ADVERTISEMENT

‘ರೈತರನ್ನು ಸಂಕಷ್ಟಕ್ಕೆ ದೂಡಿದ ರಾಜ್ಯ ಸರ್ಕಾರ’

​ಪ್ರಜಾವಾಣಿ ವಾರ್ತೆ
Published 30 ಜನವರಿ 2015, 6:14 IST
Last Updated 30 ಜನವರಿ 2015, 6:14 IST
ಸೊರಬದಲ್ಲಿ ಗುರುವಾರ ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಕೃಷಿ ಭವನದ ಶಿಲಾನ್ಯಾಸ ನೇರವೇರಿಸಿ ಶಾಸಕ ಮಧು ಬಂಗಾರಪ್ಪ ಮಾತನಾಡಿದರು.
ಸೊರಬದಲ್ಲಿ ಗುರುವಾರ ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಕೃಷಿ ಭವನದ ಶಿಲಾನ್ಯಾಸ ನೇರವೇರಿಸಿ ಶಾಸಕ ಮಧು ಬಂಗಾರಪ್ಪ ಮಾತನಾಡಿದರು.   

ಸೊರಬ: ‘ರಾಜ್ಯ ಸರ್ಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆಯನ್ನು ನಿಗದಿಪಡಿಸದೇ ರೈತ ಸಮುದಾಯ ವನ್ನು ಆರ್ಥಿಕ ಸಂಕಷ್ಟಕ್ಕೆ
ದೂಡಿದೆ’ ಎಂದು ಶಾಸಕ ಮಧು ಬಂಗಾರಪ್ಪ ಗಂಭೀರ ಆರೋಪ ಮಾಡಿದರು.

ಗುರುವಾರ ಪಟ್ಟಣದ ನ್ಯಾಯಾಲಯದ ಹಿಂಭಾಗದಲ್ಲಿ ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ
ಕೃಷಿ ಭವನದ ಶಿಲಾನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ಕಾರಗಳು ರೈತರ ಪರವಾಗಿ ಘೋಷಣೆ, ಭರವಸೆ ನೀಡಿದರೆ ಸಾಲದು, ಅವುಗಳನ್ನು ಅನುಷ್ಠಾನ ಗೊಳಿಸುವಲ್ಲಿ ನಿಲುವು ಸ್ಪಷ್ಟ ಪಡಿಸಬೇಕು ಎಂದರು.

ರೈತರಿಗೆ ಆಧುನಿಕ ತಂತ್ರಜ್ಞಾನದಿಂದ ಮಾಹಿತಿ ಮೂಡಿಸುವಲ್ಲಿ ಹಾಗೂ ಕೃಷಿಗೆ ಪೂರಕವಾದ ವಿಶ್ವಾಸ ಮೂಡಿಸುವಲ್ಲಿಯೂ ರಾಜ್ಯ ಸರ್ಕಾರ ಹಿಂದಿದೆ ಎಂದು ದೂರಿದರು.

ಸರ್ಕಾರ ಮೆಸ್ಕಾಂ ಅಧಿಕಾರಿಗಳ ಮೂಲಕ ವಿದ್ಯುತ್ ನೀತಿಯಲ್ಲಿ ರೈತರಿಗೆ ತಾರತಮ್ಯ ಮಾಡುತ್ತಿದೆ. ಯಾವುದೇ ಇಲಾಖೆಯ ಅಧಿಕಾರಿಗಳು ಮುಗ್ಧ ರೈತರಿಗೆ ಸರಿಯಾದ ಮಾಹಿತಿ ನೀಡಿ, ಅನ್ನದಾತನ ಅಭಿವೃದ್ಧಿಗೆ ಸಹಕರಿಸ ಬೇಕು.  ಶಾಸಕರ ಅನುದಾನದಲ್ಲಿ ಕೃಷಿ ಭವನದ ಅಭಿವೃದ್ಧಿಗೆ ₨ 3 ಲಕ್ಷ ಅನುದಾನ ನೀಡಲಾಗುವುದು ಎಂದರು.

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ  ಕೆ.ಬಸವರಾಜಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಬಸವರಾಜಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಣ್ಣಾಜಿಗೌಡ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪ್ರಶಾಂತ ಮೇಸ್ತ್ರಿ, ಶ್ರೀಪಾದ ಹೆಗಡೆ, ಎಚ್.ಗಣಪತಿ, ಎಂ.ಡಿ.ಶೇಖರ್, ಸಹಾಯಕ ಕೃಷಿ ನಿರ್ದೇಶಕಿ ಮಂಜುಳಾ, ಜಿ.ಡಿ.ನಾಯ್ಕ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.