ADVERTISEMENT

ಆಮೆಗತಿ ಕೆಲಸದಿಂದ ಸುಗಮ ಸಂಚಾರಕ್ಕೆ ಸಂಚಕಾರ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 7:47 IST
Last Updated 15 ಮಾರ್ಚ್ 2017, 7:47 IST

ಬಾಗೇಪಲ್ಲಿ: ಪಟ್ಟಣಕ್ಕೆ ಹಾದುಬರುವ ಪ್ರವಾಸಿ ಮಂದಿರದ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿರುವ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಈ ಭಾಗದ ಜನ ಹೈರಾಣ ಆಗಿದ್ದಾರೆ.

10 ತಿಂಗಳ ಹಿಂದೆಯೇ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಇದು ಕುಂಟುತ್ತಾ ಸಾಗಿದೆ. ರಾಷ್ಟ್ರೀಯ ಹೆದ್ದಾರಿ 7ರಿಂದ ಪ್ರವಾಸಿ ಮಂದಿರದ ಮೂಲಕ ಪಟ್ಟಣಕ್ಕೆ ಬರುವ ಎರಡು ಬದಿಯ ರಸ್ತೆಗಳಲ್ಲಿ ಕೆಲಸ ಕೈಗೆತ್ತಿಕೊಂಡು ನೆಲಹಗೆದು ಅಪಾರ ಪ್ರಮಾಣದಲ್ಲಿ ಜಲ್ಲಿಕಲ್ಲು ರಾಶಿ ರಾಶಿ ಸುರಿದು ಸಮತಟ್ಟು ಮಾಡುವುದರಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಇದರಿಂದ ವಾಹನ ಸಂಚಾರ ಅಡ್ಡಾದಿಡ್ಡಿ ಸಂಚರಿಸುವಂತಾಗಿ ಈಚೆಗೆ ಮುಗ್ದಬಾಲಕನ ಪ್ರಾಣವೂ ಕಳೆದು ಹೋಗಿರುವ ಸಂಗತಿ ನಡೆದಿದೆ.

ಅಷ್ಟೆ ಅಲ್ಲ ರಸ್ತೆಯ ಎರಡು ಭಾಗಗಳಲ್ಲಿ ಗಾರ್ಮೆಂಟ್ಸ್‌, ಬ್ಯಾಂಕ್, ಕಲ್ಯಾಣ ಮಂಟಪಗಳು, ದಿನಸಿ ತರಕಾರಿ, ದೇಗುಲಕ್ಕೆ ಹೋಗಲು, ಶಾಲಾ ಕಾಲೇಜುಗಳು, ವಸತಿ ನಿಲಯಗಳು, ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣ ಸಮೀಪವಿರುವುದರಿಂದ ಸೇರಿದಂತೆ ಅನ್ಯಭಾಗದ ಜನ ಈ ರಸ್ತೆ ಮಾರ್ಗ ಬರುತ್ತಾರೆ. ಇದರಿಂದ ಈ ಭಾಗದಲ್ಲಿ ಸದಾ ಜನದಟ್ಟನೆ, ವಾಹನದಟ್ಟನೆ ಇರುತ್ತದೆ.

ADVERTISEMENT

ಈಚೆಗೆ ಒಂದು ಕಡೆ ರಸ್ತೆ ಕಾಮಗಾರಿ ಸಂಪೂರ್ಣವಾಗಿದೆ. ಮತ್ತೊಂದೆ ಕಡೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ವಾಹನ ಸಂಚಾರ, ಜನಸಂಚಾರ ಒಂದೇ ರಸ್ತೆಬದಿಯಲ್ಲಿ ಸಂಚರಿಸುವುದರಿಂದ ವಾರಕ್ಕೆ ಎರಡು ಮೂರು ಅಪಘಾತ ಸಂಭವಿಸುತ್ತವೆ.

ರಸ್ತೆ, ಚರಂಡಿ ನಿರ್ಮಾಣದಿಂದ ಎಲ್ಲೆಡೆ ದೂಳು ಆವರಿಸಿಕೊಂಡಿದೆ. ಮಳಿಗೆಗಳು, ಕಚೇರಿಗಳು, ಶಾಲಾ ಕಾಲೇಜುಗಳು ಬಾಗಿಲುಗಳು ತೆರೆದರೆ ದೂಳಿನ ಅಬ್ಬರ ಹೆಚ್ಚಳವಾಗಿದೆ. ರಸ್ತೆ, ಚರಂಡಿ ನಿರ್ಮಿಸುತ್ತಿರುವುದು ಒಳ್ಳೆ ವಿಷಯ. ಆದರೆ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿರುವ ಕಾರಣ ಕಚೇರಿ ಕೆಲಸ, ವ್ಯಾಪಾರ ವಹಿವಾಟು ತೊಂದರೆಯಾಗಿದೆ ಎನ್ನುತ್ತಾರೆ ಸ್ಥಳೀಯ ನರೇಂದ್ರ.

ಸುಮಾರು 1 ಕಿ.ಮೀ ಗಿಂತಲೂ ಕಡಿಮೆ ಪ್ರದೇಶದಲ್ಲಿ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಆದರೆ ಇಷ್ಟೊಂದು ವಿಳಂಭ ಮಾಡಿದರೆ ಹೇಗೆ? ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಭೇಟಿ ಮಾಡಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕೋರಲಾಗಿದೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಾಗರಾಜ ಬೇಸರ ವ್ಯಕ್ತಪಡಿಸಿದರು.

ಆರಂಭದಲ್ಲಿ ರಸ್ತೆ ಕಾಮಗಾರಿ ನಡೆದಾಗ ಸಂತಸವಾಯಿತು. ಆದರೆ ದಿನಕಳೆದಂತೆ ನಿಧಾನವಾಯಿತು ಸ್ವಲ್ಪಮಟ್ಟಿಗೆ ಬೇಸರವಾಗಿದೆ. ಕಾಮಗಾರಿ ಶೀಘ್ರವಾಗಿ ನಡೆದು ಸುಗಮ ಸಂಚಾರಕ್ಕೆ ಅನುವಾಗಲಿ ಎಂದು  ಮಹೇಶ್, ಶ್ರೀನಿವಾಸ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.