ADVERTISEMENT

ಬಾಗಿಲು ತೆರೆದ ಆಸ್ಪತ್ರೆಗಳು; ಎಲ್ಲ ವೈದ್ಯರೂ ರಜೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 9:20 IST
Last Updated 18 ನವೆಂಬರ್ 2017, 9:20 IST

ಶಿವಮೊಗ್ಗ: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ ವಿರೋಧಿಸಿ ವೈದ್ಯರು ನಡೆಸುತ್ತಿರುವ ಮುಷ್ಕರ ಶುಕ್ರವಾರವೂ ಮುಂದುವರೆದಿದೆ. ಬಹುತೇಕ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ತೆರೆಯಲಾಗಿತ್ತು. ಆದರೆ, ವೈದ್ಯರು ರಜೆಯಲ್ಲಿ ಇರುತ್ತಾರೆ ಎಂಬ ಫಲಕಗಳು ಎಲ್ಲ ಆಸ್ಪತ್ರೆಗಳ ಮುಂದೆ ತೂಗುಹಾಕಲಾಗಿತ್ತು. ಆ ಮೂಲಕ ಪರೋಕ್ಷವಾಗಿ ರೋಗಿಗಳ ತಪಾಸಣೆ ನಿರಾಕರಿಸಲಾಗಿತ್ತು.

ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ ತೆರೆದಿರುತ್ತದೆ ಎಂದು ಬಂದಿದ್ದ ಜನಸಾಮಾನ್ಯರು  ಅಗತ್ಯ ವೈದ್ಯಕೀಯ ಸೇವೆ ಲಭಿಸದೇ ಪರದಾಡಿದರು. ಈಗಾಗಲೇ ಬೆಂಗಳೂರಿನ ವೈದ್ಯರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜಿಲ್ಲೆಯ ವೈದ್ಯರೂ ಸಹ ಇದೇ ದಾರಿ ಹಿಡಿಯಬಹುದು ಎಂದು ಭಾವಿಸಲಾಗಿತ್ತು. ಆದರೆ, ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಕ್ಲಿನಿಕ್‌ಗಳು ಶುಕ್ರವಾರವೂ ಬಾಗಿಲು ತೆರೆಯಲಿಲ್ಲ. ಕೆಲವೆಡೆ ತೆರೆದಿದ್ದರೂ ಚಿಕಿತ್ಸೆ ಲಭ್ಯವಿರಲಿಲ್ಲ.

ಇತ್ತ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಶೇ 30 ರಿಂದ 40 ರಷ್ಟು ಹೆಚ್ಚಳವಾಗಿತ್ತು. ಖಾಸಗಿ ವೈದ್ಯರ ಮುಷ್ಕರ ಹಿನ್ನಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಕ್ರಮ ತೆಗೆದುಕೊಂಡಿದರೂ ಸಹ ರೋಗಿಗಳ ಪ್ರಮಾಣ ಹೆಚ್ಚಿರುವುದರಿಂದ ಗಂಟಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ADVERTISEMENT

ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಎಂಟು ಸಾವಿರಕ್ಕೂ ಹೆಚ್ಚು ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಶುಕ್ರವಾರ ಕಡೆ ಕಾರ್ತೀಕ ಇರುವುದರಿಂದ ಗ್ರಾಮೀಣ ಭಾಗದಿಂದ ಬರುವ ರೋಗಿಗಳ ಸಂಖ್ಯೆ ಕಡಿಮೆಯಿದ್ದರೂ, ಆಸ್ಪತ್ರೆ ತುಂಬಿ ತುಳುಕುತ್ತಿತ್ತು.

‘ಖಾಸಗಿ ಆಸ್ಪತ್ರೆಗಳ ಮುಷ್ಕರದ ಕಾರಣ ಸೂಕ್ತ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವೈದ್ಯರಿಗೆ ಮತ್ತು ಇತರೆ ಸಿಬ್ಬಂದಿಗೆ ರಜೆ ನೀಡದೆ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. ಸ್ವಲ್ಪ ತಡವಾದರೂ ಬರುವ ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಹಾಸಿಗೆಗೆಳ ವ್ಯವಸ್ಥೆ ಮಾಡಲಾಗಿದೆ. ಒಂದಿಷ್ಟು ಒತ್ತಡ ಹೆಚ್ಚಿದೆ. ಅದನ್ನು ನಿಭಾಯಿಸಿಕೊಂಡು ಹೋಗುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಸುಶೀಲ್‌ ಕುಮಾರ್.

ವಿವಿಧ ಸಂಘಟನೆಗಳ ಪ್ರತಿಭಟನೆ: ಕೆಪಿಎಂಇ ಕಾಯ್ದೆ ತಿದ್ದುಪಡಿ ಜಾರಿಗೆ ಒತ್ತಾಯಿಸಿ ಜಿಲ್ಲೆಯ ವಿವಿಧ ಸಂಘಟನೆಗಳು, ಸಂಘ–ಸಂಸ್ಥೆಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಆಟೊ ಚಾಲಕರ ಮತ್ತು ಮಾಲೀಕರ ಸಂಘ:  ಕಾಯ್ದೆ ಜಾರಿಗೆ ಒತ್ತಾಯಿಸಿ ಹಾಗೂ ಆರೋಗ್ಯ ಇಲಾಖೆ ಸಚಿವ ರಮೇಶ್ ಕುಮಾರ್ ಅವರನ್ನು ಬೆಂಬಲಿಸಿ ನಗರದ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ಮಜೀಬುಲ್ಲ, ಮಂಜಣ್ಣ, ಪ್ಯಾರೆಜಾನ್, ಬಾಲಾಜಿ, ಮಹಮ್ಮದ್ ಆರೀಫುಲ್ಲಾ, ಇರ್ಫಾನ್, ತಬರೇಜ್, ಅಜ್ಗರ್, ಸಮೀವುಲ್ಲಾ ಪ್ರತಿಬಟನೆಯ ನೇತೃತ್ವ ವಹಿಸಿದ್ದರು.

ಕನ್ನಡಿಗರ ಕಾರ್ಮಿಕರ ರಕ್ಷಣಾ ವೇದಿಕೆ: ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ಜಾರಿಗೆ ಒತ್ತಾಯಿಸಿ ಕನ್ನಡಿಗರ ಕಾರ್ಮಿಕರ ರಕ್ಷಣಾ ವೇದಿಕೆ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ವೇದಿಕೆಯ ಮಂಜುನಾಥ್, ನಿತಿನ್ ರೆಡ್ಡಿ, ಬಾಬು, ಜಗದೀಶ್, ರಾಕೇಶ್, ಬಾಷಾ, ಮಾರುತಿ, ಲೋಕೇಶ್, ವೈಷ್ಣವಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕರ್ನಾಟಕ ತುಂಗಾ ರಕ್ಷಣಾ ವೇದಿಕೆ: ಕಾಯ್ದೆ ಶೀಘ್ರ ಜಾರಿಗೊಳಿಸಬೇಕು ಎಂದು ಕರ್ನಾಟಕ ತುಂಗಾ ರಕ್ಷಣಾ ವೇದಿಕೆ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ವೇದಿಕೆಯ ಅಧ್ಯಕ್ಷ ಶಂಕರ್ ನಾಗ್, ಯೋಗೀಶ್, ರಮೇಶ್ ಮತ್ತಿತರರು ಮನವಿ ಸಲ್ಲಿಸಿದರು. ವಿದ್ಯಾರ್ಥಿ ಸಂಘಟನೆ: ಕಾಯ್ದೆ ಜಾರಿಗೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆ ಸದಸ್ಯರು ಮುಖಂಡ ವಿನಯ್ ರಾಜಾವತ್ ಪ್ರತಿಭಟನೆ ನಡೆಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.