ADVERTISEMENT

ರುಚಿಮೊಗ್ಗು ಅರಳಿಸುವ ‘ಬಾಯ್ಲರ್‌ ಚಹಾ’

ವಿಜಯಕುಮಾರ್‌ ಎಸ್.ವಿ
Published 15 ಮೇ 2017, 4:28 IST
Last Updated 15 ಮೇ 2017, 4:28 IST
ರುಚಿಮೊಗ್ಗು ಅರಳಿಸುವ ‘ಬಾಯ್ಲರ್‌ ಚಹಾ’
ರುಚಿಮೊಗ್ಗು ಅರಳಿಸುವ ‘ಬಾಯ್ಲರ್‌ ಚಹಾ’   
ಶಿವಮೊಗ್ಗ: ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಜನಪ್ರಿಯವಾಗಿರುವ ಬಾಯ್ಲರ್ ಚಹಾ ಶಿವಮೊಗ್ಗದಲ್ಲೂ  ರುಚಿಮೊಗ್ಗುಗಳನ್ನು ಅರಳಿಸುತ್ತಿದೆ. 
 
ವಿನೋಬನಗರಕ್ಕೆ ಸಾಗುವ ರಸ್ತೆಯಲ್ಲಿನ (ಆಟೊ ನಿಲ್ದಾಣ ಸಮೀಪ) ನಿತ್ಯಶ್ರೀ ಕ್ಯಾಂಟೀನ್‌ನಲ್ಲಿ ದೊರೆಯುವ ಬಾಯ್ಲರ್ ಚಹಾದ ರುಚಿಯೇ ಆಹ್ಲಾದಕರ.
 
ಸಕ್ಕರೆ, ಟೀ ಪುಡಿ, ಹಾಲಿನ ಹದವಾದ ಮಿಶ್ರಣವಿದೆ. ಹಾಗಾಗಿ ಬೇರೆ ಹೋಟೆಲ್‌ಗಳಿಗಿಂತಲೂ ಈ ಕ್ಯಾಂಟೀನ್‌ನಲ್ಲಿ ಗ್ರಾಹಕರ ಸಂಖ್ಯೆ ತುಸು ಹೆಚ್ಚೇ ಇರುತ್ತದೆ.  
 
‘ನನ್ನ ಮೆಕ್ಯಾನಿಕ್ ಶಾಪ್ ಇರುವುದು ದುರ್ಗಿಗುಡಿಯಲ್ಲಿ. ಬಾಯ್ಲರ್ ಚಹಾ ರುಚಿ ಸವಿಯಲು ವಿನೋಬನಗರಕ್ಕೆ ಬರುತ್ತೇನೆ. ಜತೆಗೆ ಸ್ನೇಹಿತರನ್ನೂ ಕರೆತರುತ್ತೇನೆ. ಬಾಯ್ಲರ್‌ ಚಹಾದಲ್ಲಿ ಸಕ್ಕರೆ ಕಡಿಮೆ, ಟೀ ಪುಡಿ ಹೆಚ್ಚು ಎಂದು ದೂರುವ ಮಾತೇ ಇಲ್ಲ.  ಕೆಲಸದ ಮಧ್ಯೆ ಇಂಥ ಚಹಾ ಸೇವಿಸಿದರೆ ಕೆಲಸದೆಡೆಗೆ  ಉತ್ಸಾಹ ಹೆಚ್ಚುತ್ತದೆ’ ಎನ್ನುತ್ತಾರೆ ದ್ವಿ ಚಕ್ರವಾಹನ ಮೆಕ್ಯಾನಿಕ್ ಪರಶುರಾಮ್.
 
‘ಫ್ಲಾಸ್ಕ್‌ನಲ್ಲಿ ಸಂಗ್ರಹಿಸಿಟ್ಟ ಚಹಾ ಕುಡಿದರೆ ಕೆಲವೊಮ್ಮೆ ಉದರಬೇನೆ ಸಮಸ್ಯೆ ಕಾಣಿಸುತ್ತದೆ. ಹಾಗಾಗಿ ಈ ಚಹಾ ನನಗಿಷ್ಟ. ಇದು ನಗರದಲ್ಲಿ ಸಿಗುವ ಉತ್ತಮ ಚಹಾಗಳಲ್ಲಿ ಒಂದು’ ಎಂದು ಗೋವಿಂದಪ್ಪ ಹರ್ಷ ವ್ಯಕ್ತಪಡಿಸಿದರು. 
 
ಈ ಬಗ್ಗೆ ಕ್ಯಾಂಟೀನ್ ಮಾಲೀಕ ಪೆರುಮಾಳ್ ಮಾಹಿತಿ ಹಂಚಿಕೊಂಡಿದ್ದು ಹೀಗೆ, ‘ಕುದಿಯುತ್ತಿರುವ ಬಿಸಿನೀರಿಗೆ ಗಟ್ಟಿಹಾಲು ಹಾಗೂ ಚಹಾಸೊಪ್ಪಿನ ಮಿಶ್ರಣ ಮಾಡುತ್ತೇವೆ. ಈ ಚಹಾ ತಯಾರಿಕೆ ಒಂದು ನಿಮಿಷ ಸಾಕು. ಕುಡಿದ ಗಾಜಿನ ಲೋಟಗಳನ್ನು ಬಿಸಿನೀರಿನಲ್ಲಿಯೇ ತೊಳೆಯುತ್ತೇವೆ. ಸ್ವಚ್ಛತೆಗೆ ಮೊದಲ ಆದ್ಯತೆ’  ಎನ್ನುತ್ತಾರೆ ಅವರು. 
 
‘ರಿಯಾಯ್ತಿ ದರದಲ್ಲಿ ತಿಂಡಿ ಹಾಗೂ ಊಟ ನೀಡುತ್ತಿದ್ದೇನೆ. ಜತೆಗೆ  ಎರಡು ವರ್ಷಗಳಿಂದೀಚೆಗೆ ಬಾಯ್ಲರ್‌ ಚಹಾ ಮಾರಾಟ ಮಾಡಲು ಆರಂಭಿಸಿದ್ದೇವೆ. ಗ್ರಾಹಕರು ಮೊದಲು ಉತ್ಸಾಹ ತೋರಲಿಲ್ಲ.  ಈಗ ಚಹಾ ರುಚಿ ಹತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
 
ಅರ್ಧ ಕಪ್‌ ಬಾಯ್ಲರ್‌ ಚಹಾ ದರ ₹ 6 ಹಾಗೂ ಪೂರ್ತಿ ಕಪ್‌ಗೆ ₹ 12. ಬೆಳಿಗ್ಗೆ 6ರಿಂದ ಸಂಜೆ 7.30ರವರೆಗೆ ಚಹಾ ಲಭ್ಯವಿದೆ. 
ಬೆಳಿಗ್ಗೆ ಮಾತ್ರ ಈ ಕ್ಯಾಂಟೀನ್‌ನಲ್ಲಿ ಇಡ್ಲಿ, ಗೀ ರೈಸ್‌, ಪುಲಾವ್, ಪೊಂಗಲ್ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.