ADVERTISEMENT

ಭೂಮಿ ಹಕ್ಕಿಗಾಗಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2017, 6:22 IST
Last Updated 17 ನವೆಂಬರ್ 2017, 6:22 IST
ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂಮಿಯ ಹಕ್ಕು ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತರು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂಮಿಯ ಹಕ್ಕು ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತರು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.   

ಶಿವಮೊಗ್ಗ : ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಭೂಮಿಯ ಹಕ್ಕು ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ  ರೈತರು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಸುಮಾರು 50 ಲಕ್ಷ ರೈತ ಕುಟುಂಬಗಳು ಹಲವು ವರ್ಷಗಳಿಂದ ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಇದರಲ್ಲಿಯೇ ಅನೇಕರು ಆಹಾರ ಮತ್ತು ಉದ್ಯೋಗ ಕಂಡುಕೊಂಡಿದ್ದಾರೆ. ಆದರೆ ಇವರೆಲ್ಲರಿಗೂ ಭೂಮಿಯ ಹಕ್ಕು ಸಿಗದೇ ಇಂದಿಗೂ ಅತಂತ್ರರಾಗಬೇಕಾಗಿದೆ ಎಂದು ದೂರಿದರು.

ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಬಡ ರೈತರನ್ನು ಯಾವುದೇ ಕಾರಣಕ್ಕೂ ಸಾಗುವಳಿ ಭೂಮಿಯಿಂದ ಒಕ್ಕಲೆಬ್ಬಿಸಬಾರದು. ನಮೂನೆ 50 ಹಾಗೂ 53ರಲ್ಲಿ ಅರ್ಜಿ ಸಲ್ಲಿಸಿರುವ ಹಾಗೂ ಭೂಮಿಯ ಹಕ್ಕನ್ನು ಪಡೆಯಲು ಅರ್ಹರಾಗಿರುವ ಎಲ್ಲ ಫಲಾನುಭವಿಗಳಿಗೂ ಭೂಮಿ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.

ADVERTISEMENT

ಅವೈಜ್ಞಾನಿಕವಾಗಿ ಕಂದಾಯ ಭೂಮಿ, ಗೋಮಾಳ, ದನಗಳ ಮುಫತ್ತು, ಸೊಪ್ಪಿನ ಬೆಟ್ಟ ಈ ಭೂಮಿಗಳನ್ನು ಅರಣ್ಯ ಇಂಡೀಕರಣದಿಂದ ಹೊರತಂದು ಬಡ ರೈತರಿಗೆ ಭೂಮಿಯ ಹಕ್ಕನ್ನು ನೀಡಬೇಕು. ಸರಳ ಷರತ್ತುಗಳನ್ನು ವಿಧಿಸಿ ರೈತರಿಗೆ ಭೂಮಿ ಹಕ್ಕು ಒದಗಿಸಬೇಕು. 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ ತಕ್ಷಣವೇ ಹಕ್ಕು ಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.

ಅರಣ್ಯ ಹಕ್ಕು ಸಮಿತಿಯಲ್ಲಿ ಅರ್ಜಿ ಸಲ್ಲಿಸಿದ್ದ ಪರಿಶಿಷ್ಟ ಜಾತಿ, ಬುಡಕಟ್ಟು ಹಾಗೂ ಪಾರಂಪರಿಕ ಅರಣ್ಯ ವಾಸಿ ಬಡ ರೈತರಿಗೆ ಹಕ್ಕುಪತ್ರ, ಖಾತೆ ಹಾಗೂ ಪಹಣಿ ವಿತರಿಸಬೇಕು. ಬಗರ್ ಹುಕುಂ, ಅರಣ್ಯ ಭೂಮಿ ಸಾಗುವಳಿದಾರರ ಮೇಲೆ ಹೂಡಿರುವ ಎಲ್ಲ ಮೊಕದ್ದಮೆಗಳನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ. ಗಂಗಾಧರ್, ಉಮಾಪತಿಯಪ್ಪ, ವೀರೇಶ್, ಶಿವಪ್ಪ, ರಂಗಪ್ಪ, ಹಾಲೇಶಪ್ಪ , ಜಯಪ್ಪ, ವಿಜಯಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.