ADVERTISEMENT

ಕ್ರೀಡೆಯಿಂದ ಆತ್ಮ ವಿಶ್ವಾಸ ವೃದ್ಧಿ

ತುಮಕೂರು ವಿ.ವಿ.ಅಂತರ್‌ ಕಾಲೇಜು ಕ್ರಿಕೆಟ್ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 12:48 IST
Last Updated 23 ಮಾರ್ಚ್ 2018, 12:48 IST

ಪಾವಗಡ: ‘ದೈಹಿಕ, ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಸಹಕಾರಿ’ ಎಂದು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಚಂದ್ರಪ್ಪ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ವೈ.ಇ.ಆರ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ನಡೆದ ತುಮಕೂರು ವಿಶ್ವವಿದ್ಯಾನಿಲಯ ಅಂತರ್‌ ಕಾಲೇಜು ಪುರುಷರ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕ್ರೀಡೆಯಿಂದ ಆತ್ಮ ವಿಶ್ವಾಸ ವೃದ್ಧಿಯಾಗುತ್ತದೆ. ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಆಟೋಟಗಳಿಂದ ಸಾಧ್ಯ. ಯುವಜನರು ಸೋಮಾರಿಗಳಾಗದೆ ಮೈದಾನದಲ್ಲಿ ಕಾಲ ಕಳೆಯಬೇಕು. ಎಲೆಕ್ಟ್ರಾನಿಕ್ ಉಪಕರಣಗಳ ದಾಸರಾಗದೆ ಕ್ರಿಯಾಶೀಲರಾಗಬೇಕು’ ಎಂದು ಅವರು ಹೇಳಿದರು.

ADVERTISEMENT

ಸರ್ಕಾರಿ ಪಿ.ಯು. ಕಾಲೇಜಿನ ಪ್ರಾಂಶುಪಾಲ ಬಸವಲಿಂಗಪ್ಪ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಪಠ್ಯದಷ್ಟೇ, ಪಠ್ಯೇತರ ಚಟುವಟಿಕೆಗಳೂ ಮುಖ್ಯ. ಕ್ರೀಡೆಯಲ್ಲಿ ಸಾಧನೆ ಮಾಡುವವರಿಗೆ ಸುಲಭವಾಗಿ ಉದ್ಯೋಗಾವಕಾಶ ಸಿಗುತ್ತದೆ. ಕ್ರೀಡಾ ಪಟುಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿ ಸೌಲಭ್ಯ ಇದೆ. ಚಿಕ್ಕಂದಿನಿಂದಲೇ ಆಸಕ್ತಿ ಇರುವ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

ಕ್ರಿಕೆಟ್ ತರಬೇತುದಾರ ವಿ.ಆರ್. ಹರೀಶ್, ತೀರ್ಪುಗಾರ ರಾಘವೇಂದ್ರ, ಲೋಕೇಶ್, ಸಹಾಯಕ ಪ್ರಾಧ್ಯಾಪಕ ಸುಮುಖ್, ಪ್ರಸನ್ನಕುಮಾರ್, ಮಧು, ಪೂಜಾ, ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.