ADVERTISEMENT

ಕಸ ವಿಲೇವಾರಿ ಮಾಡಿಸಿ ಸರ್

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 5:26 IST
Last Updated 4 ಡಿಸೆಂಬರ್ 2017, 5:26 IST

ಶಿರಾ: ‘ನಮ್ಮ ಶಾಲೆಯ ಕಾಂಪೌಂಡಿನ ಪಕ್ಕದಲ್ಲಿ ಕಸದ ರಾಶಿಯೇ ಬಿದ್ದಿದೆ ಇದನ್ನು ತೆರವುಗೊಳಿಸಿ, ಉತ್ತಮ ಪರಿಸರ ಕಾಪಾಡಿ ಸರ್’ ಎಂದು ದ್ವಾರನಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಕನ್ನಿಕಾ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರು.

ತಾಲ್ಲೂಕಿನ ದ್ವಾರನಕುಂಟೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಈಚೆಗೆ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ದ್ವಾರನಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಶಾಲೆಗಳ ಮಕ್ಕಳು ಗ್ರಾಮಗಳಲ್ಲಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿ, ಪ್ರತ್ಯುತ್ತರ ಪಡೆದು ಸಮಸ್ಯೆಗಳ ಈಡೇರಿಸುವಂತೆ ವಿನಂತಿಸಿಕೊಂಡರು.

ಬಾಲಕಿ ಕನ್ನಿಕಾ ಮನವಿಗೆ ಸ್ಪಂದಿಸಿದ ಬಿಲ್ ಕಲೆಕ್ಟರ್ ಭದ್ರನಾಯಕ ಈಗಾಗಲೇ ಕಾಂಪೌಂಡ್ ಪಕ್ಕದಲ್ಲಿ ನಡೆಸುತ್ತಿರುವ ಹೋಟೆಲ್‌ಗಳನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ. ಶೀಘ್ರವೇ ತೆರವುಗೊಳಿಸಿ ಶಾಲೆಯ ಮುಂಭಾಗದಲ್ಲಿ ಉತ್ತಮ ಪರಿಸರ ಕಾಪಾಡಲಾಗುವುದು ಎಂದರು.

ADVERTISEMENT

ನೇಜಂತಿ ಗ್ರಾಮದ ಸುಚಿತ್ರಾ ನಮ್ಮೂರಿನಿಂದ 3 ಕಿ.ಮೀ. ದೂರವಿರುವ ಶಾಲೆಗೆ ಹೋಗಿ ಬರಲು ಸರಿಯಾದ ರಸ್ತೆ ಮಾಡಿಕೊಡಿ ಎಂಬ ಮನವಿಗೆ ಪ್ರತಿಕ್ರಿಯೆ ನೀಡಿದ ಪಿಡಿಒ ಬಿ.ಹರೀಶ್ ಗ್ರಾಮ ಪಂಚಾಯಿತಿ ವತಿಯಿಂದ ನಡಾವಳಿಗೆ ಸಿದ್ಧಪಡಿಸಿ, ನಮ್ಮ ಗ್ರಾಮ ನಮ್ಮ ಯೋಜನೆಯಡಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿ, ಇದೇ ವರ್ಷ ಓಡಾಡಲು ಉತ್ತಮ ರಸ್ತೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ತಿಪ್ಪೇಸ್ವಾಮಿ ಮಾತನಾಡಿ, ಪಂಚಾಯತ್ ರಾಜ್ ಇಲಾಖೆ ಹಾಗೂ ಶಿಕ್ಷಣ ಇಲಾಖೆಯು ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು, ಮಕ್ಕಳ ಸಾಗಣಿಕೆ ನಿಷೇದ, ಬಾಲ್ಯ ವಿವಾಹ ನಿಷೇದ, ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಮಕ್ಕಳ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಳಿದಾಸ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿ.ಕೆ.ಬೊಮ್ಮಲಿಂಗಯ್ಯ, ಸಮಾಜದ ಪ್ರತಿಯೊಬ್ಬ ಪ್ರಜೆಯು ಸಮಾ
ನತೆಯಿಂದ ಜೀವಿಸಬೇಕು. ಯಾವುದೇ ತಾರತಮ್ಯ ಮಾಡಬಾರದು ಎಂಬ ಕಾರಣಕ್ಕೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಭೂತರಾಜು, ಉಪಾಧ್ಯಕ್ಷೆ ಜಯಮ್ಮ, ಸದಸ್ಯರಾದ ರಂಗಪ್ಪ, ಎಂ.ಲಕ್ಷ್ಮಿದೇವಿ, ಮಮತಾ, ಡಿ.ಎಸ್.ರಂಗನಾಥ್, ನರಸಿಂಹಯ್ಯ, ಮುಖ್ಯ ಶಿಕ್ಷಕರಾದ ಹನುಂತರಾಯಪ್ಪ, ಪ್ರಕಾಶ್, ರುದ್ರೇಶ್ ನಾಯ್ಕ, ಲಿಂಗರಾಜು, ಶಾಹಿರಾಬಾನು, ಪ್ರಮೋದ, ನಾಗರಾಜು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.