ADVERTISEMENT

ರೈತರ ಆತ್ಮಹತ್ಯೆ: ರಾಜ್ಯಕ್ಕೆ ಮೂರನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 7:20 IST
Last Updated 17 ಜನವರಿ 2017, 7:20 IST
ರೈತರ ಆತ್ಮಹತ್ಯೆ: ರಾಜ್ಯಕ್ಕೆ ಮೂರನೇ ಸ್ಥಾನ
ರೈತರ ಆತ್ಮಹತ್ಯೆ: ರಾಜ್ಯಕ್ಕೆ ಮೂರನೇ ಸ್ಥಾನ   

ಸಾಗರ: ‘ರೈತರ ಆತ್ಮಹತ್ಯೆಯಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. ನೌಕರಶಾಹಿ ಸೇರಿದಂತೆ ಇತರೆ ಉಳ್ಳವರ ಪರವಾಗಿ ಆಯೋಗ ರಚಿಸಲಾಗುತ್ತಿದೆಯೇ ವಿನಾ ರೈತರ ಆತ್ಮಹತ್ಯೆಗೆ ಕಾರಣ ಹಾಗೂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರಗಳು ಗಂಭೀರ ಚಿಂತನೆ ನಡೆಸುತ್ತಿಲ್ಲ’ ಎಂದು ಮಹಾರಾಷ್ಟ್ರದ ನೈಸರ್ಗಿಕ ಕೃಷಿತಜ್ಞ ಸುಭಾಷ್ ಪಾಳೇಕರ್ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಬೇಳೂರಿನಲ್ಲಿ ಚಿರಂತನ ರೈತಕೂಟ, ವಿರೂಪಾಕ್ಷೇಶ್ವರ ಕೆರೆ ಬಳಕೆದಾರರ ಸಂಘ ಹಾಗೂ ಕೆಳದಿ ಪ್ರಾಂತ್ಯವು ಈಚೆಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಕೇಂದ್ರ, ರಾಜ್ಯ ಸರ್ಕಾರಗಳು ನೌಕರರ, ಸಚಿವರು, ಶಾಸಕರ ಸಂಬಳ ಸವಲತ್ತು ಹೆಚ್ಚಿಸುವ ನಿಟ್ಟಿನಲ್ಲಿ ಕಾಲಕಾಲಕ್ಕೆ ಆಯೋಗ ರಚಿಸುತ್ತದೆ. ಆದರೆ, ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ನಿಗದಿ ಮಾಡುವ ಸಮರ್ಪಕ ಬೆಲೆ ಆಯೋಗ ರಚನೆ ಮಾಡಿಲ್ಲ. ಇದರಿಂದ ರೈತರು ಹತಾಶರಾಗಿದ್ದಾರೆ. ಅನ್ನದಾತ ಸಂಕಷ್ಟದಲ್ಲಿದ್ದರೆ ದೇಶದ ಅಭಿವೃದ್ಧಿ  ಖಂಡಿತಾ ಸಾಧ್ಯವಾಗುವುದಿಲ್ಲ’ ಎಂದರು.

‘ರೈತರು ನಿಸರ್ಗಕ್ಕೆ ಹತ್ತಿರವಾದ ಬೆಳೆ ಬೆಳೆಯುವ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಏಕಬೆಳೆ ಪದ್ಧತಿಯಿಂದ ರೈತರ ಆರ್ಥಿಕ ಅಭಿವೃದ್ದಿ ಸಾಧ್ಯವಿಲ್ಲ. ಒಂದು ಬೆಳೆ ನಷ್ಟವಾದರೆ, ಇನ್ನೊಂದು ಬೆಳೆಯ ಮೂಲಕ ನಷ್ಟ ಭರಿಸಿಕೊಳ್ಳಲು ಬಹುಬೆಳೆ ಪದ್ಧತಿಯಿಂದ ಸಾಧ್ಯವಾಗುತ್ತದೆ’ ಎಂದು ಸಲಹೆ ನೀಡಿದರು.
‘ವಿದೇಶಿ ಕಂಪೆನಿಗಳಿಂದ ಉತ್ಪಾದನೆ ಯಾದ ಬೀಜ, ಗೊಬ್ಬರ ಹಾಗೂ ಔಷಧಿಗಳಿಗೆ ರೈತರು ಮಾರು ಹೋಗಬಾರದು. ಸ್ವದೇಶಿ ತಳಿಯ ಆಕಳುಗಳ ಸೆಗಣಿ, ಗಂಜಲ, ಬೆಲ್ಲ, ದ್ವಿದಳ ಧಾನ್ಯದ ಹಿಟ್ಟು ಬಳಸಿ ಜೀವಾಮೃತ ತಯಾರಿಸಿ, ಕೃಷಿಯಲ್ಲಿ ಬಳಕೆ ಮಾಡಿದರೆ ಉತ್ತಮ ಫಸಲು ಪಡೆಯಬಹುದು. ಈ ನಿಟ್ಟಿನಲ್ಲಿ ರೈತರನ್ನು ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ತಿಳಿಸಿದರು.

ಚಿಂತಕ ದೇವೇಂದ್ರ ಬೆಳೆಯೂರು ಮಾತನಾಡಿ, ‘ಪಾಲೇಕರ್ ಅವರ ಜತೆ ದಕ್ಷಿಣ ಭಾರತದ ಐದು ರಾಜ್ಯಗಳ ಹಾಗೂ ಚೀನಾ, ಬಾಂಗ್ಲಾ ದೇಶಗಳಿಂದ ಸಹ ಕೃಷಿಕರು ಬೇಳೂರು ಗ್ರಾಮಕ್ಕೆ ಭೇಟಿ ನೀಡಿರುವುದು ಪಾಳೇಕರ್ ಪದ್ಧತಿ ಜನಪ್ರಿಯವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ’ ಎಂದರು.

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದರು. ಎಂ.ಲಕ್ಷ್ಮೀನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಬಿ.ಜೆ.ರಾಮಮೂರ್ತಿ ಸ್ವಾಗತಿಸಿದರು. ರಾಧಾಕೃಷ್ಣ ಬಂದಗದ್ದೆ ವಂದಿಸಿದರು. ಬಿ.ಆರ್.ವಿನಾಯಕರಾವ್ ಬೇಳೂರು ಕಾರ್ಯಕ್ರಮ ನಿರೂಪಿಸಿದರು. ಪ್ರಗತಿಪರ ಕೃಷಿಕರಾದ ನರೇಂದ್ರ ಹೆಗಡೆ, ಸುಬ್ರಾವ್ ಅವರ ಕೃಷಿ ಕ್ಷೇತ್ರಗಳಿಗೆ ಸುಭಾಷ್ ಪಾಳೇಕರ್ ಮತ್ತು ತಂಡ ಭೇಟಿ ನೀಡಿ ‘ಜೀವಾಮೃತ ಕೃಷಿ ಪದ್ಧತಿ’ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.