ADVERTISEMENT

ಕುಡಿಯುವ ನೀರಿಗೆ ಶುರುವಾಯ್ತು ಸಂಕಷ್ಟ

ಬತ್ತುತ್ತಿವೆ ಕೊಳವೆಬಾವಿಗಳು, ಖಾಲಿಯಾಯ್ತು ಬುಗುಡನಹಳ್ಳಿ ಕೆರೆ ನೀರು

ಎಂ.ಚಂದ್ರಪ್ಪ
Published 10 ಏಪ್ರಿಲ್ 2017, 4:57 IST
Last Updated 10 ಏಪ್ರಿಲ್ 2017, 4:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ದಿನಗಳು ದೂರವಿಲ್ಲ. ಬುಗುಡನಹಳ್ಳಿ ಕೆರೆಯಲ್ಲಿನ ಡೆಡ್‌ ಸ್ಟೋರೆಜ್‌ ನೀರು ಈಗ ಸಂಪೂರ್ಣ ಖಾಲಿಯಾಗಿದೆ. ಪಾಲಿಕೆಯ 173 ಕೊಳವೆಬಾವಿಗಳಲ್ಲಿ ನೀರು ಬತ್ತಿದೆ. 

ಮೈದಾಳ ಕೆರೆಯಿಂದ ನೀರು ತರುವ ವಿಚಾರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಕುಡಿಯುವ ನೀರು ಪೂರೈಸಲು ಪಾಲಿಕೆ ಅಧಿಕಾರಿಗಳು ಪರದಾಡುವಂತಾಗಿದೆ.

ನಗರದ ಬಹುತೇಕ ವಾರ್ಡ್‌ಗಳಲ್ಲಿ 10 ದಿನಕ್ಕೆ ಒಮ್ಮೆ ನೀರು ಬಿಡುತ್ತಿದ್ದು, ಅಗತ್ಯ ಪ್ರಮಾಣದ ನೀರಿಗಾಗಿ ಜನರು ದುಬಾರಿ ಹಣ ತೆತ್ತು ಖಾಸಗಿ ಟ್ಯಾಂಕರ್‌ಗಳಿಂದ ನೀರು ಖರೀದಿಸುತ್ತಿದ್ದಾರೆ.

ಹಳ್ಳದ ನೀರೇ ಗತಿ: ಬುಗುಡನಹಳ್ಳಿ ಕೆರೆಯ ಹಳ್ಳಗಳಲ್ಲಿರುವ ನೀರನ್ನು ಸಂಗ್ರಹಿಸಿ ಸಂಸ್ಕರಿಸಲಾಗುತ್ತಿದೆ. ಕೆರೆಯ ಅಂಗಳದ ಹಳ್ಳದ ನೀರನ್ನು ಪಂಪ್‌ಹೌಸ್‌ಗೆ ತರಲು ಹಿಟಾಚಿ ಯಂತ್ರದಿಂದ ಕಾಲುವೆ ತೆಗೆಯಲಾಗುತ್ತಿದೆ. ಈ ಹಳ್ಳಗಳಲ್ಲಿರುವ ನೀರು ಬಳಸಿದರೆ 15 ದಿನಕ್ಕೆ ಆಗಬಹುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದರು.

ಪಾಲಿಕೆ ವ್ಯಾಪ್ತಿಯ ಕೊಳವೆಬಾವಿಗಳಲ್ಲಿ ನಿತ್ಯ 210 ಲಕ್ಷ ಲೀಟರ್‌ ನೀರನ್ನು ಪಡೆಯಲಾಗುತ್ತಿದೆ. ಮೈದಾನ ಕೆರೆ ನೀರನ್ನೂ ಬಳಸಿದರೆ ಒಂದೂವರೆ ತಿಂಗಳು ಆಗಬಹುದು. ಅಷ್ಟರಲ್ಲಿ ಮಳೆ ಬಂದರೆ ಸಮಸ್ಯೆ ನೀಗಲಿದೆ. ಇಲ್ಲವಾದರೆ ಸಮಸ್ಯೆ ಬಿಗಡಾಯಿಸಲಿದೆ ಎಂದು ಹೇಳಿದರು.

ಖಾಸಗಿ ಕೊಳವೆ ಬಾವಿ ವಶಕ್ಕೆ ಮೀನಮೇಷ: ಖಾಸಗಿ ಕೊಳವೆ ಬಾವಿಗಳನ್ನು ಸುಪರ್ದಿಗೆ ಪಡೆದು ನೀರು ಹರಿಸಲು ಪಾಲಿಕೆ ಮೀನಮೇಷ ಎಣಿಸುತ್ತಿದೆ. ನಗರ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಖಾಸಗಿ ಕೊಳವೆಬಾವಿಗಳಿವೆ. ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದಲ್ಲಿ ವಶಕ್ಕೆ ಪಡೆದು ನೀರು ಹರಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

1.2 ಕೋಟಿ ಘನ ಅಡಿ ನೀರು
ಮೈದಾಳ ಕೆರೆಯಲ್ಲಿ 1.2 ಕೋಟಿ ಘನ ಅಡಿಯಷ್ಟು ನೀರು ಸಂಗ್ರಹವಿದೆ ಎಂದು ಸಣ್ಣ ನೀರಾವರಿ ಇಲಾಖೆ ವರದಿ ನೀಡಿದೆ. ನಗರ ಪ್ರದೇಶ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ದಿನದ 24 ಗಂಟೆ ನೀರು ಹರಿಸಿದರೂ 2 ತಿಂಗಳಿಗೆ ಆಗುವಷ್ಟು ನೀರಿದೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

‘ಸದ್ಯ ಮೈದಾಳ ಕೆರೆಯಿಂದ ನೀರು ತರುವ ಪೈಪ್‌ಲೈನ್‌ ದುರಸ್ತಿ ಪೂರ್ಣಗೊಂಡಿದೆ. ಒಂದೆರಡು ದಿನದಲ್ಲಿ ವಿದ್ಯಾನಗರದ ಪಂಪ್‌ಹೌಸ್‌ಗೆ ನೀರು ಹರಿಸಲಾಗುವುದು’ ಎಂದು ಪಾಲಿಕೆ ಎಂಜಿನಿಯರ್‌ ವಸಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.