ADVERTISEMENT

‘ಸ್ಥಳೀಯ ಸಂಸ್ಥೆಗಳು ಶೋಷಿತರ ದನಿಯಾಗಿರಲಿ’

ಸರ್ಕಾರದ ಸವಲತ್ತು ವಿತರಣೆಯ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 5:11 IST
Last Updated 3 ಫೆಬ್ರುವರಿ 2017, 5:11 IST

ಕಾರ್ಗಲ್: ಸಮಾಜದಲ್ಲಿನ ಶೋಷಿತರು ಮತ್ತು ದುರ್ಬಲ ವರ್ಗದ ಪರವಾಗಿ ಸ್ಥಳೀಯ ಸಂಸ್ಥೆಗಳು ಆಡಳಿತ ನಿರ್ವಹಿಸಲಿ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸಲಹೆ ನೀಡಿದರು.

ಇಲ್ಲಿನ ಪಟ್ಟಣ ಪಂಚಾಯ್ತಿ ವತಿಯಿಂದ ಶ್ರೀ ಶಬರಿ ಮಾತಾಮಂಟಪದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸರ್ಕಾರದ ವಿವಿಧ ಸವಲತ್ತುಗಳ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಲ್ಲಿನ ಭೂ ಪ್ರದೇಶದಲ್ಲಿ ಕೆಪಿಸಿ, ಅರಣ್ಯ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಭೂ ಒಡೆತನ ಹೊಂದಿವೆ. ಪ್ರಮುಖ ಆಡಳಿತ ಯಂತ್ರವಾದ ಪಟ್ಟಣ ಪಂಚಾಯ್ತಿಗೆ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ದಲ್ಲಿ ತಾಂತ್ರಿಕವಾಗಿ ತೊಡಕು ಉಂಟಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಪಂಚಾಯ್ತಿ ವ್ಯಾಪ್ತಿಯ ನಗರ ಪ್ರದೇಶಕ್ಕೆ ಒಳಗೊಂಡಿರುವ ಒಳ ಪ್ರದೇಶಗಳಲ್ಲಿ ಸೂಕ್ತ ಜಾಗ ಗುರುತಿಸಿ ಆಶ್ರಯ ಫಲಾನುಭವಿಗಳಿಗೆ ಶೀಘ್ರದಲ್ಲಿ ನಿವೇಶನ ಹಂಚಿಕೆ ಕಾರ್ಯ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಪಟ್ಟಣ ಪಂಚಾಯ್ತಿಯಿಂದ ಪರಿಶಿಷ್ಟ ಜಾತಿ ವರ್ಗದ 61 ವಿದ್ಯಾರ್ಥಿಗಳಿಗೆ ₹ 2.28 ಲಕ್ಷದ ಶೈಕ್ಷಣಿಕ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಇತರೆ ಹಿಂದುಳಿದ ವರ್ಗದ 188 ವಿದ್ಯಾರ್ಥಿಗಳಿಗೆ ₹ 2.27 ಲಕ್ಷದ ಶೈಕ್ಷಣಿಕ ಪ್ರೋತ್ಸಾಹಧನ ವಿತರಿಸಲಾಗುತ್ತಿದೆ. ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ 30 ರೋಗಿಗಳಿಗೆ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸಲು ₹1.65ಲಕ್ಷ, ಸ್ವಸಹಾಯ ಗುಂಪುಗಳಿಗೆ ₹ 35 ಸಾವಿರ ಆವರ್ತನಿಧಿ, ಸ್ವಚ್ಛಭಾರತ ಯೋಜನೆಯಡಿ ವೈಯುಕ್ತಿಕ ಶೌಚಾಲಯ ನಿರ್ಮಿಸಲು 73 ಕುಟುಂಬಗಳಿಗೆ ₹ 1.89 ಲಕ್ಷ ಪ್ರೋತ್ಸಾಹ ಧನ, 10 ಮಂದಿಗೆ ₹ 27 ಸಾವಿರ ವೆಚ್ಚದಲ್ಲಿ ಅಡುಗೆ ಅನಿಲದ ಸ್ಟೌ ಮತ್ತು ಸಿಲಿಂಡರ್, ದೈಹಿಕ ಅಂಗವಿಕಲರಿಗೆ ಸ್ಕೂಟರ್ ವಿತರಣೆ, ದಲಿತ ಸಮುದಾಯದ ಸಂಘಟನಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಕಾಗೋಡು ತಿಳಿಸಿದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷ ವಿ. ಸಂತೋಷ್ ಕುಮಾರ್, ಉಪಾಧ್ಯಕ್ಷ ಗುರುಸಿದ್ಧಾಚಾರಿ, ಸದಸ್ಯರಾದ ವೆರೋನಿಕಾ ಲೋಪಿಸ್, ಶ್ರೀಮತಿ ಸುಂಕದಮನೆ, ಎಂ.ರಾಜು, ಸಲೀಲಾಭಿ, ಲಕ್ಷ್ಮೀರಾಜು, ಪಾರ್ವತಿ ಮುಖ್ಯಾಧಿಕಾರಿ ಎಂ.ಎಸ್.ರಾಜ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.