ADVERTISEMENT

ಕಾರ್ಮಿಕರ ಕಾಯಂ: ಸರ್ಕಾರ ಮಾತಿಗೆ ತಪ್ಪದಿರಲಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 10:48 IST
Last Updated 16 ಫೆಬ್ರುವರಿ 2017, 10:48 IST
ತುಮಕೂರು: ಗುತ್ತಿಗೆ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ಪೌರ ಕಾರ್ಮಿಕರ ಸಂಘದ (ಸಿಐಟಿಯು) ನೇತೃತ್ವದಲ್ಲಿ ಪೌರ ಕಾರ್ಮಿಕರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. 
 
ನಗರದ  ಬಿಜಿಎಸ್‌ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಗುತ್ತಿಗೆ ಪೌರ ಕಾರ್ಮಿಕರು, ರಾಜ್ಯ ಸರ್ಕಾರದ  ಧೋರಣೆ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ನಂತರ ಹೆಚ್ಚುವರಿ ಜಿಲ್ಲಾಧಿಕಾರಿಗೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಈ ಹಿಂದಿನ ಬಜೆಟ್‌ನಲ್ಲಿ ಘೋಷಿಸಿರುವಂತೆ  ಗುತ್ತಿಗೆ ಪೌರ ಕಾರ್ಮಿಕರ ಸೇವೆಗಳನ್ನು ಕಾಯಂಗೊಳಿಸಬೇಕು ಎಂದು ಪಿಯುಸಿಎಲ್‌ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ದೊರೈರಾಜ್ ಒತ್ತಾಯಿಸಿದರು.
 
ಮಾರ್ಚ್‌ 2017ರೊಳಗೆ ಹಂತ ಹಂತವಾಗಿ ಪೌರ ಕಾರ್ಮಿಕರನ್ನು ಕಾಯಂ ಮಾಡುವುದಾಗಿ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಈಗ ಸರ್ಕಾರ ಕೆಲವು ಅಧಿಕಾರಿಗಳ ಮಾತು ಕೇಳಿ ಕಾಯಂ ವಿಚಾರದಲ್ಲಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.  
 
ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ರಾಜ್ಯ ಸರ್ಕಾರ ಪೌರ ಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಘೋಷಣೆ ಮಾಡಿತ್ತು. ಈಗ ಕಾಯಂ ಮಾಡುವ ವಿಚಾರವನ್ನು ಮರೆ ಮಾಚುತ್ತಿದೆ ಎಂದು ಆರೋಪಿಸಿದರು.
 
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಎಲ್ಲಾ ಕಾರ್ಮಿಕರನ್ನು ಕಾಯಂಗೊಳಿಸಲು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ಹಲವು ಕಾರ್ಮಿಕ ಕಾನೂನುಗಳು ಇದ್ದರೂ ಸಹ ಅಧಿಕಾರಿಗಳು ಅವುಗಳ ಜಾರಿಗೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
 
ಕಾರ್ಮಿಕರ ಕಾಯಮಾತಿಗೆ ಕೆಲವು ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಬೇಕು. ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ಕಾಯಂ ಮಾಡಬೇಕು ಎಂದು ಆಗ್ರಹಿಸಿದರು.
 
ಸಂಘದ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ ಮಾತನಾಡಿ,  ಸಮಾಜ ಕಲ್ಯಾಣ ಇಲಾಖೆ ಸಚಿವರು, ಪೌರಾಡಳಿತ ಸಚಿವರು, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಕಾರ್ಮಿಕರನ್ನು ಕಾಯಂಗೊಳಿಸುವ ಸಂಬಂಧ ಭರವಸೆ ನೀಡಿದ್ದರು. ಆದರೆ ಅದು ಭರವಸೆಯಾಗಿಯೆ ಉಳಿದಿದೆ ಎಂದರು.
 
 ಪ್ರತಿಭಟನೆಯಲ್ಲಿ ಮುಖಂಡರಾದ ಸಿ.ವೆಂಕಟೇಶ್, ರಾಮಕೃಷ್ಣ, ನರಸಿಂಹಮೂರ್ತಿ, ಕದುರಪ್ಪ, ಸಿದ್ದಲಿಂಗ, ಮಂಜು, ಇಂದಿರಮ್ಮ ದೇವರಾಜು, ಗೌಡ, ಸುರೇಂದ್ರ, ಚಿಕ್ಕಗಂಗಯ್ಯ, ಡಿವೈಎಫ್ಐ ದರ್ಶನ್, ಎಸ್ಎಫ್ಐನ ಶಿವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.