ADVERTISEMENT

ಗಂಟೆಯಲ್ಲಿ 300ಕ್ಕೂ ಹೆಚ್ಚು ಸಸಿ ಮಾರಾಟ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 10:25 IST
Last Updated 8 ಜುಲೈ 2017, 10:25 IST

ಚಿಕ್ಕನಾಯಕನಹಳ್ಳಿ: ಜಾತ್ರೆಗೆ ಬಂದಿದ್ದ ಜನ ಮನೆಗೆ ಮರಳುವಾಗ ಸಸಿಗಳನ್ನು ಹಿಡಿದು ನಡೆದರು. ತಮಗೆ ಬೇಕಾದ ಸಸಿಗಳನ್ನು ಕೈಯಲ್ಲಿ ಹಿಡಿದು ದಂಪತಿ  ಠೀವಿಯಿಂದ ರಸ್ತೆಯಲ್ಲಿ ನಡೆದ ದೃಶ್ಯ ಸೊಗಸಾಗಿತ್ತು. ಜನ ಬೈಕ್, ಸ್ಕೂಟಿ, ಕಾರುಗಳಲ್ಲಿ ಗಿಡಗಳನ್ನು ತುಂಬಿಕೊಂಡು ಮನೆ ದಾರಿ ಹಿಡಿದರು. ಈ ದೃಶ್ಯ ಕಂಡು ಬಂದಿದ್ದು ಪಟ್ಟಣದ ಹಳೆಯೂರು ಆಂಜನೇಯ ಸ್ವಾಮಿ ಜಾತ್ರೆಯಲ್ಲಿ.

ಅರೆ, ಜಾತ್ರೆಗೂ ಗಿಡಕ್ಕೂ ಏನು ನಂಟು! ಎಂದು ಉಬ್ಬೇರಿಸಬೇಡಿ. ಜಾತ್ರೆ ಸಲುವಾಗಿ ಸೇರುವ ಸಾವಿರಾರು ಜನಕ್ಕೆ ಪರಿಸರ ಪ್ರೇಮ ಹುಟ್ಟುಹಾಕುವ ಉದ್ದೇಶದಿಂದ ಪಟ್ಟಣದ ನೆರಳು ಸಂಘಟನೆ, ತಾಲ್ಲೂಕು ಅರಣ್ಯ ಇಲಾಖೆ ಹಾಗೂ ಪುರಸಭೆ ಜತೆಗೂಡಿ ಸಸ್ಯ ಸಂತೆ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದ್ದವು.

ಜಾತ್ರೆಯಿಂದ ಮನೆಗೆ ಹಿಂದಿರುಗುವಾಗ ಜನ ಕೈಯಲ್ಲಿ ಗಿಡಗಳನ್ನು ಹಿಡಿದು ನಡೆದರು. ಒಂದು ಗಂಟೆಯಲ್ಲಿ ಹಲಸು, ಮಾವು, ನೇರಳೆ, ತೇಗ, ಹೆಬ್ಬೇವು, ಸಿಲ್ವರ್ ಮತ್ತು ವಿವಿಧ ಜಾತಿಯ ಹೂವಿನ ಗಿಡಗಳು ಸೇರಿದಂತೆ 300ಕ್ಕೂ ಹೆಚ್ಚು ಸಸಿಗಳು ಮಾರಾಟವಾಗಿದ್ದು ವಿಶೇಷ.

ADVERTISEMENT

ಪುರಸಭೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ, ‘ಜಾತ್ರೆಗೆ ಬರುವ ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಾತ್ರೆಯಲ್ಲಿ ಸಸ್ಯ ಸಂತೆ ಆಯೋಜಿಸಲಾಗಿತ್ತು. ನೆರಳು ತಂಡದ ಯುವಕರು ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಕೈಜೋಡಿಸಿದ್ದರ ಫಲವಾಗಿ ಜಾತ್ರೆ ಸಂದರ್ಭದಲ್ಲಿ ಸಸ್ಯ ಸಂತೆ ಮಾಡಲು ಸಾಧ್ಯವಾಯಿತು’ ಎಂದರು.

‘ಪುರಸಭೆ ಸಿಬ್ಬಂದಿ ಹಾಗೂ ಸದಸ್ಯರು ಸಸ್ಯ ಸಂತೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಸಸ್ಯ ಸಂತೆಗೆ ಜನರ ಸ್ಪಂದನೆ ಅಭೂತ ಪೂರ್ವವಾಗಿತ್ತು. ಇಂಥ ಕಾರ್ಯಗಳು ಇನ್ನೂ ಹೆಚ್ಚು ಆಗಬೇಕಿದೆ’ ಎಂದರು.

ನವ ದಂಪತಿಗೆ ಸಸ್ಯ ಕಾಣಿಕೆ: ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘ ಆಯೋಜಿಸಿದ್ದ ನವ ದಂಪತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 50ಕ್ಕೂ ಹೆಚ್ಚು ನವ ದಂಪತಿಗೆ ನೆರಳು ತಂಡ ಸಸ್ಯಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಹೊಸ ಬಾಳಿಗೆ ಕಾಲಿಡುತ್ತಿರುವ ಜೋಡಿಗಳನ್ನು ವಿನೂತನವಾಗಿ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.