ADVERTISEMENT

ವಿಶ್ವದ ಮೇಲೆ ನಿಂತು ಯೇಸುವಿನ ಸ್ವಾಗತ

ಸೇಕ್ರೆಡ್ ಹಾರ್ಟ್ ಚರ್ಚ್ ಪ್ರವೇಶ ದ್ವಾರದ ಬಳಿ 10. 3 ಅಡಿ ಎತ್ತರದ ಪ್ರತಿಮೆ

ಚಂದ್ರಹಾಸ ಹಿರೇಮಳಲಿ
Published 14 ಡಿಸೆಂಬರ್ 2017, 9:06 IST
Last Updated 14 ಡಿಸೆಂಬರ್ 2017, 9:06 IST
ವಿಶ್ವದ ಮೇಲೆ ನಿಂತು ಯೇಸುವಿನ ಸ್ವಾಗತ
ವಿಶ್ವದ ಮೇಲೆ ನಿಂತು ಯೇಸುವಿನ ಸ್ವಾಗತ   

ಶಿವಮೊಗ್ಗ: ಬಿ.ಎಚ್‌. ರಸ್ತೆಯ ಪವಿತ್ರ ಹೃದಯ ಪ್ರಧಾನಾಲಯ (ಸೇಕ್ರೆಡ್ ಹಾರ್ಟ್ ಚರ್ಚ್) ಪ್ರವೇಶ ದ್ವಾರದ ಬಳಿ ನಿರ್ಮಿಸುತ್ತಿರುವ 10.3 ಅಡಿ ಎತ್ತರದ ಯೇಸು ಪ್ರಭುವಿನ ಪುತ್ಥಳಿ ಈಗ ಜನಾಕರ್ಷಣೆಯ ಕೇಂದ್ರವಾಗಿದೆ.

ಇಂಗ್ಲೆಂಡ್‌ನ ಥೇಮ್ಸ್ ನದಿ ದಂಡೆಯ ಬಳಿ ಸ್ಥಾಪಿಸಿರುವ ಬಸವೇಶ್ವರರ ಪ್ರತಿಮೆಯ ಶಿಲ್ಪಿ ಶಿವಮೊಗ್ಗದ ಕಾಶಿನಾಥ್ ಅವರ ಕೈಚಳಕದಲ್ಲಿ ಸುಂದರ ಯೇಸುವಿನ ಕಲಾಕೃತಿ ಮೂಡಿಬಂದಿದೆ. 35 ಅಡಿ ಎತ್ತರದ ಗೋಪುರದ ಮೇಲೆ 4 ಅಡಿ ಎತ್ತರದ ವಿಶ್ವಗೋಳ ನಿರ್ಮಿಸಿ, ಅದರ ಮೇಲೆ 10.3 ಅಡಿ ಎತ್ತರದ ಪುತ್ಥಳಿ ನಿಲ್ಲಿಸಲಾಗಿದೆ. ಎರಡೂ ಕೈಚಾಚಿ ನಗುಮುಖದಿಂದ  ಜನರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಿರುವಂತೆ ಭಾಸವಾಗುತ್ತದೆ.

ಬುನಾದಿಯಿಂದಲೇ ಪ್ರತಿಮೆಗೆ ಭದ್ರತೆ: ಎತ್ತರದಲ್ಲಿ ಪ್ರತಿಷ್ಠಾಪಿಸಿರುವ ಪ್ರತಿಮೆಗೆ ಗಾಳಿ, ಮಳೆಯಿಂದ ಎಂದೂ ಹಾನಿ ಆಗಬಾರದು ಎಂದು ಸಾಕಷ್ಟು ಮುನ್ನೆಚ್ಚರಿಕೆ ವಹಿಸಲಾಗಿದೆ.

ADVERTISEMENT

ಬುನಾದಿಯಿಂದಲೇ ಕಬ್ಬಿಣದ ರಾಡ್‌ಗಳನ್ನು ಬಳಸಿ ಮೂರ್ತಿಯನ್ನು ಬಿಗಿಯಾಗಿ ಹಿಡಿದಿಡಲಾಗಿದೆ. ಪಿಲ್ಲರ್‌ಗಳನ್ನು ಗೋಪುರದ ಮಾದರಿಯಲ್ಲಿ ನಿರ್ಮಿಸಲಾಗಿದ್ದು, ಅದರ ಮೇಲೆ ವಿಶ್ವಗೋಳ, ಗೋಳದ ಮೇಲೆ ಪ್ರತಿಮೆ ನಿರ್ಮಿಸಲಾಗಿದೆ.

ಸ್ಥಳದಲ್ಲೇ ರೂಪಿಸಿದ ಕಲಾಕೃತಿ: ಸಾಮಾನ್ಯವಾಗಿ ಯಾವುದೇ ಪ್ರತಿಮೆ ನಿರ್ಮಿಸುವಾಗ ಬೇರೆ ಕಡೆ ಸಿದ್ಧಪಡಿಸಿಕೊಂಡು ನಂತರ ನಿರ್ದಿಷ್ಟ ಸ್ಥಳದಲ್ಲಿ ಸ್ಥಾಪಿಸಲಾಗುತ್ತದೆ. ಆದರೆ, ಇಲ್ಲಿ ಸಾಕಷ್ಟು ಎತ್ತರದಲ್ಲಿ ಸ್ಥಾಪಿಸುತ್ತಿರುವ ಕಾರಣ ಸುರಕ್ಷತೆ ದೃಷ್ಟಿಯಿಂದ ನಿರ್ಮಾಣವಾಗುತ್ತಿರುವ ಸ್ಥಳದಲ್ಲೇ ಕಲಾಕೃತಿ ರಚಿಸಲಾಗಿದೆ. ಕಲಾವಿದ ಕಾಶಿನಾಥ್ 35 ಅಡಿ ಎತ್ತರದಲ್ಲೇ ಕುಳಿತು ಕೆಲಸ ಮಾಡಿದ್ದಾರೆ.

ಪವಿತ್ರ ಹೃದಯ ಪ್ರಧಾನಾಲಯ ಶಿವಮೊಗ್ಗ, ಚಿತ್ರಗುರ್ಗ, ದಾವಣಗೆರೆ ಒಳಗೊಂಡ ಧರ್ಮ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಈ ಧರ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ 31 ಚರ್ಚ್‌ಗಳಿವೆ. ಯಾವ ಚರ್ಚ್‌ನಲ್ಲೂ ಇಂತಹ ಪ್ರತಿಮೆ ಸ್ಥಾಪಿತವಾಗಿಲ್ಲ.

ಹಲವು ವರ್ಷಗಳ ಹಿಂದೆ ರೂಪಿಸಿದ್ದ ಯೋಜನೆ: ಈ ಯೋಜನೆಯ ರೂಪುರೇಷೆ ಹಲವು ವರ್ಷಗಳ ಹಿಂದೆಯೇ ಸಿದ್ಧವಾಗಿತ್ತು. ಹರಿಹರದ ವಾಸ್ತುಶಿಲ್ಪಿ ಆಲ್ಫಾನ್ಸೊ ಅವರು ನೀಲ ನಕಾಶೆ ಸಿದ್ಧಪಡಿಸಿಕೊಟ್ಟಿದ್ದರು. ಆದರೆ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಧರ್ಮಗುರುಗಳಾಗಿ ಗಿಲ್ಬರ್ಟ್ ಲೋಬೊ ಬಂದ ನಂತರ ಸಮಿತಿಯ ಸಲಹೆ ಮೇಲೆ ಯೋಜನೆಗೆ ಚಾಲನೆ ನೀಡಿದರು. ಜೂನ್‌ನಿಂದ ಕಾಮಗಾರಿ ಆರಂಭಿಸಲಾಗಿತ್ತು. ಡಿ. 25 ಬೆಳಗಿನ ಜಾವ 1.30ರ ಸುಮಾರಿಗೆ ಪುತ್ಥಳಿ ಅನಾವರಣಗೊಳಿಸಲು ಸಿದ್ಧತೆ ನಡೆದಿದೆ.

ಶಿವಮೊಗ್ಗದಲ್ಲಿ ಸೇಕ್ರೆಡ್ ಹಾರ್ಟ್, ರಾಗಿಗುಡ್ಡದ ಸಂತ ಆಂಥೋಣಿ ಚರ್ಚ್, ಶರಾವತಿ ನಗರದ ಬಾಲ ಯೇಸು ಮಂದಿರ, ಗೋಪಾಳದ ಗುಡ್‌ಶಪರ್ಡ್‌ ಚರ್ಚ್ ಸೇರಿ 4 ರೋಮನ್ ಕ್ಯಾಥೋಲಿಕ್‌ ಚರ್ಚ್‌ಗಳಿವೆ. ಸೇಕ್ರೆಡ್ ಹಾರ್ಟ್ ಅತ್ಯಂತ ಪ್ರಾಚೀನ ಚರ್ಚ್. 1847ರಲ್ಲಿ ಚರ್ಚ್‌ ಕಟ್ಟಡ ನಿರ್ಮಿಸಲಾಗಿತ್ತು. ಹಲವು ಬಾರಿ ನವೀಕರಣಗೊಂಡ ಈ ಚರ್ಚ್‌ ಅನ್ನು 1998ರಲ್ಲಿ ಮೊದಲ ಬಿಷಪ್ ಇಗ್ನಿಶಿಯಸ್ ಪಿಂಡೊ ಉದ್ಘಾಟಿಸಿದ್ದರು.

ಪ್ರಸ್ತುತ ಇದರ ವ್ಯಾಪ್ತಿಯಲ್ಲಿ 535 ಕುಟುಂಬಗಳು ಬರುತ್ತವೆ. ಆಡಳಿತದ ನಿರ್ವಹಣೆಯಲ್ಲಿ ಧರ್ಮ ಗುರುಗಳಿಗೆ ಸಹಕರಿಸಲು 42 ಜನರ ಸಲಹಾ ಸಮಿತಿ ಇದೆ. ಒಂದು ಕಾಲೇಜು, ಮೂರು ಪ್ರೌಢಶಾಲೆ, ಮೂರು ಪ್ರಾಥಮಿಕ ಶಾಲೆಗಳು ಆವರಣದ ಒಳಗೆ ಕಾರ್ಯನಿರ್ವಹಿಸುತ್ತಿವೆ.

‘ಕಲಾವಿದ ಕಾಶಿನಾಥ್ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಪಿಲ್ಲರ್‌ಗೆ ಗ್ರಾನೈಟ್ ಅಳವಡಿಸಲಾಗುವುದು. ಕ್ರಿಸ್‌ಮಸ್‌ ದಿನ ಲೋಕಾರ್ಪಣೆ ಮಾಡಲಾಗುವುದು. ನಂತರ ಪ್ರತಿ ದಿನ ಸಂಜೆ ವಿದ್ಯುತ್ ದೀಪಗಳಿಂದ ಪುತ್ಥಳಿ ಕಂಗೊಳಿಸಲಿದೆ. ಖರ್ಚು ವೆಚ್ಚ ಕುರಿತು ಖಚಿತ ಲೆಕ್ಕ ಹಾಕಿಲ್ಲ. ಎಲ್ಲರೂ ಸೇವಾ ಮನೋಭಾವದಿಂದ ಕೆಲಸ ಮಾಡಿದ್ದಾರೆ. ಎಲ್ಲವೂ ಸೇರಿ ₹ 20ರಿಂದ ₹ 28 ಲಕ್ಷ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ’ ಎಂದು ಧರ್ಮಾಧಕ್ಷರಾದ ಗಿಲ್ಬರ್ಟ್‌ ಲೋಬೊ ಪ್ರತಿಕ್ರಿಯೆ ನೀಡಿದರು.

**

ಯೇಸುಪ್ರಭುವಿನ ಈ ಸುಂದರ ಪುತ್ಥಳಿಯನ್ನು ಡಿ.24 ಮಧ್ಯರಾತ್ರಿ ಕಾರ್ಯಕ್ರಮಗಳು ಮುಗಿದ ನಂತರ ಅನಾವರಣಗೊಳಿಸಲಾಗುವುದು.

–ಗಿಲ್ಬರ್ಟ್‌ ಲೋಬೊ, ಧರ್ಮಾಧ್ಯಕ್ಷ, ಸೇಕ್ರೇಡ್ ಹಾರ್ಟ್ ಚರ್ಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.