ADVERTISEMENT

ಉಪನಗರ ರೈಲು ಪ್ರಾರಂಭಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 13:06 IST
Last Updated 22 ಮಾರ್ಚ್ 2018, 13:06 IST

ತುಮಕೂರು: ತುಮಕೂರಿನಿಂದ ಬೆಂಗಳೂರಿನ ಹೊಸೂರಿಗೆ ಒಂದು ಉಪನಗರ ರೈಲು ಪ್ರಾರಂಭಿಸಬೇಕು ಎಂದು ತುಮಕೂರು –ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆಯು ಮನವಿ ಮಾಡಿದೆ.

ಸಂಸದ ಎಸ್.ಪಿ.ಮುದ್ದಹನುಮೇಗೌಡ ಹಾಗೂ ನೈರುತ್ಯ ರೈಲ್ವೆ ಅಧಿಕಾರಿಗಳಿಗೆ ವೇದಿಕೆಯು ಮನವಿ ಸಲ್ಲಿಸಿದೆ.

ತುಮಕೂರಿನಿಂದ ಯಶವಂತಪುರ ಬೈಪಾಸ್ ಮೂಲಕ ಬೈಯಪ್ಪನಹಳ್ಳಿ, ಬೆಳ್ಳಂದೂರು, ಬಾಣಸವಾಡಿ ಮಾರ್ಗವಾಗಿ ಹೊಸೂರಿಗೆ ಒಂದು ಉಪನಗರ ರೈಲು ಸಂಚಾರ ಪ್ರಾರಂಭಿಸಬೇಕು ಎಂದು ಮನವಿ ಮಾಡಿದೆ.

ADVERTISEMENT

ತುಮಕೂರಿಗೆ ರಾತ್ರಿ ನಿಲುಗಡೆ ರೈಲು ಸಂಚಾರ ಪ್ರಾರಂಭಿಸಬೇಕು. ಈ ರೈಲು ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಹೊರಡುವಂತಿರಬೇಕು. ಹಾಗೆಯೇ ಈ ರೈಲು ಮರುದಿನ ಬೆಳಿಗ್ಗೆ ತುಮಕೂರಿನಿಂದ ಬೆಳಿಗ್ಗೆ 6.45 ಮತ್ತು 7 ಗಂಟೆಯ ನಡುವೆ ಹೊರಡುವಂತೆ ಮಾಡಬೇಕು ಎಂದು ಕೋರಿದೆ.

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶೃಂಗೇರಿ, ಕೊಲ್ಲೂರು, ಗೋಕರ್ಣ ಮತ್ತಿತರ ಧಾರ್ಮಿಕ ಕ್ಷೇತ್ರಗಳಿಗೆ ಹೋಗಲು ಅನುಕೂಲವಾಗುವಂತೆ ಯಶವಂತಪುರ– ಕುಣಿಗಲ್– ಹಾಸನ ಮಾರ್ಗವಾಗಿ ಸಾಗುವ ರೈಲಿಗೆ ಲಿಂಕ್ ಮಾಡುವಂತೆ ಯಶವಂತಪುರ ಅಥವಾ ತುಮಕೂರಿನಿಂದಲೇ ಹಾಸನಕ್ಕೆ ಹೊಸ ರೈಲು ಸಂಚಾರ ಪ್ರಾರಂಭಿಸಬೇಕು. ಅಲ್ಲದೇ, ತುಮಕೂರು ಮತ್ತು ಹಾಸನ ನಡುವೆ ಪ್ರತಿನಿತ್ಯ ಹೊಸ ರೈಲುಗಳ ಸಂಚಾರ ಪ್ರಾರಂಭಿಸಬೇಕು ಎಂದು ಮನವಿ ಮಾಡಿದೆ.

ಮೈಸೂರು– ಸೊಲ್ಲಾಪುರ ನಡುವೆ ಸಂಚರಿಸುವ ಎಕ್ಸ್ಪ್‌ಪ್ರೆಸ್ ರೈಲು (16535/36) ರೈಲಿಗೆ ಕ್ಯಾತ್ಸಂದ್ರ ಮತ್ತು ತಿಪಟೂರಿನಲ್ಲಿ ನಿಲುಗಡೆ ಕಲ್ಪಿಸಬೇಕು ಎಂದು ಕೋರಿದೆ.

ರೈಲ್ವೆ ನಿಲ್ದಾಣದಲ್ಲಿ ಸೌಕರ್ಯ ಕಲ್ಪಿಸಿ: ತುಮಕೂರು ರೈಲು ನಿಲ್ದಾಣದಲ್ಲಿ ವಿಶ್ರಾಂತಿ ಕೊಠಡಿಯನ್ನು ದುರಸ್ತಿ ನೆಪದಲ್ಲಿ ಕಳೆದ 8–9 ತಿಂಗಳಿಂದ ಮುಚ್ಚಲಾಗಿದೆ. ಇದರಿಂದ ವೃದ್ಧರು, ಅದರಲ್ಲೂ ವಿಶೇಷವಾಗಿ ಮಹಿಳಾ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ಈ ಬಗ್ಗೆ ಗಮನ ಹರಿಸಿ ಆದಷ್ಟು ಬೇಗ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಪ್ರಯಾಣಿಕರ ಬಳಕೆಗೆ ಒದಗಿಸಬೇಕು ಎಂದು ಎಂದು ಮನವಿ ಮಾಡಿದೆ.

ರೈಲ್ವೆ ನಿಲ್ದಾಣದಲ್ಲಿ ಈಗ ಹೊಸದಾಗಿ ನಿರ್ಮಿಸಲಾಗುತ್ತಿರುವ ಪಾರ್ಕಿಂಗ್ ಸ್ಥಳ ನಿಲ್ದಾಣದ ಪ್ರವೇಶದಿಂದ ತುಂಬಾ ದೂರವಿದೆ. ರೈಲು ನಿಲ್ದಾಣದ ಎಡಭಾಗದಲ್ಲಿರುವ ಪಾರ್ಕಿಂಗ್ ಜಾಗವನ್ನು ವಾಹನ ನಿಲುಗಡೆಗೆ ಅಭಿವೃದ್ಧಿಪಡಿಸಬೇಕು ಎಂದು ಕೋರಿದೆ.

ಈಗಿರುವ ವಾಹನ ನಿಲ್ದಾಣ ಸ್ಥಳ ತೀರಾ ಹದಗೆಟ್ಟಿದೆ. ವಾಹನಗಳ ನಿರ್ವಹಣೆ ಅತ್ಯಂತ ಕಳಪೆಯಾಗಿದೆ. ಅಲ್ಲದೇ, ನಿಲ್ದಾಣ ನಿರ್ವಾಹಕರ ವರ್ತನೆ ಅಸಹನೀಯವಾಗಿದೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದೆ.

ಬೆಳಿಗ್ಗೆ 8.15ಕ್ಕೆ ತುಮಕೂರಿನಿಂದ ಹೊರಡುವ ರೈಲು ಸೋಮವಾರ ಮತ್ತು ಶುಕ್ರವಾರದಂದು ತುಂಬಾ ತಡವಾಗಿ ಯಶವಂತಪುರ ಮತ್ತು ಬೆಂಗಳೂರನ್ನು ತಲುಪುತ್ತಿದೆ. ಇದರಿಂದ ಕೆಲಸಕ್ಕೆ ಹೋಗುವ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ವೇದಿಕೆಯ ಕಾರ್ಯದರ್ಶಿ ಕರಣಂ ರಮೇಶ್ ಮನವಿಯಲ್ಲಿ ಕೋರಿದ್ದಾರೆ.
**
ರೈಲ್ವೆ ನಿಲ್ದಾಣಕ್ಕೆ ಸಿಟಿ ಬಸ್ ಕಲ್ಪಿಸಿ

ತುಮಕೂರು ರೈಲು ನಿಲ್ದಾಣಕ್ಕೆ ಬೆಳಗ್ಗೆ 7 ರಿಂದ 12.30ರವರೆಗೆ ಮತ್ತು ಸಂಚೆ 3.30 ಯಿಂದ ರಾತ್ರಿ 8.30 ರ ಗಂಟೆಯವರೆಗೆ ಸಿಟಿ ಬಸ್ ವಾಹನ ಸೌಕರ್ಯ ಕಲ್ಪಿಸಬೇಕು. ಇದರಿಂದ ರೈಲು ನಿಲ್ದಾಣಕ್ಕೆ ಬರುವ ಮತ್ತು ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ರೈಲ್ವೆ ಪ್ರಯಾಣಿಕರ ವೇದಿಕೆಯು  ಸಂಸದರು ಮತ್ತು ತುಮಕೂರು ನಗರ ಶಾಸಕ ಡಾ.ರಫೀಕ್ ಅಹಮದ್ ಅವರಿಗೆ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.