ADVERTISEMENT

ಸುಗಮ ಸಂಚಾರಕ್ಕೆ ಅಣಿಯಾದ ಮಾದರಿ ಕಾಮಗಾರಿ

ಶಿವಾನಂದ ಕರ್ಕಿ
Published 14 ಸೆಪ್ಟೆಂಬರ್ 2017, 9:57 IST
Last Updated 14 ಸೆಪ್ಟೆಂಬರ್ 2017, 9:57 IST
ತೀರ್ಥಹಳ್ಳಿ ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಸಿದ್ಧವಾದ ಆಜಾದ್‌ ರಸ್ತೆಯ ವಿಹಂಗಮ ನೋಟ
ತೀರ್ಥಹಳ್ಳಿ ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಸಿದ್ಧವಾದ ಆಜಾದ್‌ ರಸ್ತೆಯ ವಿಹಂಗಮ ನೋಟ   

ತೀರ್ಥಹಳ್ಳಿ: ಪ್ರಕೃತಿ ಸೌಂದರ್ಯವನ್ನು ತನ್ನೊಡಲೊಳಗೆ ಹುದುಗಿಸಿಕೊಂಡಿರುವ ತೀರ್ಥಹಳ್ಳಿ ಪಟ್ಟಣದ ಅಂದವನ್ನು ಹೊಸದಾಗಿ ನಿರ್ಮಾಣಗೊಂಡ ಆಜಾದ್‌ ರಸ್ತೆ ಇಮ್ಮಡಿಗೊಳಿಸಿದೆ. ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಆಜಾದ್‌ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು, ವಾಹನ ಸವಾರರು ತಮ್ಮೂರಿನ ರಸ್ತೆ ಬಗ್ಗೆ ಹೆಮ್ಮೆ, ಅಭಿಮಾನದಿಂದ ಮಾತಾಡಿಕೊಳ್ಳುವಂತಾಗಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿ ಮುಂದಿನ 30 ವರ್ಷಗಳ ಅವಧಿಯ ದೂರದೃಷ್ಟಿಯ ಯೋಜನೆ ಮೂಲಕ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಅಭಿವೃದ್ಧಿಪಡಿಸಿದೆ.

ಲೋಕೋಪಯೋಗಿ ಇಲಾಖೆಯಿಂದ ₹ 10 ಕೋಟಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ₹ 10 ಕೋಟಿ ಅನುದಾನ ನೀಡಲಾಗಿದೆ. ರಸ್ತೆ ವಿಸ್ತರಣೆಗೆ ಸ್ಥಳ ಬಿಟ್ಟುಕೊಟ್ಟ 186 ಮಂದಿ ಮಾಲೀಕರಲ್ಲಿ ಇದುವರೆಗೆ 154 ಮಂದಿಗೆ ಪರಿಹಾರ ಧನವಾಗಿ ₹ 14.30 ಕೋಟಿ ಪಾವತಿಸಲಾಗಿದೆ. 32 ಆಸ್ತಿಗೆ ಪರಿಹಾರಧನವನ್ನು ಬಾಕಿ ಉಳಿಸಿಕೊಳ್ಳಲಾಗಿದೆ.

ಹೊಸದಾಗಿ ನಿರ್ಮಾಣಗೊಂಡ ರಸ್ತೆಯಲ್ಲಿ ಏಕ ಮುಖ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಆಯಕಟ್ಟಿನ ಜಾಗದಲ್ಲಿ ರಸ್ತೆ ದಾಟಲು ಅನುವು ಮಾಡಿಕೊಡಲಾಗಿದೆ. ರಸ್ತೆ ವಿಸ್ತರಣೆ ಪ್ರಕ್ರಿಯೆ ಆರಂಭವಾಗಿ ಐದಾರು ವರ್ಷ ಕಳೆದರೂ ಕಾಮಗಾರಿಯನ್ನು 3 ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ. ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾದ ರಸ್ತೆ ಸುಗಮ ಸಂಚಾರಕ್ಕೆ ಸಿದ್ಧಗೊಂಡಿದ್ದು, ಆಧುನಿಕ ನಗರದ ಸ್ಪರ್ಶ ಪಡೆದುಕೊಂಡಿದೆ.

ADVERTISEMENT

ರಸ್ತೆಗೆ ಚಾಚಿಕೊಂಡಿದ್ದ ಮಂಗಳೂರು ಹೆಂಚಿನ ಕಟ್ಟಡಗಳು ವಾಹನ ಹಾಗೂ ಸಾರ್ವಜನಿಕರ ಓಡಾಟಕ್ಕೆ ಬಹಳ ಕಿರಿಕಿರಿಯನ್ನು ಉಂಟುಮಾಡಿದ್ದವು. ಸುಗಮ ಸಂಚಾರಕ್ಕೆ ರಸ್ತೆಯ ವಿಸ್ತರಣೆ ಅನಿವಾರ್ಯವಾಗಿತ್ತು. ತೀರ್ಥಹಳ್ಳಿ ಪಟ್ಟಣದ ಕೊಪ್ಪ ವೃತ್ತದಿಂದ ದೊಡ್ಡಮನೆಕೇರಿ ಕ್ರಾಸ್‌ ರಸ್ತೆವರೆಗೆ ಮತ್ತು ಸಾಗರ ರಸ್ತೆ ಕಡೆಗೆ ಒಟ್ಟು 960 ಮೀಟರ್‌ ಉದ್ದದ ನಾಲ್ಕು ಪಥದ ಕಾಂಕ್ರೀಟ್‌ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ.

ರಸ್ತೆಯ ಎರಡೂ ಬದಿಗಳಲ್ಲಿ 2,200 ಮೀಟರ್‌ ಉದ್ದದ ಬಾಕ್ಸ್‌ ಚರಂಡಿ ನಿರ್ಮಾಣ, 10 ಅಡ್ಡ ಮೋರಿಗಳು, ನೀರು ಸರಬರಾಜು ಕೊಳವೆಗಳ ಸ್ಥಳಾಂತರ ಕಾಮಗಾರಿ, ರಸ್ತೆಯುದ್ದಕ್ಕೂ ಅಂಚುಗಳಲ್ಲಿ ಕರ್ಬ್‌ಸ್ಟೋನ್‌ ಅಳವಡಿಕೆ, ಪುಟ್‌ಪಾತ್‌ನಲ್ಲಿ ಪಾದಚಾರಿಗಳ ಸಂಚಾರಕ್ಕೆ ಸೆರ‍್ಯಾಮಿಕ್‌ ಟೈಲ್ಸ್‌ ಜೋಡಣೆ, ಗ್ರಿಲ್‌ ಅಳವಡಿಕೆ, ಮಳೆ ನೀರು ಸರಾಗವಾಗಿ ಚರಂಡಿಗೆ ಸೇರುವಂಥ ವ್ಯವಸ್ಥೆ, ಡಿವೈಡರ್‌ ನಡುವೆ ಹಸಿರು ನಿರ್ಮಾಣ, ಸುಸಜ್ಜಿತ ವಿದ್ಯುತ್‌ ದೀಪಗಳ ಅಳವಡಿಕೆ ರಸ್ತೆಯ ಸೊಬಗನ್ನು ಹೆಚ್ಚಿಸುವಂತೆ ಮಾಡಿವೆ.

ಸಾಗರ ಮತ್ತು ಆಗುಂಬೆ ಮಾರ್ಗದ ವೃತ್ತವನ್ನು ವಿಶಾಲಗೊಳಿಸಲಾಗಿದೆ. ಈ ರಸ್ತೆಯ ತಗ್ಗು–ದಿಣ್ಣೆಗಳನ್ನು ಹೊಂದಿಸಿ ಎರಡೂ ಮಾರ್ಗಗಳಲ್ಲಿ ಸಾಂಪ್ರದಾಯಿಕ ಶೈಲಿಯ ಸುಂದರವಾದ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ. ಪೂರ್ಣಗೊಂಡ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದ ತೀರ್ಥಹಳ್ಳಿ ಪಟ್ಟಣ ಹೊಸ ಮೆರಗುಪಡೆದುಕೊಂಡಿದೆ.

ಫುಟ್‌ಪಾತ್‌ ಮೇಲೆ ಅಳವಡಿಸಲಾದ ವಿದ್ಯುತ್‌ ಕಂಬಗಳು ಪಾದಚಾರಿಗಳ ಸಂಚಾರಕ್ಕೆ ಕಿರಿಕಿರಿ ಉಂಟುಮಾಡುತ್ತಿವೆ. ನೆಲದಲ್ಲಿ ವಿದ್ಯುತ್‌ ಕೇಬಲ್‌ಗಳನ್ನು ಅಳವಡಿಸಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು. ವಾಹನ ನಿಲುಗಡೆಗೆ ಸ್ಥಳಾವಕಾಶ ಸಾಲದು ಎಂಬ ಅಸಮಾಧಾನ ಸಾರ್ವಜನಿಕರಿಂದ ವ್ಯಕ್ತವಾಗಿದೆ.

2011ರಲ್ಲಿ ಆಗಿನ ಜಿಲ್ಲಾಧಿಕಾರಿ ಪೊನ್ನುರಾಜ್‌ ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಿದ್ದರು. ಶಾಸಕ ಕಿಮ್ಮನೆ ರತ್ನಾಕರ ಅವರ ಅಧ್ಯಕ್ಷತೆಯಲ್ಲಿ ನಡೆದ ಜನಪ್ರತಿನಿಧಿ, ಅಧಿಕಾರಿ ಹಾಗೂ ವರ್ತಕರ ಸಭೆಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಯ ಲಾಭ, ನಷ್ಟ ಕುರಿತು ಪೊನ್ನುರಾಜ್‌ ಸಮಗ್ರ ಮಾಹಿತಿ ನೀಡಿದ್ದರು.

ಆಜಾದ್‌ ರಸ್ತೆ ಕಾಮಗಾರಿ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹಾದೇವಪ್ಪ ಅವರ ಮೆಚ್ಚುಗೆ ಪಡೆದಿದೆ. ತೀರ್ಥಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಮಾದರಿಯಾಗಿ ಅಳವಡಿಸಿಕೊಳ್ಳುವಂತೆ ಸರ್ಕಾರ ಸೂಚಿಸಿರುವುದು ಪಿಡಬ್ಲ್ಯೂಡಿ ಕಾರ್ಯನಿರ್ವಹಣೆಗೆ ಸಂದ ಪ್ರಸಂಸೆಯಾಗಿದೆ. ಪಿಡಬ್ಲ್ಯೂಡಿ ಅಧೀಕ್ಷಕ ಎಂಜಿನಿಯರ್‌ ಬಿ.ಎಸ್‌.ಬಾಲಕೃಷ್ಣ , ಅಧಿಕಾರಿಗಳು, ಸಿಬ್ಬಂದಿ ಹಾಗೂ ಗುತ್ತಿಗೆದಾರ ಇಬ್ರಾಹಿಂ ಷರೀಫ್‌ ಅವರ ಗುಣಮಟ್ಟದ ಕಾಮಗಾರಿ ನಿರ್ವಹಣೆಯನ್ನು ಸರ್ಕಾರ ಗುರುತಿಸಿದೆ.

ಅಂಕಿ ಅಂಶಗಳು
₹ 20 ಕೋಟಿ ವೆಚ್ಚದಲ್ಲಿ ಕಾಮಗಾರಿ
₹ 14.30 ಕೋಟಿ ಪರಿಹಾರ ವಿತರಣೆ
32 ಬಾಕಿ ಉಳಿದ ಆಸ್ತಿ ಪರಿಹಾರ ಧನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.