ADVERTISEMENT

ಬಡವರಿಗೊಂದು, ಶ್ರೀಮಂತರಿಗೊಂದು ಕಾನೂನು

ಹೊಸನಗರ ಪಟ್ಟಣ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯ ರತ್ನಾಕರ ಶೆಟ್ಟಿ ಆರೋಪ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 5:12 IST
Last Updated 7 ಮಾರ್ಚ್ 2017, 5:12 IST
ಹೊಸನಗರ: ಬಡವರ ಮನೆ ದುರಸ್ತಿಗೆ ಪರವಾನಿಗೆ ಬೇಕು ಎಂದು ನೋಟಿಸ್‌ ನೀಡುವ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ನೆಹರೂ ವೃತ್ತದಲ್ಲಿ 4 ಅಂತಸ್ತಿನ ಅನಧಿಕೃತ ಕಟ್ಟಡಕ್ಕೆ ಏಕೆ ಒಂದೂ ಎಚ್ಚರಿಕೆ ಪತ್ರ ನೀಡಿಲ್ಲ ಎಂದು ಸದಸ್ಯ ಡಿ.ಎಂ.ರತ್ನಾಕರ ಶೆಟ್ಟಿ ಪ್ರಶ್ನಿಸಿದರು.
 
ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹಾಲಗದ್ದೆ ಉಮೇಶ್ ಅಧ್ಯಕ್ಷತೆಯಲ್ಲಿ ಸೋಮವಾರ ಸಾಮಾನ್ಯ ಸಭೆ ನಡೆಯಿತು.
 
‘ಬಡವರಿಗೆ ಒಂದು, ಶ್ರೀಮಂತರಿ ಗೊಂದು ಕಾನೂನು ಸರಿಯೇ?’ ಎಂದು ಪ್ರಶ್ನಿಸಿದ ಅವರು, ನೆಹರೂ ವೃತ್ತದಲ್ಲಿ ನಿರ್ಮಿಸುತ್ತಿರುವ 4 ಅಂತಸ್ತಿನ ಕಟ್ಟಡಕ್ಕೆ ಯಾವುದೇ ಪರವಾನಿಗೆ ಇಲ್ಲ. ಈ ಬಗ್ಗೆ ಮಾಲೀಕರ ಮೇಲೆ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸಭೆಯಲ್ಲಿ ಕೋರಿದರು.
 
ಪಟ್ಟಣ ಪಂಚಾಯ್ತಿಯ  ವಾಣಿಜ್ಯ ಸಂಕೀರ್ಣದ ಬಾಡಿಗೆ ವಸೂಲಿ ಕಳೆದ 6 ತಿಂಗಳಿಂದ ಮಾಡುತ್ತಿಲ್ಲ. ಬಾಡಿಗೆ ವಸೂಲಿ ಮಾಡದಿರುವುದಕ್ಕೆ  ಸರಿಯಾದ ಕಾರಣ ಕೊಡುವಂತೆ ಸದಸ್ಯರು ಆಗ್ರಹಿಸಿದರು.
 
ಪಟ್ಟಣ ಪಂಚಾಯ್ತಿ ವತಿಯಿಂದ ಈಚೆಗೆ ನೀಡಿದ ಆಶ್ರಯ ನಿವೇಶನಗಳಿಗೆ ಹೋಗಲು ದಾರಿ ಸರಿಯಾಗಿ ಇಲ್ಲ. ಕೂಡಲೆ ಪ್ರತಿಯೊಂದು ನಿವೇಶನಕ್ಕೆ ಹೋಗಲು ನಕಾಶೆಯಲ್ಲಿ ದಾರಿ ತೋರಿಸುವಂತೆ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.
 
ಪಟ್ಟಣದ ನೀರಿನ ಸಮಸ್ಯೆ ಇದುವರೆಗೆ ಇಲ್ಲ. ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಮಳೆಯಾಗದಿದ್ದರೆ ಮಾತ್ರ  ನೀರಿನ ಸಮಸ್ಯೆ ಕಾಡಬಹುದು ಎಂದು ಮುಖ್ಯಾಧಿಕಾರಿ ಜಗದೀಶ ನಾಯ್ಕ ಸಭೆಗೆ ತಿಳಿಸಿದರು. ಉಪಾಧ್ಯಕ್ಷೆ ಸುಜಾತ ಉಡುಪ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಪ್ಪ ಸೇರಿದಂತೆ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.