ADVERTISEMENT

‘ಸಾಮೂಹಿಕ ವಿವಾಹ ಬಡವರಿಗೆ ವರದಾನ’

ಹೊಳೆಲಿಂಗೇಶ್ವರ ಕ್ಷೇತ್ರ ಅಭಿವೃದ್ಧಿಗೆ ₹10 ಲಕ್ಷ ಕೊಡುಗೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 5:17 IST
Last Updated 18 ಫೆಬ್ರುವರಿ 2017, 5:17 IST
ಆನವಟ್ಟಿ ಸಮೀಪದ ಬಂಕಸಾಣದಲ್ಲಿ ಶುಕ್ರವಾರ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಆನವಟ್ಟಿ ಸಮೀಪದ ಬಂಕಸಾಣದಲ್ಲಿ ಶುಕ್ರವಾರ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.   
ಆನವಟ್ಟಿ:  ‘ಸತತ ಬರಗಾಲದಿಂದ ತತ್ತರಿಸಿರುವ ಸೊರಬ ತಾಲ್ಲೂಕಿನಲ್ಲಿ ಬಡವರಿಗೆ ಸಾಮಾಜಿಕ ಭದ್ರತೆ ಒದಗಿಸಲು ಸಾಮೂಹಿಕ ವಿವಾಹ ವರದಾನವಾಗಿದೆ’ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ತಿಳಿಸಿದರು. 
 
ಶ್ರೀ ರೇಣುಕಾಂಬ ಗ್ರಾಮೀಣ ಸೇವಾ ಸಂಸ್ಥೆ ಮತ್ತು ಹೊಳೆಲಿಂಗೇಶ್ವರ ದೇಗುಲ ಜೀರ್ಣೋದ್ಧಾರ ಸಮಿತಿ ಆಶ್ರಯದಲ್ಲಿ ಬಂಕಸಾಣದಲ್ಲಿ ಶುಕ್ರವಾರ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು. 
 
‘ಪ್ರಶಾಂತ ವಾತಾವರಣದಲ್ಲಿ ದೇವರ ಹೆಸರಲ್ಲಿ ನಡೆಸುವ ಶುಭ ಕಾರ್ಯಕ್ರಮದಲ್ಲಿ ರಾಜಕೀಯ ವಿಚಾರ ಮಾತನಾಡುವುದಿಲ್ಲ. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಉದ್ಯಮಿ ಶ್ರೀಧರ ಹುಲ್ತಿಕೊಪ್ಪ ಮತ್ತು ಸಮಿತಿ ಮುಖಂಡರು ಆಸಕ್ತಿ ವಹಿಸಿ ಬಡವರ ಹಾಗೂ ಪವಿತ್ರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ರಾಜಕೀಯ ಲಾಭಕ್ಕೆ ನನ್ನನ್ನು ಆಹ್ವಾನಿಸದೇ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಕೋರಿಕೊಂಡಿರುವುದು ಅವರ ಸಾಮಾಜಿಕ ಕಳಕಳಿಯನ್ನು ತೋರಿಸುತ್ತದೆ’ ಎಂದರು.
 
‘ಬಂಕಸಾಣ ಹೊಳೆಲಿಂಗೇಶ್ವರ ಕ್ಷೇತ್ರದ ಅಭಿವೃದ್ಧಿಗೆ ₹10 ಲಕ್ಷ ನೀಡುತ್ತೇನೆ. ಮುಜರಾಯಿ ಇಲಾಖೆಯಿಂದ ಅಗತ್ಯ ನೆರವು ಕಲ್ಪಿಸಿಕೊಡಲು ಯತ್ನಿಸುತ್ತೇನೆ. ಕೂಡಲಸಂಗಮ ಮಾದರಿಯಲ್ಲಿ ಈ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಬೇಕು ಎಂಬ ಶ್ರೀಧರ ಅವರ ಕನಸನ್ನು ಸಾಕಾರಗೊಳಿಸಲು ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು’ ಎಂದು ಅವರು ತಿಳಿಸಿದರು. 
 
19 ಜೋಡಿಗಳ ವಿವಾಹ ನಡೆದವು. ಅದರಲ್ಲಿ 13 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಐದು ಮತ್ತು ಸಾಮಾನ್ಯ ವರ್ಗದ ಒಂದು ಜೋಡಿ ಇದ್ದವು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 
 
ಗವಿಮಠದ ನಾಲ್ವಡಿ ಶಾಂತಲಿಂಗ ಸ್ವಾಮೀಜಿ, ಶಾಂತಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಗೊಗ್ಗೆಹಳ್ಳಿ ಮಠದ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಡೆ ಮಠದ ಮಹಾಂತ ಸ್ವಾಮೀಜಿ, ಮೂಡಿ ಮಠದ ಶಿವಾನಂದ ಸ್ವಾಮೀಜಿ, ಲಕ್ಕವಳ್ಳಿಯ ವೃಷಭಸೇನ ಸ್ವಾಮೀಜಿ, ಬಿಜೆಪಿಯ ಮುಖಂಡರಾದ ದತ್ತಾತ್ರೇಯ, ಜಿಲ್ಲಾ ಪಂಚಾಯ್ತಿ ಸದಸ್ಯ ಶಿವಲಿಂಗೇಗೌಡ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ವಿಜಯಕುಮಾರ್, ಕಮಲ ಕುಮಾರ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಂಗಮ್ಮ, ಸಮಿತಿ ಅಧ್ಯಕ್ಷ ರಾಜುಗೌಡ  ಹಾಗೂ ಸದಸ್ಯರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.