣೆ ಕಡಿಮೆ ಇರುವ ಕಾರಣ ದ್ವಿಪಥ ಮಾರ್ಗ ಸಾಕು. ಒಂದು ವೇಳೆ ಈ ರಸ್ತೆ ವಿಸ್ತರಣೆ ಮಾಡಲೇ ಬೇಕು ಎಂದಾದರೆ ಯಾವುದೇ ಮರಕ್ಕೆ ಹಾನಿಯಾಗದಂತೆ ಎಚ್ಚರವ ಹಿಸಲು ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ  ಎಂದು ಅಣ್ಣಾ ಹಜಾರೆ ಸಮಿತಿಗೆ ಬರೆದ ಪತ್ರದಲ್ಲಿ ವಿವರಿಸಲಾಗಿದೆ.

ADVERTISEMENT

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಶಿವಮೊಗ್ಗ – ತೀರ್ಥಹಳ್ಳಿ ರಸ್ತೆ ಹೆದ್ದಾರಿಯಲ್ಲಿ 1,500 ಮರ ಕಡಿಯಲು ಮುಂದಾಗಿದ್ದಾರೆ. ಪರಿಸರ ಇಲಾಖೆಯ ಅನುಮತಿ ಪಡೆದಿಲ  ಎಂದು ಅಣ್ಣಾ ಹಜಾರೆ ಹೋರಾಟ ಸಮಿತಿಯ ಪ್ರಮುಖ ಟಿ.ಎಂ. ಅಶೋಕ್ ಯಾದವ್ ಆರೋಪಿಸಿದರು.

ಶಿವಮೊಗ್ಗ – ತೀರ್ಥಹಳ್ಳಿ ರಸ್ತೆ ಸದ್ಯ 5 1/2 ಮೀಟರ್‌ ಇದೆ. ಇದೀಗ  7ವರೆ ಮೀಟರ್ ವಿಸ್ತರಿಸಲಾಗುತ್ತಿದೆ. ಅದಕ್ಕಾಗಿ ಕೆಲವು ಮರಗಳನ್ನು ಕಡಿಯಬೇಕಾಗುತ್ತದೆ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಚ್.ಪಿ. ರಮೇಶ್.

ಪತ್ರದ ಮೂಲಕ ವಿವರ ಮರ ಕಡಿಯುವ ಕುರಿತು ವಿವರ ಕೇಳಿ, ಅಣ್ಣಾ ಹಜಾರೆ ಹೋರಾಟ ಸಮಿತಿ ಕಳೆದ ಫೆಬ್ರುವರಿ 17ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮಾಹಿತಿ ಕೇಳಿತ್ತು. ಮೇ 17 ರಂದು ಪ್ರಾಧಿಕಾರ ಹೋರಾಟ ಸಮಿತಿಗೆ ಪತ್ರದ ಮೂಲಕ ವಿವರ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.