ADVERTISEMENT

ಎಲ್ಲರಿಗೂ ಎಸ್‌ಎಸ್‌ಎಲ್‌ಸಿ: ಆಯೋಗ ಕನಸು

​ಪ್ರಜಾವಾಣಿ ವಾರ್ತೆ
Published 24 ಮೇ 2016, 5:45 IST
Last Updated 24 ಮೇ 2016, 5:45 IST

ತುಮಕೂರು: ಎಲ್ಲ ಮಕ್ಕಳು ಎಸ್ಎಸ್‌ಎಲ್‌ಸಿವರೆಗೆ ಓದುವಂತೆ ಮಾಡಲು ಮಕ್ಕಳ ರಕ್ಷಣಾ ಆಯೋಗ ಶ್ರಮಿಸುತ್ತಿದೆ ಎಂದು ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಅಮರ ಆಳ್ವ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ  14 ವರ್ಷದವರೆಗಿನ ಮಕ್ಕಳಿಗೆ ಶಿಕ್ಷಣ ಕೊಡುವುದು ಕಡ್ಡಾಯವಾಗಿತ್ತು.  ಈಗ  ಕಾನೂನಿಗೆ ತಿದ್ದುಪಡಿ ತಂದಿದ್ದು, 3 ರಿಂದ 18 ವರ್ಷದವರೆಗೆ ಶಿಕ್ಷಣ ಕಡ್ಡಾಯ ಮಾಡಲಾಗಿದೆ’ ಎಂದರು.

‘ಕಡ್ಡಾಯ ಶಿಕ್ಷಣ ನೀತಿಯಿಂದ  ಹೆಣ್ಣು ಮಕ್ಕಳ ಬಾಲ್ಯ ವಿವಾಹ ತಡೆಯಲು ಸಾಧ್ಯವಾಗಲಿದೆ.  ಹತ್ತನೆ ತರಗತಿವರೆಗೆ ಓದಿದರೆ ತಕ್ಕಮಟ್ಟಿನ ಜ್ಞಾನ ಮಕ್ಕಳಲ್ಲಿ ಬೆಳೆಯಲಿದೆ. ಸಣ್ಣ ಪುಟ್ಟ ಕೆಲಸವಾದರು ಸಿಗಲಿದೆ’ ಎಂದು ಹೇಳಿದರು.

‘ಜಿಲ್ಲೆಯ ಮಧುಗಿರಿಯಲ್ಲಿ 17, ತುಮಕೂರಿನಲ್ಲಿ 75 ಮಕ್ಕಳು ಶಾಲೆಯಿಂದ ಹೊರಗಿದ್ದಾರೆ.  ಒಟ್ಟಾರೆ ರಾಜ್ಯದಲ್ಲಿ 9,443 ಮಕ್ಕಳು ಶಾಲೆಯಿಂದ  ಹೊರ ಉಳಿದಿದ್ದಾರೆ.  ಈ ಎಲ್ಲ ಮಕ್ಕಳನ್ನು ಮರಳಿ ಶಾಲೆಗೆ ತರಲು ಆಯೋಗ ಶ್ರಮಿಸುತ್ತಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಂಜೇಗೌಡ, ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್‌ ಇದ್ದರು.
ಅಧಿಕಾರಿಗಳೊಂದಿಗೆ ಸಭೆ: ಮಕ್ಕಳನ್ನು ಶಾಲೆಗೆ ಕರೆತರುವುದು ಆಯೋಗದ ಮೊದಲ ಆದ್ಯತೆಯಾಗಿದೆ. ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸುವುದು, ಶೌಚಾಲಯ ಮತ್ತು ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಬುಡಕಟ್ಟು ಜನಾಂಗದ ಮಾಹಿತಿ:  ಪತ್ರಿಕಾಗೋಷ್ಠಿಗೂ ಮುನ್ನ  ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು.
ಜಿಲ್ಲೆಯ ಬುಡಕಟ್ಟು ಜನಾಂಗದ ಮಕ್ಕಳ ಸ್ಥಿತಿಗತಿ ಬಗ್ಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಂದ ಮಾಹಿತಿ ಸಂಗ್ರಹಿಸುವಂತೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು.

ಮೇ 30ರೊಳಗೆ ವರದಿ ಸಂಗ್ರಹಿಸಿ ನೀಡುವುದಾಗಿ ಉಪ ನಿರ್ದೇಶಕ ನಂಜೇಗೌಡ ಹೇಳಿದರು. ಪರಿಶಿಷ್ಟರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಸಮುದಾಯಗಳಲ್ಲಿ ಶಾಲೆಯಿಂದ ಹೊರಗುಳಿದವರ ಸಂಖ್ಯೆ ಹೆಚ್ಚಿದೆ.   ಈ ಸಮುದಾಯಗಳಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಮಾಹಿತಿ ಸಂಗ್ರಹಿದರೆ ಆ ಸಮುದಾಯಗಳಿಗೆ ವಿಶೇಷ ಯೋಜನೆ ರೂಪಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ ರಾಜ್‌ ತಿಳಿಸಿದರು.

ಹಂದಿಜೋಗಿ, ಸಿದ್ಧರು, ಸೋಲಿಗರು, ಅಕ್ಕಿಪಿಕ್ಕಿ ಮತ್ತಿತರ ಅತಿ ಹಿಂದುಳಿದ ಬುಡಕಟ್ಟು ಜನಾಂಗಗಳಿಗೆ ಮನೆ, ಪಡಿತರ ಚೀಟಿ, ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಅಂಕಿ–ಅಂಶ ಸಂಗ್ರಹದಿಂದ ಸಾಧ್ಯವಾಗಲಿದೆ ಎಂದರು.

ಪ್ರತ್ಯೇಕ  ವಿಚಾರಣೆ
ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಮಕ್ಕಳ ರಕ್ಷಣಾ ಆಯೋಗ ಗಂಭೀರವಾಗಿ ಪರಿಗಣಿಸಲಿದೆ. ಜುಲೈ ತಿಂಗಳ ನಂತರ ಪ್ರತಿಯೊಂದು ಪ್ರಕರಣವನ್ನು ಪ್ರತ್ಯೇಕವಾಗಿ  ವಿಚಾರಣೆ ನಡೆಸಲಿದೆ.
-ಕೃಪಾ ಅಮರ್ ಆಳ್ವ. ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.