ADVERTISEMENT

ವಿಜ್ಞಾನ, ಸಾಹಿತ್ಯ ಪರಸ್ಪರ ಪೂರಕ: ಅನಂತ್

​ಪ್ರಜಾವಾಣಿ ವಾರ್ತೆ
Published 21 ಮೇ 2017, 5:07 IST
Last Updated 21 ಮೇ 2017, 5:07 IST

ಶಿವಮೊಗ್ಗ: ವಿಜ್ಞಾನ ಬರಹಗಳಲ್ಲೂ ಸಾಹಿತ್ಯ ಅಡಕವಾಗಿರಬೇಕು. ವಿಜ್ಞಾನ ಹಾಗೂ ಸಾಹಿತ್ಯ ಒಂದಕ್ಕೊಂದು ಪೂರಕವಾಗಿರಬೇಕು ಎಂದು ವಿಜ್ಞಾನ ಲೇಖಕ ಡಾ.ಟಿ.ಆರ್.ಅನಂತರಾಮು ಪ್ರತಿಪಾದಿಸಿದರು.

ಕರ್ನಾಟಕ ಸಂಘದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಜೀವಮಾನ ಸಾಧನೆಗಾಗಿ ನೀಡುವ ‘ಡಾ.ಶಿವರಾಮ ಕಾರಂತ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯದಲ್ಲಿ ವಿಜ್ಞಾನ ಕ್ಷೇತ್ರದ ಮೇಲೆ ಇನ್ನಷ್ಟು ಬರವಣಿಗೆ ಮೂಡಿ ಬರಬೇಕಿದೆ’ ಎಂದರು.

ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟರ್‌ನಂತಹ ಅಂತರ್ಜಾಲ ತಾಣಗಳಿಂದಲೇ  ಜನರನ್ನು ಗುರುತಿಸ ಲಾಗುತ್ತದೆ. ಸಂಪೂರ್ಣ ಅಂತರ್ಜಾಲಕ್ಕೆ ಎಲ್ಲರೂ ಮೊರೆ ಹೋಗಿದ್ದಾರೆ. ಲೈಕ್‌ಗಳ ಮೂಲಕ ಜನಪ್ರಿಯತೆ ಅಳೆಯಲಾಗುತ್ತಿದೆ. ಇಂತಹ ಜನಪ್ರಿಯ ಜಾಲತಾಣಗಳು  ಸಾಮಾಜಿಕ ಕಳಕಳಿಗೆ ಬಳಕೆಯಾಗಬೇಕು. ರಕ್ತದಾನಿಗಳ ಗುಂಪು, ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವ ಗೆಳೆಯರ ಗುಂಪು ಸೃಷ್ಟಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಬೆಳ್ಳಾರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ನರೇಂದ್ರ ರೈ ದೇರ್ಲ ಮಾತನಾಡಿ, ‘ವಿಜ್ಞಾನ ಮತ್ತು ಸಾಹಿತ್ಯದ ನಡುವೆ ಒಂದಕ್ಕೊಂದು ಅಂತರ ಸಂಬಂಧವಿದೆ. ಅವುಗಳ ನಡುವೆ ಇರುವ ವರ್ತಮಾನದ ವಿಚಾರಗಳತ್ತ ಗಮನಹರಿಸಬೇಕು. ವಿಜ್ಞಾನ, ಸಾಹಿತ್ಯ ಸಮ್ಮಿಲನಕ್ಕೆ ದ್ಯೋತಕವಾಗಿ ಕರ್ನಾಟಕ ಸಂಘವು ಅರ್ತಿಕಜೆ ಕೃಷ್ಣಭಟ್ ಹಾಗೂ ಟಿ.ಆರ್. ಅನಂತರಾಮು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ’ ಎಂದು ಶ್ಲಾಘಿಸಿದರು.

‘ಬಡತನದಲ್ಲೇ ಬಾಲ್ಯ ಕಳೆದ ಅರ್ತಿಕಜೆ ಕೃಷ್ಣಭಟ್ ಅವರು ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಶಿಷ್ಯವೃಂದಕ್ಕೆ ಕಲೆ, ಸಂಸ್ಕೃತಿ, ಸಾಹಿತ್ಯದ ಅಭಿರುಚಿ ಧಾರೆ ಎರೆದಿದ್ದಾರೆ. ಅವರ ಸಂಶೋಧನಾ ವಿಚಾರಗಳು  ವಿದ್ಯಾರ್ಥಿಗಳ ಅಧ್ಯಯನಕ್ಕೆ ಸೂಕ್ತ ಪರಿಕರ ಒದಗಿಸುತ್ತವೆ’ ಎಂದರು.

ಕನ್ನಡ ಗಣಕ ಪರಿಷತ್ ಕಾರ್ಯದರ್ಶಿ ಜಿ.ಎನ್. ನರಸಿಂಹಮೂರ್ತಿ ಮಾತನಾಡಿ, ‘ಅನಂತರಾಮು ವಿಜ್ಞಾನ ಸಾಹಿತ್ಯದಲ್ಲಿ ಕನ್ನಡಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಭೂ ವಿಜ್ಞಾನದ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ. 55 ಸ್ವತಂತ್ರ ಕೃತಿ, 12 ಅನುವಾದ, 32 ಸಂಶೋಧನೆ ಹಾಗೂ 7 ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ವಿಜ್ಞಾನ ಕ್ಷೇತ್ರದ ಮರು ಅವಲೋಕನಕ್ಕೆ ಓದುಗರ ಪಡೆಯನ್ನೇ ಸೃಷ್ಟಿಸಿದ್ದಾರೆ’ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಡಿ.ಎಸ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ವಿಜಯಾ ಶ್ರೀಧರ್ ಪ್ರಾಸ್ತಾವಿಕ ಮಾತನಾಡಿದರು. ಎಚ್.ಎಸ್. ನಾಗಭೂಷಣ, ಕೆ.ಜಿ. ವೆಂಕಟೇಶ ಉಪಸ್ಥಿತರಿದ್ದರು. ಪ್ರೊ.ಅರ್ತಿಕಜೆ ಕೃಷ್ಣಭಟ್ ಅವರಿಗೆ ‘ಡಾ.ಶಂಬಾ ಜೋಶಿ ಸಂಶೋಧನಾ ಸಾಹಿತ್ಯ’ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.