ADVERTISEMENT

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಿ

ಶಿರಾ ನಗರಸಭೆ ವಿಶೇಷ ಸಭೆ; ಶಾಸಕ ಬಿ.ಸತ್ಯನಾರಾಯಣ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 8:30 IST
Last Updated 6 ಜೂನ್ 2018, 8:30 IST

ಶಿರಾ: ಅಧಿಕಾರಿಗಳು ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನ ಬಿಟ್ಟು ಬೇರೆ ಕಡೆ ವಾಸವಾಗಿರಬಾರದು ಎಂದು ಶಾಸಕ ಬಿ.ಸತ್ಯನಾರಾಯಣ ಸೂಚನೆ ನೀಡಿದರು.

ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಉಪಾಧ್ಯಕ್ಷೆ ಶುಭಾ ಮಾರುತೇಶ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

ನಗರಸಭೆ ಅಧಿಕಾರಿಗಳು ತುಮಕೂರಿನಲ್ಲಿ ವಾಸವಾಗಿದ್ದು, ಸಮಯಕ್ಕೆ ಸರಿಯಾಗಿ ಕಚೇರಿಗೆ ಬರದಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಬಗ್ಗೆ ಹಲವಾರು ದೂರುಗಳು ಬರುತ್ತಿವೆ. ಜೊತೆಗೆ ರಾತ್ರಿ ವೇಳೆ ಏನಾದರೂ ಅವಘಡಗಳು ಸಂಭವಿಸಿದರೆ ಜನತೆಯ ಗತಿ ಏನು. ಅವರ ನೋವಿಗೆ ಯಾರು ಸ್ವಂದಿಸುತ್ತಾರೆ. ಆದ್ದರಿಂದ ಪ್ರತಿಯೊಬ್ಬರು ಶಿರಾದಲ್ಲಿ ವಾಸ ಇರಬೇಕು. ಆಗ ಮೂಲ ಸಮಸ್ಯೆಗಳು ಗಮನಕ್ಕೆ ಬರುತ್ತವೆ. ಕೆಲಸ ಮಾಡುವ ಜವಾಬ್ದಾರಿ ಬರುತ್ತದೆ ಎಂದು ಹೇಳಿದರು.

ADVERTISEMENT

ಅಧಿಕಾರ ಕಿತ್ತುಕೊಳ್ಳಬೇಡಿ: ‘ನಗರಸಭೆ ಸಾಮಾನ್ಯ ಸಭೆಗಳನ್ನು ನಿಯಮಿತವಾಗಿ ಕರೆಯದೆ 6 ತಿಂಗಳಿಗೊಮ್ಮೆ ಕರೆಯುತ್ತಿರುವ ಬಗ್ಗೆ ಸದಸ್ಯರು ಆರೋಪ ಮಾಡುತ್ತಿದ್ದಾರೆ. ಕ್ರಮಬದ್ಧವಾಗಿ ಸಭೆ ನಡೆಸಲು ನಿಮಗೆ ಏನು ತೊಂದರೆ. ಸಭೆ ನಡೆದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಆದರೆ, ಅಧಿಕಾರಿಗಳು ಜನಪ್ರತಿನಿಧಿಗಳ ಅಧಿಕಾರ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಪೌರಾಯುಕ್ತರು ಎಚ್ಚರ ವಹಿಸಿ ಕ್ರಮಬದ್ಧದವಾಗಿ ಸಭೆ ನಡೆಸಬೇಕು’ ಎಂದು ಸೂಚನೆ ನೀಡಿದರು.

ಅಧಿಕಾರಿಗಳು ಚುರುಕಾಗಿ: ನಗರಸಭೆ ಸದಸ್ಯರಲ್ಲಿ ಕೆಲಸ ಮಾಡಬೇಕು ಎನ್ನುವ ಉತ್ಸಾಹ ಕಾಣುತ್ತಿದೆ. ಆದರೆ, ಇದಕ್ಕೆ ತಕ್ಕಂತೆ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು. ಬಡಜನತೆಯ ನೋವಿಗೆ ಸ್ವಂದಿಸುವ ಕೆಲಸ ಮಾಡಿ ಇಲ್ಲದಿದ್ದರೆ ನಿಮ್ಮನ್ನು ಬೇರೆ ಕಡೆ ಕಳುಹಿಸುವ ದಿನಗಳೂ ದೂರ ಇಲ್ಲ ಎಂದು ಎಚ್ಚರಿಸಿದರು.

ಸಿದ್ಧತೆ ಮಾಡಿಕೊಳ್ಳಿ: ರಾಜ್ಯದ ಎಲ್ಲ ಕಡೆ ಮಳೆ ಬರುತ್ತಿದೆ. ಆದರೆ, ಶಿರಾದಲ್ಲಿ ಮಳೆಯಾಗುತ್ತಿಲ್ಲ. ಕೆರೆಯಲ್ಲಿರುವ ನೀರು ಖಾಲಿಯಾಗುತ್ತಿದೆ ಅದ್ದರಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಲು ಪೂರ್ವಬಾವಿ ಸಿದ್ಧದತೆ ಮಾಡಿಕೊಳ್ಳುವುದು ಸೂಕ್ತ. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜಾಗ್ರತೆ ವಹಿಸಬೇಕು ಎಂದು ಸೂಚಿಸಿದರು.

ಸನ್ಮಾನ: ಶಿರಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ನಗರಸಭೆಗೆ ಬಂದಿದ್ದ ಶಾಸಕ ಬಿ.ಸತ್ಯನಾರಾಯಣ ಅವರಿಗೆ ನಗರಸಭೆ ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಕ್ರಿಯಾಯೋಜನೆ ತಯಾರಿಸಲು ಸೂಚನೆ: 2018- 19ನೇ ಸಾಲಿನ 14ನೇ ಹಣಕಾಸು ಯೋಜನೆ ಹಾಗೂ ಎಸ್.ಎಫ್.ಸಿ ಮುಕ್ತ ನಿಧಿಯಲ್ಲಿ ಹಂಚಿಕೆಯಾಗಿರುವ ಅನುದಾನಕ್ಕೆ ಕ್ರಿಯಾಯೊಜನೆ ತಯಾರಿಸಲು ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು.

ನಗರಸಭೆ ಉಪಾಧ್ಯಕ್ಷೆ ಶುಭಾ ಮಾರುತೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಜೆ.ರಾಜಣ್ಣ, ಪೌರಾಯುಕ್ತ ಗಂಗಣ್ಣ, ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.

ಡಾಂಬರು ರಸ್ತೆಗಳಿಲ್ಲ

‘ನಗರದಲ್ಲಿ ರಸ್ತೆ ಸಮಸ್ಯೆ ವ್ಯಾಪಕವಾಗಿದೆ. ಮುಖ್ಯರಸ್ತೆಗಳನ್ನು ಹೊರತು ಪಡಿಸಿದರೆ ಸಣ್ಣ ಪುಟ್ಟ ರಸ್ತೆಗಳು ಡಾಂಬರು ಕಂಡಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಒಂದೂವರೆ ತಿಂಗಳು ವಿದ್ಯಾನಗರದಲ್ಲಿ ನಾನು ವಾಸವಾಗಿದ್ದೆ ಅಲ್ಲಿ ಹುಡುಕಿದರೂ ಡಾಂಬರು ರಸ್ತೆ ಕಾಣುತ್ತಿಲ್ಲ. ಸ್ಥಾಯಿ ಸಮಿತಿ ಅಧ್ಯಕ್ಷರು ಈ ವಾರ್ಡ್‌ ಪ್ರತಿನಿಧಿಸುತ್ತಿದ್ದಾರೆ. ಆದರೂ ಈ ಸ್ಥಿತಿ ಏಕೆ’ ಎಂದು ಪಕ್ಕದಲ್ಲಿ ಕುಳಿತಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಕೆ.ರಾಜಣ್ಣ ಅವರನ್ನು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.