ADVERTISEMENT

‘ನಗರಸಭೆ ರಂಗಮಂದಿರ ಅಭಿವೃದ್ಧಿಗೆ ಗಮನ’

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 6:03 IST
Last Updated 30 ಜನವರಿ 2015, 6:03 IST

ಸಾಗರ: ಗಾಂಧಿ ಮೈದಾನದಲ್ಲಿರುವ ನಗರಸಭೆ ಬಯಲು ರಂಗಮಂದಿರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವ ಹಿನ್ನಲೆಯಲ್ಲಿ ರಂಗಮಂದಿರ ಅಭಿವೃದ್ಧಿಯತ್ತ ನಗರಸಭೆ ಗಮನಹರಿಸಲಿದೆ ಎಂದು ನಗರಸಭೆ ಅಧ್ಯಕ್ಷೆ ಎನ್.ಲಲಿತಮ್ಮ ಹೇಳಿದರು.

ಧ್ವನಿ–ಬೆಳಕು–ಷಾಮಿಯಾನ ಮಾಲೀಕರ ಸಂಘ ಬುಧವಾರ ಏರ್ಪಡಿಸಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಗರಸಭೆ ರಂಗಮಂದಿರಕ್ಕೆ ಅಗತ್ಯವಿರುವ ಹೆಚ್ಚುವರಿ ವಿದ್ಯುತ್‌ ಸೌಲಭ್ಯ ಒದಗಿಸುವ, ರಂಗಮಂದಿರಕ್ಕೆ ಹೊಂದಿಕೊಂಡಂತೆ ಶೌಚಾಲಯ, ಉಡುಪು ಬದಲಾವಣೆ ಕೊಠಡಿ ನಿರ್ಮಿಸುವ ಅಗತ್ಯವಿದ್ದು ಈ ಬಗ್ಗೆ ನಗರಸಭೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಊರಿನಲ್ಲಿ ನಡೆಯುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸುವ ಧ್ವನಿ ಬೆಳಕು, ಷಾಮಿಯಾನ ಮಾಲೀಕರು ವರ್ಷದಲ್ಲಿ ಒಂದು ದಿನ ತಾವು ಹಾಗೂ ತಮ್ಮ ಕುಟುಂಬದ ಸದಸ್ಯರು ಸೇರಿ ಅತ್ಯಂತ ವ್ಯವಸ್ಥಿತವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ. ಇದರಿಂದ ಒಂದೇ ವೃತ್ತಿ ನಡೆಸುತ್ತಿರುವವರು ಸಂಘಟಿತರಾಗುವ ಜೊತೆಗೆ ಸದಸ್ಯರ ನಡುವೆ ಬಾಂಧವ್ಯ ವೃದ್ಧಿಯಾಗಲಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಚಲನಚಿತ್ರ ನಟ ಬ್ಯಾಂಕ್‌ ಜನಾರ್ದನ್‌ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಚ್.ಆರ್.ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಶಿಕಲಾ, ಗಂಗಾಧರ್, ವನಶ್ರೀ ಶಿಕ್ಷಣ ಸಂಸ್ಥೆಯ ಎಚ್.ಪಿ.ಮಂಜಪ್ಪ ಹಾಜರಿದ್ದರು.

ಅಜಯ್‌ ಪ್ರಾರ್ಥಿಸಿದರು. ರಾಮಣ್ಣ ಸ್ವಾಗತಿಸಿದರು. ಮಹಾಬಲೇಶ್ವರ ನಿರೂಪಿಸಿದರು. ಬೆಂಗಳೂರಿನ ರೇಣುಕಾಂಬಾ ಕಲಾ ನಾಟ್ಯ ಸಂಘದ ಸದಸ್ಯರು ‘ಮುದುಕನ ಮದುವೆ’ ನಾಟಕವನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.