ADVERTISEMENT

ವರ್ಷದ ಮೊದಲೇ ಅಭ್ಯರ್ಥಿ: ಗೆಲುವಿಗೆ ಕಾರ್ಯತಂತ್ರ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 6:26 IST
Last Updated 11 ಜುಲೈ 2017, 6:26 IST

ಶಿವಮೊಗ್ಗ:  ಸಮಯದ ಅಭಾವ ಕಾರಣ ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದ ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಪಿ.ದಿನೇಶ್ ಅವರು ಈ ಬಾರಿ ಭಾರಿ ಅಂತದ ಮೂಲಕ ಗೆಲುವು ಸಾಧಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು  ಜಿಲ್ಲಾ ಘಟಕದ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಕೋರಿದರು.

ಒಂದು ವರ್ಷ ಮೊದಲೇ ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿ ಘೋಷಿಸಿದೆ. ಈ ಸಮಯದ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು. ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳಲ್ಲಿ ವ್ಯಾಪಕ ನೋಂದಣಿ ಮಾಡಿಸಬೇಕು. ಗೆಲುವಿಗೆ ಕಾರ್ಯತಂತ್ರ  ರೂಪಿಸಬೇಕು  ಎಂದು  ಸೋಮವಾರ  ಪತ್ರಿಕಾಗೋಷ್ಠಿ  ಯಲ್ಲಿ ಸಲಹೆ  ನೀಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಜನಪರ ಯೋಜನೆ ಜಾರಿಗೊಳಿಸಿದ್ದಾರೆ. ರೈತರ ಸಾಲ ಮನ್ನಾದಂತಹ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಜನರೂ ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ. ಇದೆಲ್ಲವೂ ಚುನಾವಣೆಯಲ್ಲಿ ಪಕ್ಷಕ್ಕೆ ವರವಾಗಲಿದೆ ಎಂದರು.

ADVERTISEMENT

‘ಬಿಜೆಪಿ ಧರ್ಮ, ಧರ್ಮಗಳ ನಡುವೆ ವೈಮನಸ್ಸು ಹುಟ್ಟುಹಾಕುತ್ತಿದೆ. ಕೆಲವು  ಸಂಘಟನೆಗಳು ಹಿಂದೂ ಪರವಾಗಿ ಕೆಲಸ ಮಾಡದೇ ಬಿಜೆಪಿ ಪರವಾಗಿವೆ. ಬಿಜೆಪಿ ಹಿಂದೂಗಳನ್ನು ಗುತ್ತಿಗೆ ಪಡೆದುಕೊಂಡಂತೆ ಭ್ರಮಿಸುತ್ತಿದೆ ಎಂದು ಕುಟುಕಿದರು.

ಅಭ್ಯರ್ಥಿ ಎಸ್.ಪಿ. ದಿನೇಶ್ ಮಾತನಾಡಿ, ‘2012ರಲ್ಲಿ ನಡೆದ ಚುನಾವಣೆಯಲ್ಲಿ  ಅಲ್ಪಮತಗಳ ಅಂತರದಿಂದ ಬಿಜೆಪಿಯ ಡಿ.ಎಚ್. ಶಂಕರಮೂರ್ತಿ ಅವರ ವಿರುದ್ಧ ಪರಾ ಭವಗೊಂಡಿದ್ದೆ. ಈ ಬಾರಿ  ಎಲ್ಲರ ಸಹ ಕಾರ ಪಡೆದು ಚುನಾವಣೆ ಎದುರಿಸು ತ್ತೇನೆ’ ಎಂದು ಭರವಸೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ‘ಕಾಡಾ’ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಪಾಲಿಕೆ ಸದಸ್ಯರಾದ ಪಿ.ವಿ ವಿಶ್ವನಾಥ್, ಎಚ್.ಸಿ. ಯೋಗೀಶ್, ಪ್ರಮುಖರಾದ ರವಿಕುಮಾರ್, ನಾಗರಾಜ್, ಇಸ್ಮಾಯಿಲ್ ಖಾನ್ ಉಪಸ್ಥಿತರಿದ್ದರು.

***

‘ಈಶ್ವರಪ್ಪಗೆ ನೈತಿಕತೆ ಇಲ್ಲ’
ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸುತ್ತೇನೆ ಎಂದು ಹೇಳುವ ನೈತಿಕತೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ ಅವರಿಗೆ ಇಲ್ಲ ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಟೀಕಿಸಿದರು.

ಈ ಹಿಂದೆ ಕಂದಾಯ ಸಚಿವರಾಗಿದ್ದ ಈಶ್ವರಪ್ಪ ಅವರು ಕೊಳಚೆ ನಿವಾಸಿಗಳಿಗೆ ನಕಲಿ ಹಕ್ಕುಪತ್ರ ಕೊಡಿಸಿದ್ದರು. ಈಗ ಮತ್ತೆ ಹಕ್ಕುಪತ್ರ ಕೊಡಿಸುವುದಾಗಿ ಮುಗ್ಧ ಜನರ ನಂಬಿಸಿದ್ದಾರೆ ಎಂದು ಛೇಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.