ADVERTISEMENT

ಬ್ಯಾರೇಜ್ ನಿರ್ಮಾಣಕ್ಕೆ ಶೀಘ್ರವೇ ಚಾಲನೆ

ದಂಡಾವತಿ ಯೋಜನೆಗೆ ಪರ್ಯಾಯವಾಗಿ ಜಂಗಿನಕೊಪ್ಪ ಗ್ರಾಮದಲ್ಲಿ ಕಾಮಗಾರಿ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 6:09 IST
Last Updated 20 ಮಾರ್ಚ್ 2017, 6:09 IST
ಸೊರಬ ತಾಲ್ಲೂಕಿನ ನಿಸರಾಣಿ ಗ್ರಾಮದಲ್ಲಿ ₹ 1 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಮಾಡಿದ ರಸ್ತೆಯನ್ನು ಭಾನುವಾರ ಶಾಸಕ ಮಧು ಬಂಗಾರಪ್ಪ ಉದ್ಘಾಟಿಸಿ ಮಾತನಾಡಿದರು.
ಸೊರಬ ತಾಲ್ಲೂಕಿನ ನಿಸರಾಣಿ ಗ್ರಾಮದಲ್ಲಿ ₹ 1 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಮಾಡಿದ ರಸ್ತೆಯನ್ನು ಭಾನುವಾರ ಶಾಸಕ ಮಧು ಬಂಗಾರಪ್ಪ ಉದ್ಘಾಟಿಸಿ ಮಾತನಾಡಿದರು.   

ಸೊರಬ: ‘ಉದ್ದೇಶಿತ ದಂಡಾವತಿ ಯೋಜನೆಗೆ ಪರ್ಯಾಯವಾಗಿ ತಾಲ್ಲೂಕಿನ ಜಂಗಿನಕೊಪ್ಪ ಗ್ರಾಮದ ಬಳಿ ಬ್ಯಾರೇಜ್ ನಿರ್ಮಾಣಕ್ಕೆ ಸದ್ಯದಲ್ಲಿಯೇ ಚಾಲನೆ ದೊರೆಯಲಿದೆ’ ಎಂದು ಶಾಸಕ ಮಧು ಬಂಗಾರಪ್ಪ ಹೇಳಿದರು.

ತಾಲ್ಲೂಕಿನ ನಿಸರಾಣಿ ಗ್ರಾಮದಿಂದ ಕಿರಗುಣಸೆ ಗ್ರಾಮದವರೆಗೆ ₹ 1ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಡಾಂಬರೀಕರಣವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಎಚ್.ಹಾಲಪ್ಪ ಅವರು ಬಂಗಾರಪ್ಪ ಅವರ ಆಶೀರ್ವಾದದಿಂದ ಅಧಿಕಾರ ಪಡೆದರು. ಆದರೆ, ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಚಿಂತಿಸುವುದನ್ನು ಬಿಟ್ಟು ಅಧಿಕಾರ ದುರುಪಯೋಗ ಪಡಿಸಿಕೊಂಡರು. ಕುಮಾರ್ ಬಂಗಾರಪ್ಪ ಕಾಂಗ್ರೆಸ್‌ನಲ್ಲಿದ್ದಾಗ ತಾಲ್ಲೂಕಿನ ದಂಡಾವತಿ ಯೋಜನೆಯನ್ನು ವಿರೋಧಿಸುತ್ತಿದ್ದರು.

ಈಗ ಬಿಜೆಪಿ ಸೇರಿದ ನಂತರ ಯೋಜನೆ ಅನುಷ್ಠಾನಗೊಳ್ಳಲು ತಮ್ಮ ಸಹಮತ ವ್ಯಕ್ತಪಡಿಸಿದ್ದಾರೆ. ಇಂತಹ ಅವಕಾಶವಾದಿ ರಾಜಕಾರಣಕ್ಕೆ ತಾಲ್ಲೂಕಿನ ಜನರನ್ನು ಬಳಸಿಕೊಳ್ಳಲು ಬಿಡುವುದಿಲ್ಲ’ ಎಂದು ಹೇಳಿದರು.

‘ತಾಲ್ಲೂಕಿನ ಜನರಲ್ಲಿ ನಮ್ಮ ತಂದೆ ಬಂಗಾರಪ್ಪ ಅವರನ್ನು ಕಾಣುತ್ತಿದ್ದೇನೆ. ತಂದೆ ಹೆಸರನ್ನು ಇಬ್ಬರು ಮಕ್ಕಳೂ ಇಟ್ಟುಕೊಂಡಿದ್ದೇವೆ ನಿಜ. ಆದರೆ, ನಮ್ಮ ತಂದೆಯ ಹೆಸರು ರಾಜಕೀಯ ಕ್ಷೇತ್ರದಲ್ಲಿ ಉತ್ತುಂಗಕ್ಕೆ ಯಾರಿಗೆ ಕೊಂಡೊಯ್ಯುವಲ್ಲಿ ಅರ್ಹತೆ ಇದೆ ಎನ್ನುವುದನ್ನು ಜನರೇ ನಿರ್ಧರಿಸುತ್ತಾರೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಭೀಕರ ಬರಗಾಲದಿಂದ ರೈತ ಸಮುದಾಯ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ರೈತರ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡುವುದನ್ನು ಬಿಟ್ಟು, ಬಿಜೆಪಿ ಸದಸ್ಯರು ಡೈರಿ ವಿಚಾರದಲ್ಲಿ ಕಲಾಪವನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಅವರು ಟೀಕಿಸಿದರು.

ನಿಸರಾಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶರಾವತಿ ರಮೇಶ್ ಅಭೆಯ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನಯನಾ ಶ್ರೀಪಾದ್ ಹೆಗಡೆ, ಉಪಾಧ್ಯಕ್ಷ ಸುರೇಶ್, ಸದಸ್ಯರಾದ ಅಂಜಲಿ, ಜ್ಯೋತಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶಿವಲಿಂಗ ಗೌಡ್ರು, ತಾರಾ ಶಿವಾನಂದಪ್ಪ, ರಾಜೇಶ್ವರಿ ಗಣಪತಿ, ಗ್ರಾಮ ಪಂಚಾಯ್ತಿ ಸದಸ್ಯರಾದ ರಾಮಪ್ಪ, ಭಾಗೀರಥಿ, ಗಣಪತಿ, ಪದ್ಮಾಶ್ರೀ, ಪ್ರಕಾಶ್ ಹಳೇಸೊರಬ, ಶಾಂತಮ್ಮ ಉಳವಿ, ಜಯಶೀಲಗೌಡ್ರು, ಎಂ.ಡಿ.ಶೇಖರ್ ತವನಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.