ADVERTISEMENT

ಕೊಳಚೆ ಸ್ಥಿತಿಗತಿ ಬಗ್ಗೆ ಸಿಎಂಗೆ ಅರಿವಿಲ್ಲ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2018, 6:59 IST
Last Updated 12 ಫೆಬ್ರುವರಿ 2018, 6:59 IST
ಶಿವಮೊಗ್ಗ ನ್ಯೂ ಮಂಡ್ಲಿಯ ಕೊಳಚೆ ಪ್ರದೇಶದ ಬಳಿ ಬಿಜೆಪಿ ಸ್ಲಂ ಮೋರ್ಚಾದಿಂದ ಬಿಡುಗಡೆ ಮಾಡಿರುವ ಸ್ಲಂ ದುರ್ಭಾಗ್ಯ ಪುಸ್ತಕವನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಭಾನುವಾರ ಬಿಡುಗಡೆಗೊಳಿಸಿದರು.
ಶಿವಮೊಗ್ಗ ನ್ಯೂ ಮಂಡ್ಲಿಯ ಕೊಳಚೆ ಪ್ರದೇಶದ ಬಳಿ ಬಿಜೆಪಿ ಸ್ಲಂ ಮೋರ್ಚಾದಿಂದ ಬಿಡುಗಡೆ ಮಾಡಿರುವ ಸ್ಲಂ ದುರ್ಭಾಗ್ಯ ಪುಸ್ತಕವನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಭಾನುವಾರ ಬಿಡುಗಡೆಗೊಳಿಸಿದರು.   

ಶಿವಮೊಗ್ಗ : ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರನ್ನು ಟೀಕೆ ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ಕೊಳಚೆ ಪ್ರದೇಶದ ನಿವಾಸಿಗಳಿಗೆ ಏನು ಮಾಡಿದೆ ಎಂಬುದನ್ನು ಮೊದಲು ಕೇಳಲಿ ಎಂದು ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಒತ್ತಾಯಿಸಿದರು.

ನಗರದ ನ್ಯೂ ಮಂಡ್ಲಿ ಬಳಿ ಇರುವ ಕೊಳಚೆ ಪ್ರದೇಶದ ನಿವಾಸಿ ದೀಪಾ ಗಣೇಶ್‌ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ ಈಶ್ವರಪ್ಪ ಸುದ್ದಿಗಾರರೊಂದಿಗೆ ಭಾನುವಾರ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಯಾವುದೇ ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಿಲ್ಲ. ರಾಜ್ಯದಲ್ಲಿ ಎಷ್ಟು ಕೊಳಚೆ ಪ್ರದೇಶಗಳಿವೆ ಅನ್ನುವುದೇ ಅವರಿಗೆ ತಿಳಿದಿಲ್ಲ. ಕೊಳಚೆ ಪ್ರದೇಶದ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಹಲವು ಬಾರಿ ವಸತಿ ಸಚಿವರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಕೊಳಚೆ ಪ್ರದೇಶಗಳ ಅಭಿವೃದ್ಧಿಗಾಗಿ ಈ ಹಿಂದಿನ ಬಿಜೆಪಿ ಸರ್ಕಾರ ಎಷ್ಟು ಹಣ ಮೀಸಲಿಟ್ಟಿತ್ತು. ಈಗಿನ ರಾಜ್ಯ ಕಾಂಗ್ರೆಸ್‌ ಸರ್ಕಾರ ಎಷ್ಟು ಹಣ ಇಟ್ಟಿದೆ ಎಂಬುದವರ ಬಗ್ಗೆ ವರದಿ ಬಿಡುಗಡೆ ಮಾಡಲಿ. ಬಿಜೆಪಿ ಸರ್ಕಾರಕ್ಕಿಂತ ಹೆಚ್ಚು ಹಣ ಮೀಸಲಿಟ್ಟಿದ್ದರೇ ಅವರು ಹೇಳಿದಂತೆ ಕೇಳುತ್ತೇವೆ. ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ಹೇಳಿಕೆ ನೀಡುವುದರಲ್ಲಿ ಕಾಲಹರಣ ಮಾಡದೇ ರಾಜ್ಯ ಸರ್ಕಾರ ಕೊಳಚೆ ಪ್ರದೇಶದವರಿಗೆ ಏನು ಮಾಡಿದೆ ಎಂಬುದನ್ನು ಕೇಳಬೇಕು. ಇಲ್ಲವೇ ಕೊಳಚೆ ಪ್ರದೇಶಗಳ ಸ್ಥಿತಿಗತಿ ಕುರಿತು ಬಿಜೆಪಿ ಬಿಡುಗಡೆ ಮಾಡಿರುವ ವರದಿಯನ್ನು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರಿಗೆ ತಲುಪಿಸಬೇಕು. ಇಲ್ಲಿನ ಸಮಸ್ಯೆಗಳನ್ನು ರಾಹುಲ್ ಗಾಂಧಿಗೆ ತಿಳಿಸಲೆಂದೇ ಪುಸ್ತಕ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಚುನಾವಣೆ ಹತ್ತಿರ ಬಂದ ಕಾರಣ ಬಿಜೆಪಿಯವರು ವಾಸ್ತವ್ಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ನವರು ಟೀಕೆ ಮಾಡುತ್ತಿದ್ದಾರೆ. ಕೊಳಚೆ ಪ್ರದೇಶದವರ ಜತೆ ನಮ್ಮ ಸಂಬಂಧ ಹಳೆಯದು. ಕಾಂಗ್ರೆಸ್‌ ಪ ಕೇವಲ ಹಾಸ್ಯಾಸ್ಪದ ಹೇಳಿಕೆ ನೀಡುವುದನ್ನು ಬಿಡಬೇಕು. ಸಿದ್ದರಾಮಯ್ಯ ಅವರು ಪುನಃ ಅಧಿಕಾರಕ್ಕೆ ಬರುವ ಮಾತುಗಳನ್ನಾಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಅವರು ಪರಮೇಶ್ವರ್ ಅವರನ್ನು ಸೋಲಿಸಿದಂತೆ, ಈ ಬಾರಿ ಕಾಂಗ್ರೆಸ್ ನಾಯಕರುಗಳೇ ಸಿದ್ದರಾಮಯ್ಯನವರನ್ನು ಸೋಲಿಸುತ್ತಾರೆ ಎಂದು ವ್ಯಂಗ್ಯವಾಡಿದರು.

ಮನೆಗಳಿಗೆ ಭೇಟಿ : ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಶನಿವಾರ ರಾತ್ರಿ ನಗರದ ನ್ಯೂ ಮಂಡ್ಲಿ ಕೊಳಚೆ ಪ್ರದೇಶದ ದೀಪಾ ಗಣೇಶ್‌ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು. ಅಂದು ರಾತ್ರಿ ಸ್ಥಳೀಯ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿನ ಜನರೊಂದಿಗೆ ಸಮಾಲೋಚನೆ ನಡೆಸಿದರು.

ಬೆಳಿಗ್ಗೆ ಮತ್ತೊಮ್ಮೆ ನ್ಯೂ ಮಂಡ್ಲಿ ಕೊಳಚೆ ಪ್ರದೇಶದ ಸುತ್ತಲೂ ತಿರುಗಿ ಸ್ಥಳೀಯ ಸಮಸ್ಯೆಗಳನ್ನು ಆಲಿಸಿದರು. ಕೆಲವು ಮನೆಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿ ನೆರವು ನೀಡುವ ಭರವಸೆ ನೀಡಿದರು. ಈ ಸಂದರ್ಭ ಬಿಜೆಪಿ ಮುಖಂಡರಾದ ಎಸ್‌.ರುದ್ರೇಗೌಡ, ಚನ್ನಬಸಪ್ಪ, ಜ್ಞಾನೇಶ್ವರ್, ನಾಗರಾಜ್, ಜ್ಯೋತಿಪ್ರಕಾಶ್‌, ಹಿರಣ್ಣಯ್ಯ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.