ADVERTISEMENT

ಬಡ್ತಿ ಮೀಸಲಾತಿ ಸರ್ಕಾರದ ದ್ವಿಮುಖ ನೀತಿ: ಈಶ್ವರಪ್ಪ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2017, 10:18 IST
Last Updated 3 ಸೆಪ್ಟೆಂಬರ್ 2017, 10:18 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಶಿವಮೊಗ್ಗ: ಬಡ್ತಿ ಮೀಸಲಾತಿ ವಿಚಾರಲ್ಲಿ ರಾಜ್ಯ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಸುಪ್ರೀಂಕೋರ್ಟ್‌ ತೀರ್ಪಿನ ಕುರಿತು ಮೊದಲು ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.

ಸಿದ್ದರಾಮಯ್ಯ ತಮ್ಮನ್ನು ಅಹಿಂದ ನಾಯಕ ಎಂದು ಬಿಂಬಿಸಿಕೊಳ್ಳುತ್ತಾರೆ. ಮತ್ತೊಂದು ಕಡೆ ಪರಿಶಿಷ್ಟರ ಪರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗುತ್ತಾರೆ. ಸುಗ್ರೀವಾಜ್ಞೆ ಜಾರಿಯಾದರೆ ಅದು ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೂ ತೊಂದರೆ ಆಗುತ್ತದೆ. ಹಾಗಾಗಿ, ಅವರದು ದ್ವಂದ್ವ ನಿಲುವು ಎಂದು ಛೇಡಿಸಿದರು.

ಆರ್.ಬಿ.ತಿಮ್ಮಾಪುರ ರಾಜೀನಾಮೆಗೆ ಆಗ್ರಹ: ನೂತನ ಸಚಿವ ಆರ್.ಬಿ.ತಿಮ್ಮಾಪುರ ಅವರು ಬೆಂಗಳೂರು ವಿಳಾಸ ನೀಡಿ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ನಂತರ ಬಾಗಲಕೋಟೆ ವಿಳಾಸ ನೀಡಿ, ಪ್ರವಾಸದ ಟಿ.ಎ., ಡಿ.ಎ. ಹಲವು ಬಾರಿ ಪಡೆದಿದ್ದಾರೆ. ಇಂಥವರಿಗೆ ಸಚಿವರಾಗಲು ಯಾವ ನೈತಿಕತೆ ಇಲ್ಲ. ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಇದೇ ರೀತಿ ವಿಧಾನ ಪರಿಷತ್‌ನ ಎಂಟು ಸದಸ್ಯರು ಸುಳ್ಳು ವಿಳಾಸ ನೀಡಿ ಸರ್ಕಾರದಿಂದ ಟಿ.ಎ., ಡಿ.ಎ. ಪಡೆದಿರುವುದು ರಾಜ್ಯದ ಇತಿಹಾಸದಲ್ಲೇ ಪ್ರಥಮ. ಇವರ ವಿರುದ್ಧ ಮುಖ್ಯಮಂತ್ರಿ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಬಡ್ತಿ ಮೀಸಲಾತಿ ಸರ್ಕಾರದ ದ್ವಿಮುಖ ನೀತಿ: ಈಶ್ವರಪ್ಪ ಟೀಕೆ ಕಾಗೋಡು ತಿಮ್ಮಪ್ಪ ಸಾಗರಕ್ಕಷ್ಟೇ  ಸಚಿವ. ಕಂದಾಯ  ಇಲಾಖೆಯ ಹೊಣೆ ಹೊತ್ತಿದ್ದರೂ  ರಾಜ್ಯದ ಬೇರೆ  ಭಾಗಗಳಿಗೆ ತಲೆ  ಕೆಡಿಸಿಕೊಳ್ಳುತ್ತಿಲ್ಲ.

ಕೇವಲ ಸಾಗರ ಕ್ಷೇತ್ರದಲ್ಲಿ ಬಡವರಿಗೆ ನಿವೇಶನ, ವಸತಿ, ಹಕ್ಕುಪತ್ರ ದೊರಕಿಸಿಕೊಡುತ್ತಿದ್ದಾರೆ. ರಾಜ್ಯದ ಮಂತ್ರಿಯಾಗಿ ನಗರ ಮತ್ತು ಗ್ರಾಮೀಣ ಪ್ರದೇಶದ ಬಡವರಿಗೆ ನಿವೇಶನ, ವಸತಿ ದೊರಕಿಸಲು ಶ್ರಮಿಸುತ್ತಿಲ್ಲ ಎಂದು ದೂರಿದರು.

ಕೊಳೆಗೇರಿಗಳ ನಿವಾಸಿಗಳ ನಿಯೋಗ ಈಚೆಗೆ ವಸತಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಸಚಿವ ಕೃಷ್ಣಪ್ಪ ಅವರು ಶಿವಮೊಗ್ಗಕ್ಕೆ ಬಂದು ಹಕ್ಕುಪತ್ರ ನೀಡುವ ಭರಸವೆ ನೀಡಿದ್ದರು. ಆದರೆ, ಆರೋಗ್ಯದ ನೆಪ ಹೇಳಿ ಬಂದಿರಲಿಲ್ಲ. ಈಗಲಾದರೂ ಬಂದು ಹಕ್ಕುಪತ್ರ ವಿತರಿಸಬೇಕು ಎಂದು ಆಗ್ರಹಿಸಿದರು.

ಪಿಎಫ್ಐ ನಿಷೇಧಕ್ಕೆ ಆಗ್ರಹ: ರಾಜ್ಯದಲ್ಲಿ ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳನ್ನು ನಿಷೇಧಿಸಬೇಕು. ಶರತ್‌ ಮಡಿವಾಳ ಪ್ರಕರಣದಲ್ಲಿ ಪಿಎಫ್‌ಐ ಜಿಲ್ಲಾ ಘಟಕದ
ಅಧ್ಯಕ್ಷ ಶಾಮೀಲಾಗಿರುವುದು ಸಾಬೀತಾಗಿದೆ. ಆದರೂ, ಸಂಘಟನೆ ನಿಷೇಧಿಸಲು ಹಿಂದೇಟು ಹಾಕಲಾಗುತ್ತಿದೆ ಎಂದು ಅವರು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರುದ್ರೇಗೌಡ, ಕಾರ್ಯದರ್ಶಿ ಡಿ.ಎಸ್.ಅರುಣ್, ಮುಖಂಡರಾದ ಎನ್.ಜೆ.ರಾಜಶೇಖರ್, ಬಿ.ಆರ್‌.ಮಧುಸೂದನ್, ಎಂ.ಶಂಕರ್, ಅನಿತಾ ರವಿಶಂಕರ್, ರತ್ನಾಕರ ಶೆಣೈ, ಹಿರಣ್ಣಯ್ಯ, ಕೆ.ವಿ.ಅಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.