ADVERTISEMENT

ಗಾಯಗೊಂಡಿದ್ದ ಹೆಣ್ಣುಚಿರತೆ ಕಳೇಬರ ಪತ್ತೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2015, 9:00 IST
Last Updated 6 ಡಿಸೆಂಬರ್ 2015, 9:00 IST

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿ ವ್ಯಾಪ್ತಿಯ ಕೊಪ್ಪ ಗ್ರಾಮದಲ್ಲಿ ಶನಿವಾರ ಹೆಣ್ಣುಚಿರತೆ ಮೃತಪಟ್ಟಿದೆ. ಕತ್ತಿನ ಭಾಗದಲ್ಲಿ ಗಾಯಗೊಂಡಿದ್ದ ಸುಮಾರು ಒಂದೂವರೆ ವರ್ಷದ ಗಾಯಗೊಂಡ ಚಿರತೆ ಕಳೇಬರ ಕಂಡುಬಂದಿದೆ.

ಕೊಪ್ಪ-ಕೋಣನಕೆರೆ ರಸ್ತೆಯಲ್ಲಿ ಬೆಳಿಗ್ಗೆ ಚಿರತೆ ನೋಡಿದ ಗ್ರಾಮಸ್ಥರು ಭಯಗೊಂಡಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದಾರೆ.

ಚಿರತೆ ಜಾಡು ಹಿಡಿದ ಗ್ರಾಮಸ್ಥರು ಅದರ ಅಡಗುತಾಣ ಪತ್ತೆ ಮಾಡಿದ್ದಾರೆ. ಚಿರತೆ ಅಡಗಿದ್ದ ಸೇತುವೆಯ ಎರಡೂ ಕಡೆ ಹಳೆ ಬಾಗಿಲು ತಂದಿಟ್ಟು, ಆ ನಂತರ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಅರಣ್ಯ ಅಧಿಕಾರಿಗಳು, ಅರಿವಳಿಕೆ ತಜ್ಞರು ಮತ್ತು ಪಶುವೈದ್ಯಾಧಿಕಾರಿಗಳು ಚಿರತೆಯನ್ನು ಹಿಡಿಯಲು ಪ್ರಯತ್ನಿಸಿದಾಗ, ಅದು ಮೃತಪಟ್ಟಿರುವುದು ತಿಳಿದಿದೆ. ಆ ನಂತರ ಪರೀಕ್ಷಿಸಿದಾಗ  ಚಿರತೆ ಕತ್ತಿನಭಾಗದಲ್ಲಿ ಗಾಯ ಕೊಳೆತು, ಹುಳುಬಿದ್ದಿರುವುದು ಕಂಡುಬಂದಿದೆ.

ಗಂಟಲು ಭಾಗದಲ್ಲಿ ಗಾಯವಾದ ಹಿನ್ನೆಲೆಯಲ್ಲಿ ಬೇಟೆ ಆಡಲು ಸಾಧ್ಯವಾಗದೆ ಸಾವನ್ನಪ್ಪಿರಬಹದು ಎಂದು ಪಶು ವೈದ್ಯಾಧಿಕಾರಿ ತಿಳಿಸಿದರು. ಹಾಸನ ವೃತ್ತದ ಅರಿವಳಿಕೆ ತಜ್ಞ ಡಾ.ಮುರಳಿಧರ್ ಚಿರತೆ ಕಳೇಬರ ಪರೀಕ್ಷಿಸಿ, ಇನ್ನೊಂದು ಚಿರತೆಯಿಂದ ಗಾಯಗೊಂಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.