ADVERTISEMENT

ಮೂಲಸೌಕರ್ಯ ನಿರ್ಮಾಣಕ್ಕೆ ಆದ್ಯತೆ ನೀಡಿ

ಸೊರಬ: 2017–18ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಸದಸ್ಯರ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:04 IST
Last Updated 19 ಜನವರಿ 2017, 6:04 IST

ಸೊರಬ:  ‘ಈ ಹಿಂದಿನ ಜಮೆ, ಖರ್ಚು ಇತ್ಯಾದಿಗಳ ಬಗ್ಗೆ ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸದೆ ದಿಢೀರನೆ 2018ರ ಆಯ–ವ್ಯಯದ ಬಗ್ಗೆ ಚರ್ಚಿಸುವುದು ಸೂಕ್ತವಲ್ಲ. ಹಿಂದಿನ ಅವಧಿಯ ಬಜೆಟ್ ಗಮನಿಸದೆ ಮುಂದಿನ ಬಜೆಟ್ ತಯಾರಿಸಲು ಸಾಧ್ಯವಿಲ್ಲ. ನಾಲ್ಕು ವರ್ಷಗಳಿಂದ ಜಮಾ ಖರ್ಚಿನ ಬಗ್ಗೆ ಸದಸ್ಯರ ಗಮನಕ್ಕೆ ತಂದಿಲ್ಲ’ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಹನುಮಂತಪ್ಪ ಆಕ್ಷೇಪ ವ್ಯಕ್ತಪಡಿಸಿದ ಪ್ರಸಂಗ ಇಲ್ಲಿನ ಪಟ್ಟಣ ಪಂಚಾಯ್ತಿ ಸಭೆಯಲ್ಲಿ ಬುಧವಾರ ನಡೆಯಿತು.

ಇಲ್ಲಿನ ಪಟ್ಟಣ ಪಂಚಾಯ್ತಿ ಕಾರ್ಯಾಲಯದಲ್ಲಿ ಅಧ್ಯಕ್ಷೆ ಬೇಬಿ ಜುಲೇಖಾ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ 2017–18ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಹನುಮಂತಪ್ಪ ಅವರ ಆಕ್ಷೇಪಕ್ಕೆ  ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಬಾಲಚಂದ್ರ, ‘ಇಂದು ಕರೆದ ಸಭೆ ಕೇವಲ ಬಜೆಟ್ ಪೂರ್ವ
ಭಾವಿಯಾಗಿದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ಈ ಹಿಂದಿನ ಆಯವ್ಯಯದ ಬಗ್ಗೆ ಚರ್ಚಿಸಿ ನಿರ್ಣಯ ಮಂಡಿಸಲಾಗುವುದು’ ಎಂದರು.

ಮೂಲ ಸೌಕರ್ಯಕ್ಕೆ ಒತ್ತಾಯ: ಸದಸ್ಯರಾದ ಎಂ.ಡಿ.ಉಮೇಶ್, ಸುಜಾಯತ್ ಉಲ್ಲಾ ಸೇರಿದಂತೆ ಹಲವು ಸದಸ್ಯರು, ‘ಈ ಬಾರಿಯ ಬಜೆಟ್‌ನಲ್ಲಿ ಪಟ್ಟಣ ಪಂಚಾಯ್ತಿ ಆದಾಯಕ್ಕೆ ಅನುಗುಣವಾಗಿ ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ರಸ್ತೆ ನಿರ್ಮಾಣ ಕಾಮಗಾರಿ, ಉದ್ಯಾನ ನಿರ್ಮಾಣ, ನಾಡಹಬ್ಬ ಹಾಗೂ ರಾಷ್ಟ್ರೀಯ ಹಬ್ಬಗಳು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದರು.

‘ಅಸಮರ್ಪಕ ನಿರ್ವಹಣೆಯಿಂದ ಹಲವು ಬಡಾವಣೆಗಳಲ್ಲಿ ನೀರು ವ್ಯರ್ಥವಾಗುತ್ತಿದೆ. ಬಡಾವಣೆಗಳಿಗೆ ಅಳವಡಿಸಿರುವ ನಾಮಫಲಕಗಳಿಗೆ ಕೂಡಲೇ ಹೆಸರು ಬರೆಸಬೇಕು. ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ಸ್ಚಚ್ಛಗೊಳಿಸಲು ಮಾಲೀಕರಿಗೆ ಸೂಚಿಸಬೇಕು. ಹಗಲಿನಲ್ಲಿ ಬೀದಿ ದೀಪಗಳು ಉರಿಯುತ್ತಿರುವ ಬಗ್ಗೆ ಗಮನಹರಿಸಬೇಕು’ ಎಂದು ಸಾರ್ವಜನಿಕರು ಸಭೆಯ ಗಮನಕ್ಕೆ ತಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ, ‘ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಪಟ್ಟಣ ಪಂಚಾಯ್ತಿ ಕ್ರಮ ತೆಗೆದುಕೊಳ್ಳುತ್ತದೆ’ ಎಂದು ಭರವಸೆ ನೀಡಿದರು. ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ನೇತ್ರಾವತಿ, ಮೆಹಬೂಬಿ, ಬಂದಗಿ ಬಸವರಾಜ್ ಶೇಟ್, ಷಣ್ಮಖ, ಗೀತಾ ಚಂದ್ರಶೇಖರ್, ಪ್ರಮುಖರಾದ ಅಬ್ದುಲ್ ರಶೀದ್, ಮುನವೇಲ್, ಇಂದಿರಾ ಗೌಡ, ಕರಿಯಪ್ಪ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.