ADVERTISEMENT

ವಕೀಲರ ಅಧಿನಿಯಮ ತಿದ್ದುಪಡಿಗೆ ವಿರೋಧ

ಭದ್ರಾವತಿ, ಸಾಗರ, ಶಿಕಾರಿಪುರದಲ್ಲೂ ಪ್ರತಿಭಟನೆ ನಡೆಸಿದ ವಕೀಲರು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 4:11 IST
Last Updated 22 ಏಪ್ರಿಲ್ 2017, 4:11 IST
ವಕೀಲರ ಅಧಿನಿಯಮ ತಿದ್ದುಪಡಿಗೆ ವಿರೋಧ
ವಕೀಲರ ಅಧಿನಿಯಮ ತಿದ್ದುಪಡಿಗೆ ವಿರೋಧ   
ಶಿವಮೊಗ್ಗ: ಕೇಂದ್ರ ಕಾನೂನು ಆಯೋಗ ಮಂಡಿಸಿರುವ ವಕೀಲರ ಅಧಿನಿಯಮ (ತಿದ್ದುಪಡಿ–2017) ವಿರೋಧಿಸಿ ಶಿವಮೊಗ್ಗ ಬಾರ್ ಅಸೋಸಿಯೇಷನ್ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
 
ತಿದ್ದುಪಡಿ ಅಧಿನಿಯಮ ಒಂದು ವೇಳೆ ಜಾರಿಗೊಳಿಸಿದಲ್ಲಿ ವಕೀಲರ ವೃತ್ತಿ ಸ್ವಾತಂತ್ರ್ಯ ಅಂತ್ಯವಾಗುತ್ತದೆ. ಯಾವುದೇ ವ್ಯಕ್ತಿಯಾದರೂ ನ್ಯಾಯಾಲಯದಲ್ಲಿ ವಕೀಲನಂತೆ ವರ್ತಿಸಬಹುದು.
 
ಬಾರ್ ಅಸೋಸಿಯೇಷನ್ ಈವರೆಗೂ ವಕೀಲರ ವೃತ್ತಿ ಗೌರವ ಕಾಪಾಡುವುದರ ಜತೆಗೆ ಅವರ ವೃತ್ತಿ ಕೌಶಲ ಹೆಚ್ಚಿಸುವ ಕಾರ್ಯ ಮಾಡುತ್ತಾ ಬಂದಿದೆ. ಕಾನೂನು ಆಯೋಗ ಶಿಫಾರಸ್ಸು ಮಾಡಿರುವ ವಕೀಲರ ಅಧಿನಿಯಮ (ತಿದ್ದುಪಡಿ –2017)ದಲ್ಲಿ ಬಾರ್ ಅಸೋಸಿಯೇಷನ್ ಅನ್ನೇ ರದ್ದುಗೊಳಿಸಬೇಕು ಎಂಬ ಅಂಶ ಇರುವುದು ವೃತ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ತಿಳಿಸಿದರು.
 
ಈ ಅಧಿನಿಯಮ ಜಾರಿಗೊಳಿಸದಂತೆ ಈಗಾಗಲೇ ಸಂಬಂಧಿಸಿದ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸಲಾಗಿದೆ. ಈಗ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಕಾನೂನು ಸಚಿವರಿಗೆ ಮನವಿ ಸಲ್ಲಿಸಲಾಗುತ್ತಿದೆ. ಅಧಿನಿಯಮ ಜಾರಿಗೆ ತಂದಿದ್ದೇ ಆದಲ್ಲಿ ದೇಶದಾದ್ಯಂತ ವಕೀಲರು ಬೀದಿಗಿಳಿದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
 
ಶಿವಮೊಗ್ಗ ಬಾರ್ ಅಸೋಸಿಯೇಷನ್ ಅಧ್ಯಕ್ಷ ಎನ್. ದೇವೇಂದ್ರಪ್ಪ, ಉಪಾಧ್ಯಕ್ಷೆ ಎನ್.ಮಂಜುಳಾ ದೇವಿ, ಪ್ರಧಾನ ಕಾರ್ಯದರ್ಶಿ ಕೆ.ಎಂ. ಜಯರಾಂ, ಪ್ರಮುಖರಾದ ಕೆ.ಪಿ. ಶ್ರೀಪಾಲ್, ಎಚ್.ಎಂ. ಜನಾರ್ಧನ್, ಟಿ.ಎಸ್. ಟೀಕೋಜಿರಾವ್, ಆರ್.ಬಂಗಾರಪ್ಪ, ಕೆ. ಅಣ್ಣಪ್ಪ, ಪಿ.ಸಿ. ಕವಿತಾ, ಎಂ.ಪಿ. ಚಂದನ್ ಪಟೇಲ್ ಸೇರಿದಂತೆ ಇತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
 
ಭದ್ರಾವತಿ
‘ಕೇಂದ್ರ ಕಾನೂನು ಆಯೋಗ ಶಿಫಾರಸ್ಸು ವಕೀಲರ ಪಾಲಿಗೆ ಸಾಕಷ್ಟು ಸಂಕಷ್ಟ ತಂದೊಡ್ಡುವ ತಿದ್ದುಪಡಿ ಅಂಶಗಳನ್ನು ಹೊಂದಿದೆ’ ಎಂದು ವಕೀಲರ ಸಂಘದ ಅಧ್ಯಕ್ಷ ಟಿ. ಚಂದ್ರೇಗೌಡ ದೂರಿದರು.
 
ಕೇಂದ್ರ ವಕೀಲರ ಪರಿಷತ್ತು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರ ಹಿನ್ನೆಲೆಯಲ್ಲಿ ಸ್ಥಳೀಯ ವಕೀಲರು ಶುಕ್ರವಾರ ನ್ಯಾಯಾಲಯ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದ ವೇಳೆ ಅವರು ಮಾತನಾಡಿದರು.
 
ವಕೀಲರ ಕಾಯ್ದೆಯ ಕೆಲವು ಕಲಂಗಳಿಗೆ ತರಲು ಉದ್ದೇಶಿಸಿರುವ ತಿದ್ದುಪಡಿಗಳು ವೈಯಕ್ತಿಕ ಹಕ್ಕಿನ ರಕ್ಷಣೆಯನ್ನು ಗಾಳಿಗೆ ತೂರುವ ಹುನ್ನಾರ ಹೊಂದಿದೆ ಎಂದು ಕಿಡಿಕಾರಿದರು.
 
ಈ ಶಿಫಾರಸ್ಸಿಗೆ ಯಾವುದೇ ಕಾರಣಕ್ಕೂ ಸಂಸತ್ತು ಒಪ್ಪಿಗೆ ನೀಡದೆ ಅದನ್ನು ಹಿಂದಕ್ಕೆ ಕಳುಹಿಸಬೇಕು. ಆಯೋಗದ ಅಧ್ಯಕ್ಷ ಚವ್ಹಾಣ್ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು.
 
ವಕೀಲರ ಬೇಡಿಕೆಗೆ ಕೇಂದ್ರದ ಸ್ಪಂದನೆ ಸಿಗದಿದ್ದಲ್ಲಿ ಮೇ 2ರಿಂದ ಜೈಲ್ ಭರೋ ಚಳವಳಿ ರೂಪಿಸಿ ಉಗ್ರ ಹೋರಾಟ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಎಚ್ಚರಿಸಿದರು. ಸಂಘದ ಪದಾಧಿಕಾರಿಗಳಾದ ತಿರುಮಲೇಶ್, ಕೆ.ಜಿ. ರಮೇಶ್, ಮಗೇಶಬಾಬು, ಪ್ರಕಾಶ್ ಹಾಜರಿದ್ದರು. 
 
ಸಾಗರ
ವಕೀಲರ ಅಧಿನಿಯಮಕ್ಕೆ ತಿದ್ದುಪಡಿ ತರಲು ಕಾನೂನು  ಆಯೋಗ ಮಾಡಿರುವ ಶಿಫಾರಸುಗಳನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ವಕೀಲರ ಸಂಘದ ಸದಸ್ಯರು ಶುಕ್ರವಾರ ನ್ಯಾಯಲಯದ ಕಾರ್ಯಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.
 
ರಾಜಕಾರಣಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ಕಾನೂನು ಆಯೋಗ ಶಿಫಾರಸು ಮಾಡಿದೆ. ಇದರಿಂದ ದೂರಿನ ವಿಚಾರಣೆ ಸಂದರ್ಭದಲ್ಲಿ ರಾಜಕೀಯ ಹಿತಾಸಕ್ತಿಗಳು ನುಸುಳುವ ಅಪಾಯವಿದೆ ಎಂದು ವಕೀಲರು ಪ್ರತಿಪಾದಿಸಿದರು.
 
ಕಾನೂನು ಆಯೋಗ ಮಾಡಿರುವ ಶಿಫಾರಸುಗಳು ಜಾರಿಯಾದರೆ ವಕೀಲರು ವೃತ್ತಿ ನಡೆಸಲು ಕಷ್ಟಸಾಧ್ಯವಾಗುತ್ತದೆ. ಇಲ್ಲಿನ ಹಲವು ಶಿಪಾರಸುಗಳು ವಕೀಲ ಸಮುದಾಯದ ಹಿತಕ್ಕೆ ಮಾರಕವಾಗಿವೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
 
ವಕೀಲರ ಸಂಘದ ಕಾರ್ಯದರ್ಶಿ ವಿ. ಶಂಕರ್, ಖಜಾಂಚಿ ಸತೀಶ್ ಕುಮಾರ್, ಎಚ್.ಕೆ.ಅಣ್ಣಪ್ಪ, ಬಿ. ವಾಸು, ಕೆ.ವಿ. ಪ್ರವೀಣ್‌ಕುಮಾರ್, ವಿನಯ್, ಉಲ್ಲಾಸ್‌, ಲಿಂಗರಾಜ್, ಹರೀಶ್, ಚಂದ್ರಪ್ಪ, ಎಸ್‌.ಕೆ. ಗಣಪತಿ, ರಮೇಶ್ ಮರತ್ತೂರು, ಬಿ.ಪಿ. ಪುಟ್ಟರಾಜ ಗೌಡ, ಮರಿದಾಸ್, ರಮೇಶ್ ಎಚ್.ಬಿ. ಚಂದ್ರಶೇಖರ್, ನಾಗರಾಜಯ್ಯ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 
ಶಿಕಾರಿಪುರ
ವಕೀಲರ ವಿರುದ್ಧ ಲಾ ಕಮೀಷನ್‌ ನೀಡಿದ ನಿರ್ಣಯ ವಿರುದ್ಧ ಜೆಎಂಎಫ್‌ ನ್ಯಾಯಾಲಯ ಮುಂಭಾಗ ವಕೀಲರ ಸಂಘದ ಪದಾಧಿಕಾರಿಗಳು ಶುಕ್ರವಾರ ಭಾರತ ಬಾರ್‌ ಕೌನ್ಸಿಲ್‌ ಸೂಚನೆ ಮೇರೆಗೆ ಕಮೀಷನ್‌ ನಿರ್ಣಯದ ವರದಿಯನ್ನು ಸುಟ್ಟು ಹಾಕುವ ಮೂಲಕ ಪ್ರತಿಭಟನೆ ನಡೆಸಿದರು.
 
ಈ ಸಂದರ್ಭದಲ್ಲಿ ಮಾತನಾಡಿದ ವಕೀಲ ಕೊಟ್ರೇಶಪ್ಪ, ‘ವಕೀಲರು ಕಕ್ಷಿದಾರರಿಗೆ ನ್ಯಾಯ ದೊರಕಿಸದಿದ್ದರೆ ವಕೀಲರನ್ನೆ ನಿಷ್ಠುರ ಮಾಡುವ ಹಾಗೂ ವಕೀಲರ ವಿರುದ್ಧ ಕ್ರಮಕೈಗೊಳ್ಳುವ ಕಾನೂನು ಈ ನಿರ್ಣಯದಲ್ಲಿದೆ. ಈ ಕಮೀಷನ್ ತೀರ್ಪು ಬಂದಲ್ಲಿ 3ರಿಂದ 5ಲಕ್ಷ ದಂಡ ಹಾಕುವ ಕಾನೂನಿದ್ದು, ವಕೀಲರ ವೃತ್ತಿಗೆ ಮಾರಕವಾಗಲಿದ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.  
 
ವಕೀಲರಾದ ಚಂದ್ರಪ್ಪ, ವಸಂತಮಾಧವ್‌, ವೇದಮೂರ್ತಿ, ಚಂದ್ರಪ್ಪ, ವಸಂತಪ್ಪ, ಈಸೂರು ಲೋಕೇಶ್‌, ನಿಂಗಪ್ಪ, ಯೋಗಾನಂದ, ರಾಜುನಾಯ್ಕ, ಕೋಡಪ್ಪ, ಯಾದವಮೂರ್ತಿ, ದಾಕ್ಷಾಯಿಣಿ, ಮಂಜುಳಾ, ರಜನಿ ಉಪಸ್ಥಿತರಿದ್ದರು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.