ADVERTISEMENT

‘ರೈತರ ವಿಚಾರದಲ್ಲಿ ಹುಡುಗಾಟ ಬೇಡ’

​ಪ್ರಜಾವಾಣಿ ವಾರ್ತೆ
Published 21 ಮೇ 2017, 5:05 IST
Last Updated 21 ಮೇ 2017, 5:05 IST

ಹೊಸನಗರ:  ಅರಣ್ಯ ಹಕ್ಕು ಸಮಿತಿ ನಿರ್ಲಕ್ಷ್ಯ  ಹಾಗೂ ಅಧಿಕಾರಿಗಳ ಸೋಗಲಾಡಿತನದಿಂದಾಗಿ  ಅರಣ್ಯ ಹಕ್ಕು ಕಾಯ್ದೆ ಹಳ್ಳ ಹಿಡಿಯುತ್ತಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ತಾಲ್ಲೂಕು ಅರಣ್ಯ ಹಕ್ಕು ಸಮಿತಿಗಳ ಅಧ್ಯಕ್ಷರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ  ಶನಿವಾರ   ಮಾತನಾಡಿದರು.

ಭೂ ಮಂಜೂರಾತಿಗಾಗಿ ಬಂದ ಅರ್ಜಿಗಳು ವಿಲೇವಾರಿಯಾಗದೇ ಕೊಳೆಯುತ್ತಿವೆ. ಈ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇಲ್ಲದೇ ಇರುವುದು ನಾಚಿಕೆ ಗೇಡು’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಅರಣ್ಯ ಹಕ್ಕು ಮಂಜೂರಾತಿಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಯಾವುದೇ ಕೆಲಸ ಮಾಡುತ್ತಿಲ್ಲ. ಕೇವಲ ಅರ್ಜಿ ಸ್ವೀಕರಿಸಿದರೆ ಸಾಲದು, ಅದನ್ನು ವಿಲೇವಾರಿ ಮಾಡಬೇಕು ಎಂದು  ಸೂಚನೆ  ನೀಡಿದರು.‘ರೈತರ ವಿಚಾರದಲ್ಲಿ ಹುಡುಗಾಟ ಬೇಡ. ಅವರ ಕಷ್ಟಗಳಿಗೆ ಸ್ಪಂದಿಸಿ, ಗೌರವ ನೀಡಬೇಕು’ ಎಂದು ತಾಕೀತು ಮಾಡಿದರು.

ತಿಂಗಳ ಗಡುವು:  ಒಂದು ತಿಂಗಳಲ್ಲಿ  ಎಲ್ಲಾ ಕಡತಗಳು ಅರಣ್ಯ ಹಕ್ಕು ಸಮಿತಿಯಿಂದ ತಾಲ್ಲೂಕು ಕಚೇರಿಗೆ ಬರಬೇಕು. ಅದನ್ನು ಶೀಘ್ರ ಬಗೆಹರಿಸ ಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು, ಪಿಡಿಒಗಳು ಅರಣ್ಯ ಹಕ್ಕು ಕಾಯ್ದೆ ಕುರಿತು ಹೇಳುವ ಪಾಠ ಕೇಳಿ ಮನೆಗೆ ಹೋಗಿ ನಿದ್ದೆ ಮಾಡುತ್ತಿರಾ? . ನಾಲ್ಕು ವರ್ಷಗಳಿಂದ ಅಧಿಕಾರಿಗಳಿಗೆ ಪಾಠ ಮಾಡುವುದೇ   ಆಗಿದೆ’ ಎಂದು  ವಿಷಾದ ವ್ಯಕ್ತಪಡಿಸಿದರು.

ಉಪವಿಭಾಗಾಧಿಕಾರಿ ನಾಗರಾಜ್, ತಹಶೀಲ್ದಾರ್ ಚಂದ್ರಶೇಖರ ನಾಯ್ಕ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕಲಗೋಡು ರತ್ನಾಕರ್, ಶ್ವೇತಾಬಂಡಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಾಸಪ್ಪಗೌಡ, ಸದಸ್ಯರಾದ ಏರಿಗೆ ಉಮೇಶ್, ಬಿ.ಜಿ. ಚಂದ್ರಮೌಳಿ   ಹಾಜರಿದ್ದರು. ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಭಟ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.