ADVERTISEMENT

ವಕ್ಫ್‌ ಆಸ್ತಿ ರಕ್ಷಣೆಗೆ ಟಾಸ್ಕ್‌ಫೋರ್ಸ್‌

ಮುತುವಲ್ಲಿಗಳ ಸಮ್ಮೇಳನದಲ್ಲಿ ಸಚಿವ ತನ್ವೀರ್‌ ಸೇಠ್

​ಪ್ರಜಾವಾಣಿ ವಾರ್ತೆ
Published 15 ಮೇ 2017, 4:21 IST
Last Updated 15 ಮೇ 2017, 4:21 IST
ಚಿತ್ರದುರ್ಗ: ರಾಜ್ಯದಲ್ಲಿ ವಕ್ಫ್ ಮಂಡಳಿಯ ಆಸ್ತಿಗಳು ಕಬಳಿಕೆ ಹಾಗೂ ಒತ್ತುವರಿಯಾಗದಂತೆ  ರಕ್ಷಿಸಲು ಟಾಸ್ಕ್‌ಫೋರ್ಸ್ ಸಮಿತಿ ರಚಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ತನ್ವಿರ್‌ಸೇಠ್ ತಿಳಿಸಿದರು.
 
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ವಕ್ಫ್ ಮಂಡಳಿಯಿಂದ ಪ್ರಥಮ ಬಾರಿಗೆ ಭಾನುವಾರ ಹಮ್ಮಿಕೊಂಡಿದ್ದ ಮುತುವಲ್ಲಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
 
ಕೇಂದ್ರ ಸರ್ಕಾರ ಎರಡು ದಶಕಗಳ ಹಿಂದೆಯೇ ವಕ್ಫ್ ಕಾಯ್ದೆ ಜಾರಿಗೆ ತಂದಿದೆ. ಆ ಕಾಯ್ದೆಯನ್ನು ಪರಿಣಾಮ ಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ  ನಿಯಮ ರೂಪಿಸಿದೆ  ಎಂದು ತಿಳಿಸಿದರು. 
 
ವಕ್ಫ್ ಆಸ್ತಿಗಳ ಸರ್ವೆ ಕಾರ್ಯ ಈಗಾಗಲೇ ಆರಂಭವಾಗಿದ್ದು, ಇದರ ವರದಿ ತಹಶೀಲ್ದಾರ್, ಉಪ ವಿಭಾಗಾಧಿಕಾರಿ, ಅಂತಿಮವಾಗಿ ಜಿಲ್ಲಾಧಿಕಾರಿಗೆ ತಲುಪಲಿದೆ ಎಂದು ತಿಳಿಸಿದರು.
 
ದರ್ಗಾ, ಈದ್ಗಾ, ಮಸೀದಿ, ಖಬರಸ್ಥಾನ್‌ಗಳ ದಾಖಲೆ ಸರಿಯಾಗಿಟ್ಟುಕೊಂಡಾಗ ಮಾತ್ರ ವಕ್ಫ್ ಮಂಡಳಿಯಿಂದ ಸೌಲಭ್ಯ ದೊರೆಯಲಿದೆ. ಇದರಲ್ಲಿ ಮುತುವಲ್ಲಿಗಳ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು.
 
ವಕ್ಫ್ ಆಸ್ತಿಯನ್ನು ಯಾರಾದರೂ ಒತ್ತುವರಿ ಮಾಡುವುದಾಗಲಿ, ಕಬಳಿಸು ವುದಾಗಲಿ ಮಾಡಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಆಸ್ತಿಯನ್ನು ಮರಳಿ ಪಡೆಯಲು ಕಾಯ್ದೆ ನಿಯಮಾವಳಿಯಲ್ಲಿ ಅಧಿಕಾರವಿದೆ. ಮಸೀದಿ, ಈದ್ಗಾ, ಖಬರಸ್ಥಾನ್, ದರ್ಗಾ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನು ದಾನವನ್ನು ವಕ್ಫ್ ಮಂಡಳಿ ಮೂಲಕ ನೀಡುತ್ತಿದೆ ಎಂದು ಹೇಳಿದರು.
 
ಅಲ್ಪಸಂಖ್ಯಾತರು ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡುವುದರ ಜತೆಗೆ ಕಾನೂನು ಕಾಯ್ದೆಯ ಬಗ್ಗೆ ಅರಿವು ಮೂಡಿಸಲು ಮುಂದಾಗಬೇಕು ಎಂದು ತಿಳಿಸಿದರು.
 
ಜಿಲ್ಲೆಯಲ್ಲಿ ಮುಸ್ಲಿಂ ವಸತಿ ನಿಲಯಗಳನ್ನು ನಿರ್ಮಿಸಲು ನಿವೇಶನ ಗುರುತಿಸಿ ಕ್ರಿಯಾ ಯೋಜನೆ ತಯಾರಿಸಿಕೊಟ್ಟರೆ, ಅನುದಾನ ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಭರವಸೆ ನೀಡಿದರು.
 
ವಕ್ಫ್ ಆಸ್ತಿಗಳನ್ನು ಖಾತೆ ಮಾಡುವಾಗ ಮುಸ್ಲಿಂ ಖಬರಸ್ಥಾನ್ ಎಂದು ಬರೆಯಲು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗೆ ಸೂಚನೆ ನೀಡಬೇಕು. ಕೆಲವು ಖಬರಸ್ಥಾನ್‌ಗಳು ವಿವಾದದಲ್ಲಿವೆ. ತಡೆಗೋಡೆ ಹಾಕಲು ಸಹ ಬಿಡುತ್ತಿಲ್ಲ. ಆದ್ದರಿಂದ ಈ ಸಮಸ್ಯೆ ಪರಿಹರಿಸುವುದರ ಜತೆಗೆ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನು ನೇಮಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರು ಸಚಿವರಲ್ಲಿ ಮನವಿ ಮಾಡಿದರು.
 
ಜಿಲ್ಲೆಯಲ್ಲಿ ಒಂದು ಸುಸಜ್ಜಿತವಾದ ಶಾದಿಮಹಲ್ ನಿರ್ಮಿಸಲು ₹ 2 ಕೋಟಿ ಅನುದಾನ ನೀಡಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮನವಿ ಮಾಡಿದರು.
 
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್ ರಂಗರಾಜನ್, ವಕ್ಫ್ ಮಂಡಳಿ ಜಿಲ್ಲಾ ಅಧ್ಯಕ್ಷ ಬಿ.ಕೆ.ರಹಮತ್‌ವುಲ್ಲಾ, ವಕೀಲ ಮುಸ್ತಕ ಕಿಲ್ಲೆದಾರ್, ರಾಜ್ಯ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ರಿಯಾಜ್ ಅಹಮದ್‌ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.