ADVERTISEMENT

ಇಂದು ರೈತರ ರಾಜ್ಯ ಮಟ್ಟದ ಸಮಾವೇಶ

ಸಾಲ ಮನ್ನಾ, ಬೆಂಬಲ ಬೆಲೆ ನಿಗದಿ, ಕೃಷಿಕರ ಪರವಾದ ಬೆಳೆ ವಿಮೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 6:25 IST
Last Updated 10 ಜುಲೈ 2017, 6:25 IST

ತುಮಕೂರು: ರೈತರು, ದಲಿತರು, ಕೃಷಿ ಕಾರ್ಮಿಕರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಡಾ.ಎಂ.ಎಸ್. ಸ್ವಾಮಿನಾಥನ್  ಶಿಫಾರಸಿನಂತೆ ಕನಿಷ್ಠ  ಬೆಂಬಲ ಬೆಲೆಯನ್ನು ಜಾರಿಗೊಳಿಸಬೇಕು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜುಲೈ 10ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂತ ರೈತ ಸಂಘದ ರಾಜ್ಯ ಘಟಕ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಹೇಳಿದರು.

ರೈತ, ಕೃಷಿ ಕೂಲಿಕಾರ, ದಲಿತ ಸಂಘಟನೆಗಳ ಒಕ್ಕೂಟದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 11 ಗಂಟೆಗೆ ಶಿಕ್ಷಕರ ಸದನದಲ್ಲಿ ಸಮಾವೇಶ ನಡೆಯಲಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರೈತರು, ಕೃಷಿ ಕೂಲಿ ಕಾರ್ಮಿಕರು ಸತತ 3–4 ವರ್ಷಗಳಿಂದ ಬರಗಾಲ ಎದುರಿಸುತ್ತಿದ್ದಾರೆ. ಈ ವರ್ಷದ ಮತ್ತು  ಹಿಂದಿನ ವರ್ಷಗಳ ಬರಗಾಲಕ್ಕೆ ತತ್ತರಿಸಿದ್ದಾರೆ.  ತಮ್ಮ ಬಳಿ ಇರುವ ಬಂಡವಾಳ ಕಳೆದುಕೊಂಡು ಅಸಹಾಯಕತೆಯಿಂದ ನರಳುತ್ತಿದ್ದಾರೆ.  ಹೀಗಾಗಿ ದಲಿತರು, ಕೂಲಿ ಕಾರ್ಮಿಕರು ಹಾಗೂ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು  ಎಂದು ಆಗ್ರಹಿಸಿದರು.

ADVERTISEMENT

ಈ ಸಾಲಿನ ಬರಗಾಲವು 40 ವರ್ಷಗಳ  ಹಿಂದಿನ ಬರಗಾಲದ ಭೀಕರತೆಯನ್ನು ಮೀರಿಸಿದೆ.  ಬ್ಯಾಂಕುಗಳಲ್ಲಿ ರೈತರು ಪಡೆದಿರುವ ರೈತರ ಸಾಲ ₹1.16 ಲಕ್ಷ ಕೋಟಿ ಮೀರಿದೆ. ಇದರಲ್ಲಿ ಸಹಕಾರಿ ಕ್ಷೇತ್ರದ ₹10,736 ಕೋಟಿ, ರಾಷ್ಟ್ರೀಕೃತ ಬ್ಯಾಂಕು, ಖಾಸಗಿ ಬ್ಯಾಂಕುಗಳಲ್ಲಿ ಪಡೆದಿರುವ  ₹ 52 ಸಾವಿರ ಕೋಟಿ ಅಲ್ಪಾವಧಿ ಸಾಲ ಮನ್ನಾ ಮಾಡಲು ಒತ್ತಾಯ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಪ್ರಧಾನ ಮಂತ್ರಿ ಫಸಲ್ ಬಿಮಾ  ಯೋಜನೆಯ ಮೂಲಕ ಕಾರ್ಪೊರೇಟ್ ಕಂಪೆನಿಗಳು ಕೃಷಿಕರ ಕಂತಿನ ಹಣವನ್ನು ಲೂಟಿ ಮಾಡುತ್ತಿವೆ ಎಂದು ದೂರಿದರು.
ಸಂಪೂರ್ಣ ಸಾಲ ಮನ್ನಾ, ಕೃಷಿ ಉತ್ಪನ್ನಗಳಿಗೆ ಶಾಸನ ಬದ್ಧ, ಕನಿಷ್ಠ ಬೆಂಬಲ ಬೆಲೆ, ಕೃಷಿಕರ ಪರ ಬೆಳೆ ವಿಮೆ ನೀತಿಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು.

14 ದಲಿತ ಸಂಘಟನೆಗಲ್ಲದೆ ಕೃಷಿ ಕಾರ್ಮಿಕರ ಸಂಘ, ರೈತ ಸಂಘಟನೆಗಳು ಸಮಾವೇಶದಲ್ಲಿ ಭಾಗವಹಿಸುತ್ತಿವೆ ಎಂದು ತಿಳಿಸಿದರು. ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ದಲಿತ  ಕುಂದೂರು ತಿಮ್ಮಯ್ಯ, ಪ್ರಾಂತ ರೈತ ಸಂಘದ ಜಿಲ್ಲಾ ಸಹ ಸಂಚಾಲಕ ಬಿ.ಉಮೇಶ್, ಅಜ್ಜಪ್ಪ, ನೌಷಾದ್, ರವಿ ಪತ್ರಿಕಾಗೋಷ್ಠಿಯಲ್ಲಿದ್ದರು.

***

ಪಡೆದಿದ್ದ ₹ 21,500 ಕೋಟಿ, ಕೊಟ್ಟಿದ್ದು ₹ 714 ಕೋಟಿ!
‘ಫಸಲ್ ಬಿಮಾ  ಯೋಜನೆಯಡಿ ದೇಶದ ರೈತರಿಂದ ಸಂಗ್ರಹವಾದ ವಿಮೆ ಕಂತಿನ ಮೊತ್ತ ₹ 21,500 ಕೋಟಿ. ಬೆಳೆ ನಷ್ಟದ ಪರಿಹಾರಕ್ಕಾಗಿ ಕೃಷಿಕರು ಸಲ್ಲಿಸಿದ್ದ ಕ್ಲೇಮುಗಳ ಒಟ್ಟು ಮೊತ್ತ ₹ 4.270 ಕೋಟಿ. ಆದರೆ, ರೈತರಿಗೆ ಸಿಕ್ಕಿರುವ ಪರಿಹಾರ ಮೊತ್ತ ₹ 714 ಕೋಟಿಯಾಗಿದೆ. ಉಳಿದ ಹಣವನ್ನು ಕಾರ್ಪೋರೇಟ್ ಕಂಪೆನಿಗಳು ಹಗಲು ದರೋಡೆ ಮಾಡಿವೆ’ ಎಂದು ಬಯ್ಯಾರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.