ADVERTISEMENT

‘ವಿದ್ಯಾರ್ಥಿ ಸಮೂಹದ ಕೇಂದ್ರಬಿಂದು ಶಿಕ್ಷಕ’

ಸರ್ಕಾರಿ ನೌಕರರ ಸಂಘದಿಂದ ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 5:27 IST
Last Updated 10 ಜುಲೈ 2017, 5:27 IST

ಶಿವಮೊಗ್ಗ: ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ. ರಾಕೇಶ್ ಕುಮಾರ್ ಹೇಳಿದರು.
ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಭಾನುವಾರ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕವು ವಿವಿಧ ಕ್ಷೇತ್ರಗಳ ಸಾಧಕರಿಗೆ ಹಾಗೂ ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ  ಅವರು ಮಾತನಾಡಿದರು.

ವೈದ್ಯರು ಚಿಕಿತ್ಸೆ ವೇಳೆ ತಪ್ಪೆಸಗಿದರೆ ಒಬ್ಬ ರೋಗಿ ಸಾಯುತ್ತಾನೆ. ಆದರೆ, ಬೋಧನೆ ಮಾಡುವ ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದೆ ಇದ್ದಲ್ಲಿ ತರಗತಿಯಲ್ಲಿರುವ ಇಡೀ ವಿದ್ಯಾರ್ಥಿ ಸಮೂಹ ದಾರಿ ತಪ್ಪುತ್ತದೆ. ಆ ವರ್ಷ ಹೊರಬರುವ ಫಲಿತಾಂಶದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಭವಿಷ್ಯ ಸುಭದ್ರವಾಗಿರಬೇಕಾದರೆ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಉತ್ತಮ ತರಬೇತಿ ಹಾಗೂ ಸದ್ವಿಚಾರಗಳನ್ನು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ತುಂಬಬೇಕು ಎಂದು ಸಲಹೆ ನೀಡಿದರು.

ADVERTISEMENT

ಸಮಾಜದಿಂದ ಪಡೆದುಕೊಂಡಿದ್ದನ್ನು ಮತ್ತೆ ಸಮಾಜಸೇವೆ ಮಾಡಿ, ತೀರಿಸಬೇಕು. ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು. ದೇಶದ ಆಡಳಿತ ವ್ಯವಸ್ಥೆಯಲ್ಲಿ ಭಾಗಿಯಾಗಲು ಕೆಪಿಎಸ್‌ಸಿ ಹಾಗೂ ಯುಪಿಎಸ್‌ಸಿ ಪರೀಕ್ಷೆ ಆಯ್ಕೆ ಮಾಡಿಕೊಂಡು, ಉನ್ನತ ಸ್ಥಾನಕ್ಕೇರಬೇಕು ಎಂದು ಸಲಹೆ ನೀಡಿದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ 47ನೇ ರ‍್ಯಾಂಕ್ ಪಡೆದ ಧ್ಯಾನಚಂದ್ ಮಾತನಾಡಿ, ‘ವಿದ್ಯಾರ್ಥಿ ಜೀವನದಲ್ಲಿ ಅನಗತ್ಯ ವಿಚಾರಗಳ ಕಡೆಗೆ ಗಮನ ಕೊಡಬಾರದು. ಸಾಧನೆ ಬಗ್ಗೆ ಚಿಂತಿಸಬೇಕು. ಅಗತ್ಯಬಿದ್ದಲ್ಲಿ ಶಿಕ್ಷಕರ ಹಾಗೂ ಪೋಷಕರ ಸಹಕಾರ ಪಡೆಯಬೇಕು’ ಎಂದರು.

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ರಾಜಪ್ಪ ಮಾತನಾಡಿ, ‘ಮನುಷ್ಯ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಬೇಕಾದರೆ ಗುರುಗಳು ಪ್ರಮುಖ ಪಾತ್ರ ವಹಿಸುತ್ತಾರೆ. ದೇಶ ಸೇವೆ ಮಾಡಲು ಯುವಕರು ಸೈನ್ಯಕ್ಕೆ ದಾಖಲಾಗಬೇಕು’ ಎಂದು ಸಲಹೆ ನೀಡಿದರು.

ಕೆಪಿಎಸ್‌ಸಿ ಹಾಗೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಅಧ್ಯಯನದಲ್ಲಿ ತೊಡಗುವುದನ್ನು ನಿಲ್ಲಿಸಬಾರದು. ಓದುವ ಕ್ರಿಯೆ ಯಾವಾಗಲೂ ನಿರಂತರವಾಗಿರಬೇಕು. ಪ್ರತಿಭಾವಂತರನ್ನು ಹಾಗೂ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಸಂಘದ ಕೆಲಸ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.

ನೌಕರರ ಸಂಘದ ಗೌರವಾಧ್ಯಕ್ಷ ಚಂದಪ್ಪ, ಕಾರ್ಯದರ್ಶಿ ಮೋಹನ್ ಕುಮಾರ್, ಕೋಶಾಧ್ಯಕ್ಷ ಐ.ಪಿ. ಶಾಂತರಾಜ್, ಬಸವನಗೌಡ್ರು, ಸತೀಶ್, ಮುರಳೀಧರ್, ರಘುರಾಮ್ ದೇವಾಡಿಗ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.

ಯುಪಿಎಸ್‌ಸಿ  ಪರೀಕ್ಷೆಯಲ್ಲಿ 47ನೇ ರ‍್ಯಾಂಕ್ ಪಡೆದ ಪ್ರತಿಭಾವಂತ ಧ್ಯಾನಚಂದ್, ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದ ರಾಜಪ್ಪ ಹಾಗೂ ಆಶಾಲತಾ ಅವರನ್ನು ಅಭಿನಂದಿಸಲಾಯಿತು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಶಿವಮೊಗ್ಗ ತಾಲ್ಲೂಕಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುನಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ನಂತರ ಸಂಘದ ವಾರ್ಷಿಕ ಸಭೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.