ADVERTISEMENT

ಸ್ವಪ್ರೇರಣೆಯಿಂದ ರಸ್ತೆ ನಿಯಮ ಪಾಲಿಸಿ

ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 11:23 IST
Last Updated 12 ಜನವರಿ 2017, 11:23 IST
ಶಿವಮೊಗ್ಗ: ‘ವಾಹನ ಸವಾರರು ರಸ್ತೆ ಸುರಕ್ಷತೆಯ ಕಾನೂನು ಉಲ್ಲಂಘಿಸುವ ಮುನ್ನ ತಮ್ಮ ಕುಟುಂಬ ಸದಸ್ಯರ ಬಗ್ಗೆ ಕ್ಷಣಕಾಲ ಯೋಚಿಸಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ ಖರೆ ಹೇಳಿದರು.
 
ನಗರದ ಡಿಎಆರ್‌ ಸಭಾಂಗಣದಲ್ಲಿ ಜಿಲ್ಲಾಡಳಿತ, ಸಾರಿಗೆ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘28ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
ರಸ್ತೆಯಲ್ಲಿ ಸಂಚಾರ ಮಾಡಲು ವಾಹನ ಸವಾರರ ಸುರಕ್ಷತೆ ಉದ್ದೇಶದಿಂದ ಹಲವು ಕಾನೂನು ರೂಪಿಸಲಾಗಿದೆ. ಸವಾರರು ರಸ್ತೆ ನಿಯಮಗಳಿಗೆ ಗೌರವ ಕೊಡದಿದ್ದಲ್ಲಿ, ಅಪಘಾತ  ಆಗುವ ಸಂಭವ ಹೆಚ್ಚಿರುತ್ತದೆ. ಅಪಘಾತದಿಂದ ಶಾಶ್ವತ ಅಂಗವೈಕಲ್ಯವಾದರೆ ತಮ್ಮ ಕುಟುಂಬದ ಪರಿಸ್ಥಿತಿ ಏನಾಗಬಹುದು ಎಂಬುದರ ಬಗ್ಗೆ ಅರಿವಿರಬೇಕು. ತಮ್ಮನ್ನು ನಂಬಿದ ಕುಟುಂಬ ಸದಸ್ಯರ ಬಗ್ಗೆ ಆಲೋಚನೆ ಇರಿಸಿಕೊಂಡು ಸುರಕ್ಷತಾ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದರು.
 
ವಾಹನ ಸವಾರರ ಸಾವಿಗೆ ರಸ್ತೆ ಕಾರಣವಲ್ಲ, ಬದಲಾಗಿ ಅವರ ವಾಹನದ ಅತಿಯಾದ ವೇಗವೇ ಕಾರಣ. ಹಾಗಾಗಿ ರಸ್ತೆ ಅಪಘಾತದಲ್ಲಿ ಲಕ್ಷಾಂತರ ಜನರು ಸಾವಿಗೀಡಾಗುತ್ತಿದ್ದಾರೆ. ದೇಶದಲ್ಲಿ 2015ರಲ್ಲಿ 5.5 ಲಕ್ಷ ಜನ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸುಮಾರು 44 ಸಾವಿರ ಜನರು ಸಾವಿಗೀಡಾಗಿದ್ದಾರೆ. ದೇಶದಲ್ಲಿ ಪ್ರತಿದಿನ 40 ಜನರು ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ. ಈ ಅಂಕಿಅಂಶ ಗಮನಿಸಿದರೆ ವಾಹನ ಸವಾರರು ರಸ್ತೆ ಸುರಕ್ಷತಾ ಕಾನೂನನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದರು.
 
ವಾಹನ ಸವಾರರ ಸುರಕ್ಷತೆಗಾಗಿ ಸೀಟ್‌ಬೆಲ್ಟ್‌ ಹಾಕಿಕೊಳ್ಳಬೇಕು ಅಥವಾ ಹೆಲ್ಮೆಟ್ ಹಾಕಿಕೊಳ್ಳಬೇಕು ಎಂಬ ಕಾನೂನನ್ನು ಜನರು ಕಡ್ಡಾಯವಾಗಿ ಪಾಲಿಸುತ್ತಿಲ್ಲ. ಪೊಲೀಸರು ದಂಡ ವಸೂಲಿ ಮಾಡುತ್ತಿರುವುದು ವಾಹನ ಸವಾರರು ಎಚ್ಚರಿಕೆ ವಹಿಸಲಿ ಎಂಬ ಕಾರಣಕ್ಕಾಗಿ ಮಾತ್ರ. ಆದರೆ, ಅವರು ದಂಡ ಕಟ್ಟಬೇಕಾಗುತ್ತದೆ ಎಂಬ ಕಾರಣಕ್ಕೆ ತಪ್ಪಿಸಿಕೊಂಡು ಹೋಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
 
‘ವಾಹನ ಸವಾರರು ಸ್ವಯಂ ಪ್ರೇರಿತರಾಗಿ ಕಾನೂನು ಪಾಲಿಸಬೇಕು ಮತ್ತು ರಸ್ತೆಯಿಂದ ಮನೆಗೆ ಸುರಕ್ಷಿತವಾಗಿ ತೆರಳಬೇಕು ಎಂಬುದು ನಮ್ಮ ಉದ್ದೇಶ. ಆಟೊ ಚಾಲಕರು ಸುರಕ್ಷಿತವಾಗಿ ಮಕ್ಕಳನ್ನು ಕರೆದುಕೊಂಡು ಹೋಗಬೇಕು. ಜಾಗರೂಕವಾಗಿ ವಾಹನ ಚಾಲನೆ ಮಾಡಬೇಕು’ ಎಂದರು.
 
ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವರಾಜ್ ಪಾಟೀಲ್ ಮಾತನಾಡಿ, ‘ರಸ್ತೆ ಅಪಘಾತದಲ್ಲಿ ಯಾರಾದರೂ ಮೃತರಾದರೆ, ಅವರ ಕುಟುಂಬವನ್ನು ಅದು ಬಾಧಿಸುತ್ತದೆ. ಯಾವ ದೇಶದಲ್ಲಿ ಅಪಘಾತ ಹೆಚ್ಚಾಗಿವೆಯೋ ಆ ದೇಶಗಳಲ್ಲಿ ಹಲವು ರೀತಿಯ ಪರಿಹಾರಾತ್ಮಕ ಕ್ರಮ ಕೈಗೊಂಡು ಅಪಘಾತ ನಿಯಂತ್ರಿಸುವ ಕಾರ್ಯಕ್ರಮ ರೂಪಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ. ಸಂಚಾರ ನಿಯಮ ಮತ್ತಷ್ಟು ಬಿಗಿಗೊಳಿಸಲಾಗುವುದು’ ಎಂದರು.
 
ರಸ್ತೆ ಮೇಲಿನ ಅಪಘಾತ ವಲಯ, ಸೂಚನಾ ಫಲಕ ಕುರಿತು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ ಪ್ರಬಂಧ ಸ್ಪರ್ಧೆ ಏರ್ಪಡಿಸುವ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಎಎಸ್ಪಿ ವಿನ್ಸೆಂಟ್ ಶಾಂತಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.