ADVERTISEMENT

ಬಿಜೆಪಿ ಸೇರುವಂತೆ ಕಾರ್ಯಕರ್ತರ ಒತ್ತಾಯ

ಅಭಿಮಾನಿಗಳ ಆಗ್ರಹಕ್ಕೆ ಸ್ಪಂದಿಸುವ ಸೂಚನೆ ನೀಡಿದ ಕುಮಾರ್ ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 5:31 IST
Last Updated 16 ಫೆಬ್ರುವರಿ 2017, 5:31 IST
ಸೊರಬ: ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಭೆಯಲ್ಲಿ, ಕಾಂಗ್ರೆಸ್ ತೊರೆದು ಬಿಜೆಪಿ ಸೇರುವಂತೆ ಕುಮಾರ್ ಬಂಗಾರಪ್ಪ ಅವರನ್ನು ನೂರಾರು ಮುಖಂಡರು ಒತ್ತಾಯಿಸಿದರು.
 
ರಾಜಕೀಯ ಭವಿಷ್ಯವನ್ನು ಸಮತೋಲನದಿಂದ ಕಾಪಾಡಿಕೊಳ್ಳುವ ಸಂಧಿಕಾಲದಲ್ಲಿ ತಾವಿದ್ದು, ತಮ್ಮ ಮುಂದಿನ ನಿರ್ಧಾರವನ್ನು ಶೀಘ್ರದಲ್ಲಿಯೇ ಪ್ರಕಟಿಸುವುದಾಗಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಪ್ರತಿಕ್ರಿಯಿಸಿದರು. ಬುಧವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಹಾಗೂ ಮುಖಂಡರ ಸಭೆ ಈ ಒತ್ತಾಯ ಹಾಗೂ ಪ್ರತಿಕ್ರಿಯೆಗೆ ಸಾಕ್ಷಿಯಾಯಿತು. 
 
‘ಪಕ್ಷ ಬದಲಿಸುವ ಬಗ್ಗೆ ಕಾರ್ಯಕರ್ತರಿಂದ ಬರುತ್ತಿರುವ ಒತ್ತಡ ಹಾಗೂ ಭಾವನೆಗಳಿಗೆ ಬೆಲೆ ಕೊಡುವೆ. ಆದರೆ ದಶಕಗಳ ಕಾಲ ಒಂದು ಪಕ್ಷದ ತತ್ವ ಸಿದ್ಧಾಂತ ಒಪ್ಪಿ ರಾಜಕೀಯ ಮಾಡಿರುವ ನಾನು ಮತ್ತೊಂದು ಪಕ್ಷ ಸೇರುವಾಗ ಭವಿಷ್ಯದ ಬಗ್ಗೆ ಯೋಚಿಸಬೇಕು. ರಾಜಕಾರಣ ತಂದೆ, ಮಕ್ಕಳನ್ನೇ ಒಟ್ಟಿಗಿರಲು ಬಿಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ಹಿತೈಷಿಗಳ ಜೊತೆ ಚರ್ಚಿಸಿ ಶೀಘ್ರದಲ್ಲಿಯೇ ಬಿಜೆಪಿ ಸೇರುವ ಬಗ್ಗೆ ಪ್ರಕಟಿಸುವೆ’ ಎಂದು ತಿಳಿಸಿದರು.
 
ಎಸ್.ಬಂಗಾರಪ್ಪ, ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದ ದೇವರಾಜು ಅರಸು, ನಿಜಲಿಂಗಪ್ಪ, ಗುಂಡೂರಾವ್, ವೀರೇಂದ್ರ ಪಾಟೀಲ್ ಕಾಂಗ್ರೆಸ್ ಬಿಟ್ಟು ಹೋಗಿದ್ದರು. ಕಾಂಗ್ರೆಸ್‌ನಲ್ಲಿ ಉಸಿರು ಕಟ್ಟಿಸುವ ವಾತಾವರಣವಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನಿಷ್ಠಾವಂತರಿಗೆ ಬೆಲೆಯಿಲ್ಲ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪಕ್ಷ ಸಂಘಟಿಸುವಲ್ಲಿ ವಿಫಲವಾಗಿದ್ದಾರೆ ಎಂದು ದೂರಿದರು.
ನ್ಯಾಯಬದ್ಧವಾಗಿ ಕೆಲಸ ನಿರ್ವಹಿಸಿದರೆ ಯಾವ ಪಕ್ಷದಲ್ಲಿದ್ದರೂ ನೆಲೆ, ಬೆಲೆ ನಿಶ್ಚಿತ ಎಂದು ಅವರು ಹೇಳಿದ್ದನ್ನು ಕೇಳಿ ಬಿಜೆಪಿ ಸೇರುವ ಪರೋಕ್ಷ ಇಂಗಿತ ಅದು ಎಂದೇ ಅಲ್ಲಿದ್ದ ಕೆಲವರು ವಿಶ್ಲೇಷಿಸಿದರು. 
 
ಕಾಂಗ್ರೆಸ್ ಧೋರಣೆ  ಹಿರಿಯ ಮುಖಂಡರಾದ ಎಸ್.ಎಂ.ಕೃಷ್ಣ, ಜಾಫರ್ ಷರೀಫ್ ಅವರಿಗೆ  ಮುಳ್ಳಾಗಿದೆ. ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ನಾಯಕರ ನಡವಳಿಕೆಯ ಬಗ್ಗೆ ಸೋನಿಯಾ ಗಾಂಧಿ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
 
ಎಂ.ಡಿ.ಉಮೇಶ್, ಮಲ್ಲಿಕಾರ್ಜುನ ವೃತ್ತಿಕೊಪ್ಪ, ತಬಲಿ ಬಂಗಾರಪ್ಪ, ಬಸವರಾಜ್ ಜಂಗಿನಕೊಪ್ಪ, ಲಲಿತಾ, ಸೋಮಶೇಖರ್, ರಮೇಶ್ ಇಕ್ಕೇರಿ, ಅಕ್ಬರ್ ಸಾಬ್, ಮಂಜುಳಾ, ಟಿ.ಆರ್.ಸುರೇಶ್, ಚೌಟಿ ಚಂದ್ರಣ್ಣ, ಕಲ್ಲಂಬಿ ಹಿರಿಯಣ್ಣ, ಶಬ್ಬೀರ್, ಮಾಕೊಪ್ಪ ಪಕ್ಕೀರಪ್ಪ, ನಾಗರಾಜ್ ಚಿಕ್ಕಸವಿ, ಯೂಸಫ್ ಸಾಬ್, ವಿಶ್ವನಾಥ್,ಗಿರೀಶ್ ಕುಬಟೂರು, ಮೆಹಬೂಬ್ ಸೇರಿದಂತೆ ಸಾಗರ ಹೋಬಳಿಯ ತಾಳಗುಪ್ಪ ಭಾಗದ ಮುಖಂಡರು ಹಾಜರಿದ್ದರು.
 
ಬಗರ್‌ಹುಕುಂ ಹೆಸರಿನಲ್ಲಿ ಬಡವರ ಶೋಷಣೆ:

ತಾಲ್ಲೂಕಿನ ಅಭಿವೃದ್ಧಿಯ ದೃಷ್ಟಿಯಿಂದ ಯಾವುದೇ ಸಂದರ್ಭದಲ್ಲಾದರೂ ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಸಿದ್ಧನಿದ್ದೇನೆ. ತಾಲ್ಲೂಕಿನಲ್ಲಿ ಬಗರ್‌ಹುಕುಂ ಹೆಸರಿನಲ್ಲಿ ಬಡವರ ಶೋಷಣೆ ಮಾಡಲಾಗುತ್ತಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರು ಕುಮ್ಮಕ್ಕು ನೀಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಕಳಂಕಿತರನ್ನು ಹಾಗೂ ಭ್ರಷ್ಟಾಚಾರವನ್ನು ಮಟ್ಟಹಾಕಲು ಪಣ ತೊಟ್ಟಿದ್ದು, ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಬೇರೆ ಕ್ಷೇತ್ರದಲ್ಲಿ  ಸ್ಪರ್ಧಿಸುವುದಿಲ್ಲ ಎಂದು ಕುಮಾರ್ ಬಂಗಾರಪ್ಪ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.