ADVERTISEMENT

ಮತೀಯವಾದ ವಿರುದ್ಧ ವೈಚಾರಿಕ ಆಂದೋಲನ

ಕಲಬುರ್ಗಿ ಹತ್ಯೆ ವಿರುದ್ಧ ವಿಚಾರ ಕಹಳೆ ಮೊಳಗಿಸಿದ ‘ಹತ್ಯಾ ವಿರೋಧಿ ಹೋರಾಟ ವೇದಿಕೆ’

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2015, 8:30 IST
Last Updated 10 ಅಕ್ಟೋಬರ್ 2015, 8:30 IST
ಶಿವಮೊಗ್ಗದಲ್ಲಿ ಶುಕ್ರವಾರ ಡಾ.ಎಂ.ಎಂ.ಕಲಬುರ್ಗಿ ಹತ್ಯಾ ವಿರೋಧಿ ಹೋರಾಟ ವೇದಿಕೆ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯನ್ನು ರೈತ ಮುಖಂಡ ಕಡಿದಾಳು ಶಾಮಣ್ಣ ಕೊಳಲು ನುಡಿಸುವ ಮೂಲಕ ಉದ್ಘಾಟಿಸಿದರು (ಎಡಚಿತ್ರ).  ಡಾ.ಎಂ.ಎಂ.ಕಲಬುರ್ಗಿ ಹತ್ಯಾ ವಿರೋಧಿ ಹೋರಾಟ ವೇದಿಕೆ ಸದಸ್ಯರು ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.
ಶಿವಮೊಗ್ಗದಲ್ಲಿ ಶುಕ್ರವಾರ ಡಾ.ಎಂ.ಎಂ.ಕಲಬುರ್ಗಿ ಹತ್ಯಾ ವಿರೋಧಿ ಹೋರಾಟ ವೇದಿಕೆ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯನ್ನು ರೈತ ಮುಖಂಡ ಕಡಿದಾಳು ಶಾಮಣ್ಣ ಕೊಳಲು ನುಡಿಸುವ ಮೂಲಕ ಉದ್ಘಾಟಿಸಿದರು (ಎಡಚಿತ್ರ). ಡಾ.ಎಂ.ಎಂ.ಕಲಬುರ್ಗಿ ಹತ್ಯಾ ವಿರೋಧಿ ಹೋರಾಟ ವೇದಿಕೆ ಸದಸ್ಯರು ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.   

ಶಿವಮೊಗ್ಗ: ಮತೀಯವಾದಕ್ಕೆ ಪ್ರಾಣ ತೆರುವ ಮೂಲಕ ಡಾ.ಎಂ.ಎಂ.ಕಲಬುರ್ಗಿ ಅವರು ವೈಚಾರಿಕ ಆಂದೋಲನಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ವಿಚಾರವಾದಿ ಡಾ.ಸಿದ್ದನಗೌಡ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಡಾ.ಎಂ.ಎಂ.ಕಲಬುರ್ಗಿ ಹತ್ಯಾ ವಿರೋಧಿ ಹೋರಾಟ ವೇದಿಕೆ ನಗರದ ಅಂಬೇಡ್ಕರ್‌ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ‘ಕಲಬುರ್ಗಿ ಹತ್ಯೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ’ ವಿಷಯ ಕುರಿತು ಅವರು ಮಾತನಾಡಿದರು. ಮೌಢ್ಯ ವಿರೋಧಿಸುತ್ತಲೇ ಸಂಶೋಧನೆಗೆ ಸತ್ಯದ ಆಯಾಮ ದೊರಕಿಸಿಕೊಟ್ಟವರು ಕಲಬುರ್ಗಿ. ಸತ್ಯದ ಪ್ರತಿಪಾದನೆಗಾಗಿಯೇ ಜೀವ ತೆತ್ತಿದ್ದಾರೆ. ಈಗ ಹತ್ಯೆಯ ಹಿಂದಿನ ಶಕ್ತಿ ಯಾವುದು ಎಂದು ಗೊತ್ತಾಗಿದೆ. ಆದರೆ, ಹತ್ಯೆ ಮಾಡಿದ ವ್ಯಕ್ತಿ ಪತ್ತೆಯಾಗಬೇಕಿದೆ ಎಂದರು.

ಮತೀಯ ಶಕ್ತಿಗಳು ಇಂದು ವಿಸ್ತಾರವಾಗಿ ಹರಡಿಕೊಂಡಿವೆ. ಮಹಾರಾಷ್ಟ್ರದ ದಾಬೋಲ್‌ಕರ್‌, ಪನ್ಸಾರೆ ಹತ್ಯೆ, ಕಲಬುರ್ಗಿ ಹತ್ಯೆಯ ಹಿಂದೆ ಇದೇ ಶಕ್ತಿಗಳು ಕೆಲಸ ಮಾಡಿವೆ. ಆರೋಪಿಗಳು ಯಾರೇ ಇರಲಿ, ಶಕ್ತಿ ಮಾತ್ರ ಮತೀಯವಾದವೆ. ಗಾಂಧಿ ಹತ್ಯೆ ಮಾಡಿದ್ದ ವ್ಯಕ್ತಿ ಗೊಡ್ಸೆಯಾದರೂ, ಅದರ ಹಿಂದಿನ ಶಕ್ತಿ ಯಾರು ಎನ್ನುವುದು ಬಿಡಿಸಿಹೇಳಬೇಕಿಲ್ಲ. ಆದರೆ, ಅಂದು ತಾಂತ್ರಿಕ ಕಾರಣಗಳಿಂದ ಹಿಂದೂ ಮೂಲಭೂತವಾದಿ ಸಂಘಟನೆಗಳ ಹೆಸರು ಕೈಬಿಡಲಾಯಿತು. ಇಂತಹ ಘಟನೆಗಳಲ್ಲಿ ತಾಂತ್ರಿಕ ಅಂಶಗಳಿಗಿಂತ ತಾರ್ಕಿಕ ವಿಷಯಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸಿದರು.

ಮೌಢ್ಯಗಳ ನಿಷೇಧ ಎಂದರೆ ಧಾರ್ಮಿಕ ಆಚರಣೆಗಳಿಗೆ ಕಡಿವಾಣ ಹಾಕುವುದಲ್ಲ. ಬದಲಿಗೆ ಧರ್ಮ, ದೇವರ ಹೆಸರಿನಲ್ಲಿ ಇನ್ನೊಬ್ಬರನ್ನು ವಂಚಿಸುವ, ತಪ್ಪು ದಾರಿಗೆ ಎಳೆಯುವ ವಂಚಕರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸುವುದು. ಹಾಗಾಗಿ, ಮೌಢ್ಯ ನಿಷೇಧ ಕಾನೂನು ಜಾರಿಗೆ ತರಬೇಕು. ಮತಾಂಧ ಶಕ್ತಿ ಬೆಳೆಯಲು ಬಿಟ್ಟರೆ ಪ್ರಜಾಪ್ರಭುತ್ವವನ್ನೇ  ನುಂಗಿಹಾಕಿಬಿಡುತ್ತವೆ. ಹತ್ಯೆಯಂತಹ ದುಷ್ಕೃತ್ಯಕ್ಕೆ ಮುಂದಾಗುವ ಮತೀಯ ಶಕ್ತಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಜೀವ ವಿರೋಧಿ ಶಕ್ತಿಗಳು ಬೆಳೆಯದಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಹತ್ಯೆ ನಡೆದ ನಂತರ ಕೆಲವರು ಸಂಭ್ರಮಿಸಿದ್ದಾರೆ. ಇನ್ನೂ ಕೆಲವರು ವೈಭವೀಕರಿಸಿದ್ದಾರೆ. ಇದು ಕೂಡ ಅಪಾಯಕಾರಿ ಬೆಳವಣಿಗೆ. ಡಾ.ಕಲಬುರ್ಗಿ ತಮ್ಮ ಸಂಶೋಧನೆಗಳಲ್ಲಿ ತಪ್ಪು ಮಾಡಿರಬಹುದು. ಆದರೆ, ಎಂದೂ ಸುಳ್ಳು ಹೇಳಿಲ್ಲ. ಬಸವಣ್ಣನನ್ನು ಲಿಂಗಾಯಿತರು ಕೊಂದರು ಎಂದು ನೇರವಾಗಿ ಹೇಳಿದ್ದರು. ಚನ್ನಬಸವಣ್ಣನ ವಿಷಯದಲ್ಲಿ ‘ಪ್ರಸಾದಕ್ಕೆ ಮಕ್ಕಳಾ ಗುವುದಿಲ್ಲ’ ಎಂದು ಹೇಳಿ ಮಠಾ ಧೀಶರರ ಪ್ರತಿರೋಧ ಕಟ್ಟಿಕೊಂಡಿರು. ಮತಾಂಧ ಶಕ್ತಿಗಳ ಕೆಂಗಣ್ಣಿಗೆ ಗುರಿಯಾ ದವರು ಎಂದು ಇತಿಹಾಸ ಮೆಲುಕು ಹಾಕಿದರು.

ಕೊಳಲು ನುಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ರೈತ ಮುಖಂಡ ಕಡಿದಾಳು ಶಾಮಣ್ಣ ಮಾತನಾಡಿ, ಹತ್ಯೆ ಖಂಡನೀಯ. ಶೀಘ್ರ ಆರೋಪಿಗಳನ್ನು  ಬಂಧಿಸಬೇಕು. ಪ್ರಗತಿಪರ ಸಂಘಟನೆಗಳು ಮತ್ತಷ್ಟು ಒಟ್ಟಾಗಬೇಕು ಎಂದರು. ‘ಸಂಶೋಧನೆ ಮತ್ತು  ಸಂಶೋಧಕರ ಮುಂದಿರುವ ಸವಾಲುಗಳು’ ವಿಷಯ ಕುರಿತು ಮಾತನಾಡಿದ ಕುವೆಂಪು ವಿವಿ  ಪ್ರಾಧ್ಯಾಪಕ ಡಾ.ರಾಜೇಂದ್ರ ಚೆನ್ನಿ, ಸಂಶೋಧನೆಯ ಆರಂಭದಲ್ಲೇ ಕಲಬುರ್ಗಿ ಅವರು ಸತ್ಯಶೋಧನೆಯ ಹಿಂದಿರುವ ಅಪಾಯದ ಅರಿವು ಹೊಂದಿದ್ದರು. ಇಡುವ ಪ್ರತಿ ಹೆಜ್ಜೆಯ ಕೆಳಗೂ ಅಗ್ನಿ ಇರುತ್ತದೆ ಎಂದು ಪ್ರತಿಪಾದಿಸುತ್ತಿದ್ದರು. ಅವರು ಬರೆದ 4 ಸಾವಿರ ಪುಟಗಳಲ್ಲಿ ಎಲ್ಲಿಯೂ ಇನ್ನೊಬ್ಬರ ಅವಹೇಳನ ಮಾಡುವ ಪದಗಳಿಲ್ಲ. ಆದರೆ, ಮಾಧ್ಯಮಗಳು ಅವರನ್ನು ವಿವಾದದಲ್ಲಿ ಸಿಲುಕಿಸಿದವು ಎಂದು ವಿಷಾದಿಸಿದರು.

12ನೇ ಶತಮಾನದಲ್ಲೇ ಸಮಾನತೆಯ ಪರ ಕ್ರಾಂತಿ ಮೊಳಗಿಸಿದ ಶರಣರ ತತ್ವಗಳು ಮುಂದೆ ಹೇಗೆ ಜಾತಿ ಚೌಕಟ್ಟಿನ ಒಳಗೆ ಸಿಲುಕಿದವು ಎನ್ನುವ ಸತ್ಯ ಹೊರಹಾಕಿದರು. ಇದಕ್ಕಾಗಿ ಹಲವರ ವಿರೋಧ ಕಟ್ಟಿಕೊಂಡರು ಎಂದರು. ಅಧ್ಯಕ್ಷತೆ ವಹಿಸಿದ್ದ ಸಾಹಿತಿ ನಾ.ಡಿಸೋಜಾ ಮಾತನಾಡಿ, ಪ್ರಗತಿ ಸಾಧಿಸಿರುವ ಸಮಾಜ, ಹತ್ಯೆಯಂತಹ ಕೃತ್ಯಕ್ಕೆ ಇಳಿಯುವುದು ರಾಕ್ಷಸೀ ಪ್ರವೃತ್ತಿಯ ಮತ್ತೊಂದು ಮುಖ ಅನಾವರಣಗೊಳಿಸಿದೆ ಎಂದರು. ದ.ಸಂ.ಸ ಯ ಎಂ.ಗುರುಮೂರ್ತಿ, ಅಕ್ಷತಾ ಹುಂಚದ ಕಟ್ಟೆ, ಕೆ.ಎಲ್. ಅಶೋಕ್ ಉಪಸ್ಥಿತರಿದ್ದರು. ಡಿ.ಎಸ್. ಶಿವಕುಮಾರ್ ಪ್ರಾಸ್ತಾವಿಕ ಮಾತನಾಡಿದರು.

ನಂತರ ನಡೆದ ಗೋಷ್ಠಿಗಳಲ್ಲಿ ‘ಕಲಬುರ್ಗಿ–ನಾನು ಕಂಡಂತೆ’ ವಿಷಯ ಕುರಿತು ಡಾ.ಸುಕನ್ಯಾ ಮಾರುತಿ, ‘ನನ್ನ ಗುರುಗಳು’ ವಿಷಯ ಕುರಿತು ಡಾ.ಎಂ.ಡಿಒಕ್ಕುಂದ, ಹೋರಾಟದ ರೂಪುರೇಷೆ ಕುರಿತು ಬಸವರಾಜ ಸೂಳಿಬಾವಿ ಮಾತನಾಡಿದರು. ರಂಗ ಬೆಳಕು ತಂಡದವರು ಕ್ರಾಂತಿಗೀತೆ ಹಾಡಿದರು. ಡಾ.ಪ್ರಕಾಶ್ ಮರಗನಹಳ್ಳಿ ಸ್ವಾಗತಿಸಿದರು. ಸರ್ಜಾ ಶಂಕರ ಹರಳೀಮಠ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮೊದಲು  ನಗರದ ಸೈನ್ಸ್ ಮೈದಾನದಿಂದ ಅಂಬೇಡ್ಕರ್ ಭವನದವರೆಗೆ ಪ್ರಮುಖ ರಸ್ತೆಗಳಲ್ಲಿ ಕಲಬುರ್ಗಿ ಹತ್ಯೆ ಖಂಡಿಸಿ ಜಾಥಾ ನಡೆಸಲಾಯಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.