ADVERTISEMENT

ಆಗಸ್ಟ್ ಅಂತ್ಯದೊಳಗೆ ಸೇವಾ ಕೇಂದ್ರ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 11:05 IST
Last Updated 7 ಜುಲೈ 2017, 11:05 IST

ತುಮಕೂರು: ಆಗಸ್ಟ್ ತಿಂಗಳ ಅಂತಿಮ ವಾರದೊಳಗೆ ಅಂಚೆ ಪಾಸ್‌ಪೋರ್ಟ್‌ ಸೇವಾ ಕೇಂದ್ರದ (ಪಿಓಪಿಎಸ್‌ಕೆ) ಕಾರ್ಯಾರಂಭಕ್ಕೆ ಪ್ರಯತ್ನಿಸಲಾಗುವುದು ಎಂದು ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕೇಂದ್ರದ ಉಪ ಪಾಸ್‌ಪೋರ್ಟ್ ಅಧಿಕಾರಿ ರಾಜೇಶ್ ನಾಯ್ಕ ಹೇಳಿದರು.

ನಗರದಲ್ಲಿ ಅಂಚೆ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಸ್ಥಾಪಿಸುವ ಸಂಬಂಧ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹಾಗೂ ಶಾಸಕ  ರಫೀಕ್ ಅಹಮ್ಮದ್ ಅವರೊಂದಿಗೆ ಗುರುವಾರ ಪ್ರಧಾನ ಅಂಚೆ ಕಚೇರಿ ಹಾಗೂ ಗಾಂಧಿನಗರದಲ್ಲಿರುವ ಅಂಚೆ ಅಧೀಕ್ಷಕರ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪಾಸ್‌ಪೋರ್ಟ್ ಕೇಂದ್ರಗಳನ್ನು ಜನಕೇಂದ್ರಿತ ಸ್ಥಳಗಳನ್ನಾಗಿ ಮಾಡುವ ಉದ್ದೇಶದಿಂದ ಎರಡನೇ ಹಂತದಲ್ಲಿ ದೇಶದಲ್ಲಿ 149 ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ವಿದೇಶಾಂಗ ಸಚಿವರು ಪ್ರಕಟಿಸಿದ್ದಾರೆ. ಅದರಂತೆ ರಾಜ್ಯದಲ್ಲಿ ತುಮಕೂರು, ಬಳ್ಳಾರಿ, ಬೀದರ್, ರಾಯಚೂರು, ಶಿವಮೊಗ್ಗ, ಉಡುಪಿ ಹಾಗೂ ವಿಜಯಪುರ ಸೇರಿದಂತೆ 7 ಜಿಲ್ಲಾ ಕೇಂದ್ರಗಳಲ್ಲಿ ಅಂಚೆ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.

ADVERTISEMENT

ಈಗಾಗಲೇ ಮೈಸೂರು ನಗರದಲ್ಲಿ ಪ್ರಾಯೋಗಿಕವಾಗಿ ಅಂಚೆ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಆರಂಭಿಸಲಾಗಿದೆ. ಅದರ ಯಶಸ್ಸಿನ ನಂತರ ದೇಶದಾದ್ಯಂತ ಈ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಪಾಸ್‌ಪೋರ್ಟ್ ಕೇಂದ್ರಗಳಲ್ಲಿರುವ ಆಡಳಿತ ವ್ಯವಸ್ಥೆಯೇ ಅಂಚೆ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಇರುತ್ತದೆ. ತೀರಾ ಗಂಭೀರ ದಾಖಲಾತಿ ಪರಿಶೀಲನೆ ಅಗತ್ಯತೆ ಇದ್ದಲ್ಲಿ ಪ್ರಾದೇಶಿಕ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಪರಿಹರಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ನಗರದ ಡಿಸಿ ಕಚೇರಿಯ ಸಮೀಪದ ಪ್ರಧಾನ ಅಂಚೆ ಕಚೇರಿ ಹಾಗೂ ಗಾಂಧಿನಗರದಲ್ಲಿರುವ ಅಂಚೆ ಅಧೀಕ್ಷಕರ ಕಚೇರಿಗೆ ಭೇಟಿ ನೀಡಿ ಅಂಚೆ ಕಚೇರಿಗಳಲ್ಲಿ ಈಗಿರುವ ಸೌಲಭ್ಯ, ವಿಸ್ತೀರ್ಣ, ಕಚೇರಿಯನ್ನು ಆರಂಭಿಸಿದ ನಂತರ ಸಾರ್ವಜನಿಕರಿಗೆ ಆಗುವ ಅನುಕೂಲ ಮತ್ತಿತರ ಅಂಶಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದರು.

ಇದರ ವಿಸ್ತೃತ ವರದಿಯನ್ನು ರಾಜೇಶ್ ನಾಯ್ಕ ಅವರು ವಿದೇಶಾಂಗ ಇಲಾಖೆಗೆ ಸಲ್ಲಿಸಲಿದ್ದಾರೆ. ಇಲಾಖೆಯು ಸೇವಾ ಕೇಂದ್ರದ ಸ್ಥಳವನ್ನು ಅಂತಿಮಗೊಳಿಸಲಿದೆ ಎಂದರು.
ಆಯ್ಕೆಯಾದ ಕಚೇರಿಯಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಂಸದರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಹಣವನ್ನು ಒದಗಿಸಲಾಗುವುದು. ಅದರ ಜೊತೆಯಲ್ಲಿ ವಿದೇಶಾಂಗ ಇಲಾಖೆಯೂ ಕೂಡಾ ಮೂಲ ಸೌಕರ್ಯಕ್ಕೆ ಅನುದಾನ ಒದಗಿಸಲಿದೆ ಎಂದು ತಿಳಿಸಿದರು.

ಹೈಟೆಕ್‌ ಕೇಂದ್ರ: ತುಮಕೂರಿನಲ್ಲಿ ಆಗುವ ಅಂಚೆ ಪಾಸ್‌ಪೋರ್ಟ್ ಕೇಂದ್ರ ಸಂಪೂರ್ಣ ಹೈಟೆಕ್‌ ರೀತಿಯಲ್ಲಿ ಇರುತ್ತದೆ. ಕಾರ್ಪೊರೇಟ್ ಕಚೇರಿಗಳ ತರಹ ಇರುತ್ತದೆ. ಹೀಗೆಯೇ ಕೇಂದ್ರ ಇರಬೇಕು ಎಂದು ಯೋಜನೆ ರೂಪಿಸಿಕೊಂಡಿದ್ದೇವೆ ಎಂದು ತಿಳಿಸಿದರು.

ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಆದಷ್ಟು ಬೇಗ ಪ್ರಾರಂಭಿಸಲು ಈಗಾಗಲೇ ವಿದೇಶಾಂಗ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಶಾಸಕ ರಫೀಕ್ ಅಹಮ್ಮದ್ ಮಾತನಾಡಿ, ಪಾಸ್‌ಪೋರ್ಟ್ ಸೇವಾ ಕೇಂದ್ರ ತುಮಕೂರಿನಲ್ಲಿ ಆಗಬೇಕು ಎಂಬುದು ಬಹಳ ವರ್ಷದ ಬೇಡಿಕೆ. ಬೆಂಗಳೂರು ಸಮೀಪದಲ್ಲಿರುವುದರಿಂದ ಇಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಆಗುತ್ತದೊ ಇಲ್ಲವೊ ಎಂಬ ಅನುಮಾನವಿತ್ತು.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರ ವಿಶೇಷ ಪ್ರಯತ್ನದಿಂದ ಅಂಚೆ ಪಾಸ್‌ಪೋರ್ಟ್ ಸೇವಾ ಕೇಂದ್ರ ಸ್ಥಾಪನೆ ಆಗುತ್ತಿದೆ ಎಂದರು. ಪಾಸ್‌ಪೋರ್ಟ್ ಸೇವಾ ಕೇಂದ್ರ ಸ್ಥಾಪನೆಗೆ ಎಲ್ಲ ರೀತಿಯ ಸಹಕಾರವನ್ನೂ ನೀಡಲಾಗುವುದು. ಜಿಲ್ಲೆಯಲ್ಲಿ 25 ಲಕ್ಷ ಜನಸಂಖ್ಯೆ ಇದೆ. ಎಲ್ಲರೂ ಪಾಸ್‌ಪೋರ್ಟ್ ಪಡೆಯಲು ಅನುಕೂಲವಾಗುತ್ತದೆ. ಆಗಸ್ಟ್ 15ರಂದೇ ಪ್ರಾರಂಭ ಮಾಡಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಪಾಲಿಕೆ ಸದಸ್ಯರಾದ ಟಿ.ಆರ್‌.ನಾಗರಾಜ್, ನಯಾಜ್ ಅಹಮ್ಮದ್ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.