ADVERTISEMENT

ಚರಂಡಿಯಲ್ಲಿ ಹೂಳು; ಜನರಿಗೆ ಗೋಳು

ಡಿ.ಎಂ.ಕುರ್ಕೆ ಪ್ರಶಾಂತ
Published 29 ಮೇ 2017, 6:27 IST
Last Updated 29 ಮೇ 2017, 6:27 IST
ಸಿದ್ದಗಂಗಾ ಬಡಾವಣೆ ದೊಡ್ಡಚರಂಡಿ
ಸಿದ್ದಗಂಗಾ ಬಡಾವಣೆ ದೊಡ್ಡಚರಂಡಿ   

ತುಮಕೂರು: ಶುಕ್ರವಾರ ರಾತ್ರಿ (ಮೇ 26) ಸುರಿದ ಮಳೆಗೆ ನಗರದ ಕೆಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ವಸ್ತುಗಳಿಗೆ ಹಾನಿಯಾಗಿದೆ. ಇದಕ್ಕೆ ಪ್ರಾಥಮಿಕ ಕಾರಣಗಳನ್ನು ಹುಡುಕಲು ಹೊರಟರೆ ಮೊದಲಿಗೆ ಎದ್ದು ಕಾಣುವುದು ಬಹುತೇಕ ಬಡಾವಣೆಯ ಚರಂಡಿಗಳಲ್ಲಿ ಹೂಳು ತುಂಬಿರುವುದು.

ಚರಂಡಿಗಳಲ್ಲಿ ಕಸ, ಕಡ್ಡಿ, ಮಣ್ಣು ತುಂಬಿದೆ. ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಮಳೆಗಾಲ ಆರಂಭವಾಗುತ್ತದೆ ಎನ್ನುವಷ್ಟರಲ್ಲಿ ಮಹಾನಗರ ಪಾಲಿಕೆ ಎಚ್ಚೆತ್ತು ಚರಂಡಿಗಳಲ್ಲಿನ ಹೂಳು ತೆರವುಗೊಳಿಸಬೇಕಾಗಿತ್ತು.

ಆದರೆ ಸ್ಥಳೀಯ ಆಡಳಿತಕ್ಕೆ ಚರಂಡಿ ಹೂಳು ಸಮಸ್ಯೆಯಾಗಿ ಕಂಡೇ ಇಲ್ಲ! ಇದರ ಪರಿಣಾಮವನ್ನು ಮಳೆಗಾಲದ ಆರಂಭದಲ್ಲಿಯೇ ನಾಗರಿಕರು ತೀವ್ರವಾಗಿ ಎದುರಿಸುತ್ತಿದ್ದಾರೆ. ಒಂದು ಮಳೆಗೆ ಇಷ್ಟು ಸಮಸ್ಯೆಗಳು ಎದುರಾಗಿವೆ. ಮುಂದಿನ ಮಳೆಗಾಲದಲ್ಲಿ ಇನ್ನೆಷ್ಟು ಅಪಾಯಗಳನ್ನು ಎದುರಿಸಬೇಕಾಗಿದೆಯೋ ಎಂಬ ಚಿಂತೆ ನಾಗರಿಕರನ್ನು ಕಾಡಲಾರಂಭಿಸಿದೆ.

ADVERTISEMENT

ಸಿದ್ದಗಂಗಾ ಬಡಾವಣೆ, ಎಸ್‌ಎಸ್‌ ಪುರಂ, ಕೃಷ್ಣ ನಗರ, ಬಟವಡೆ, ವಿದ್ಯಾನಗರ, ಗಾಂಧಿನಗರ ಹೀಗೆ ಮಧ್ಯಮ ವರ್ಗ ಹಾಗೂ ಮೇಲ್ಮಧ್ಯಮ ವರ್ಗದವರು ವಾಸಿಸುವ ಬಡಾವಣೆಯಲ್ಲಿ ಚರಂಡಿಗಳು ಕಟ್ಟಿಕೊಂಡಿವೆ. ಅಂದ ಮೇಲೆ ತಳ ಸಮುದಾಯದ ಜನರು ವಾಸಿಸುವ ಕೊಳೆಗೇರಿಗಳ ಪಾಡು ಕೇಳುವಂತಿಲ್ಲ. ಕುರಿಪಾಳ್ಯ, ಟಿಪ್ಪುನಗರ, ಬಿಜಿ ಪಾಳ್ಯ ಸೇರಿದಂತೆ ಕೊಳೆಗೇರಿಗಳಲ್ಲಿನ ಬಹುತೇಕ ಚರಂಡಿಗಳಲ್ಲಿ ನೀರು ಮುಂದೆ ಹರಿದೇ ಇಲ್ಲ.

ಈ ಸಮಸ್ಯೆ ಒಂದು, ಎರಡು ಬಡಾವಣೆಗಳಿಗೆ ಸೀಮಿತವಾಗಿಲ್ಲ. ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿರುವ ನಗರದ ಬಹುತೇಕ ಬಡಾವಣೆಗಳಲ್ಲಿ ಕಣ್ಣಿಗೆ ರಾಚುತ್ತದೆ. ಕೆಲವು ಕಡೆ ನೀರು ನಿಂತಿದ್ದರೆ, ಚರಂಡಿ ಹಾಳಾಗಿದೆ. ಮತ್ತಷ್ಟು ಕಡೆ ಕಲ್ಲು ಮಣ್ಣಿನಿಂದ ಚರಂಡಿ ಮುಚ್ಚಿವೆ.

ಸೊಳ್ಳೆ, ಹುಳುಗಳ ಉತ್ಪತ್ತಿ: ಕೊಳಚೆ ನೀರು ನಿಂತರೆ ಸಹಜವಾಗಿ ಸೊಳ್ಳೆ ಹಾಗೂ ಕ್ರಿಮಿಕೀಟಗಳ ಹಾವಳಿ ಹೆಚ್ಚುತ್ತದೆ. ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಕೊಳೆಗೇರಿಗಳ ಚರಂಡಿಗಳನ್ನು ನೋಡಿದರೆ ಅಕ್ಷರಶಃ ನರಕದ ಸ್ಥಿತಿಯಲ್ಲಿವೆ. ಚರಂಡಿಯ ನೀರಿನಲ್ಲಿ ಹುಳುಗಳು ಉತ್ಪತ್ತಿಯಾಗುತ್ತಿರುವುದನ್ನು ಕಾಣಬಹುದು. ಪ್ಲಾಸ್ಟಿಕ್‌, ಕವರ್‌ಗಳು ತೇಲಾಡುತ್ತಿವೆ.

ಮಳೆ ನೀರು ನುಗ್ಗಿ ಉಂಟಾದ ಸಮಸ್ಯೆಯಿಂದ ಬೇಸತ್ತಿರುವ ಸಿದ್ದಗಂಗಾ ಬಡಾವಣೆಯ ಎಂಟನೇ ಕ್ರಾಸ್‌ನಲ್ಲಿರುವ ರಾಮಚಂದ್ರ ಅವರು ಬಾಡಿಗೆ ಮನೆಯಿಂದ ಬೇರೆಡೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದಾರೆ.

‘ಎರಡು ಅಡಿ ನೀರು ಮನೆಗೆ ನುಗ್ಗಿದೆ. ಕಾರಿನ ಸೈಲೆನ್ಸ್‌ರ್‌ಗೆ ನೀರು ಹೋಗಿದೆ. ನಮ್ಮ ಮನೆ ಒಂದೇ ಅಲ್ಲ ಇಂತಹ ಸಮಸ್ಯೆಗಳನ್ನು ಇಲ್ಲಿನ ಹಲವು ಮನೆಗಳವರು ಅನುಭವಿಸಿದ್ದಾರೆ’ ಎಂದರು ರಾಮಚಂದ್ರ. ಅವರ ಮನೆಗೆ ಒತ್ತಿಕೊಂಡಂತೆಯೇ ಚರಂಡಿ ಇದೆ. ಅದರಲ್ಲಿ ಕಸ ಕಡ್ಡಿ ತುಂಬಿ ನೀರು ಹರಿಯುತ್ತಿಲ್ಲ.

ಮನೆ ಸಮೀಪದ ಉದ್ಯಾನದತ್ತ ಕೈ ತೋರಿದ ರಾಮಚಂದ್ರ, ‘ಉದ್ಯಾನ ಪೂರ್ತಿ ನೀರು ನಿಂತಿತ್ತು. ಚರಂಡಿ ಹೂಳು ತೆಗೆದೇ ಎಷ್ಟೋ ವರ್ಷಗಳಾಗಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ಬಡಾವಣೆಯ ಬಸವರಾಜು ಸಹ ಚರಂಡಿಯ ಹೂಳಿನ ಸಮಸ್ಯೆಯನ್ನು ವಿವರಿಸಿದರು. ಪಾಲಿಕೆ ಸದಸ್ಯರಿಗೆ ಈ ಬಗ್ಗೆ ತಿಳಿಸಿದ್ದೀರಾ ಎಂದು ಪ್ರಶ್ನಿಸಿದರೆ, ‘ಅವರಿಗೆ ತಿಳಿದಿದೆ, ಆದರೆ ಏನೂ ಮಾಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಉಪ್ಪಾರಹಳ್ಳಿ ಗೇಟ್‌ನಿಂದ ರೈಲ್ವೆ ನಿಲ್ದಾಣ ಸಂಪರ್ಕಿಸುವ ರಸ್ತೆಯ ಆರಂಭದಲ್ಲಿಯೇ ಚರಂಡಿ ಹಾಳಾಗಿದೆ. ಈ ರಸ್ತೆಯಲ್ಲಿನ ಬಹುತೇಕ ಚರಂಡಿಗಳು ಮುಚ್ಚಿವೆ. ಮೇರಿ ಎಂಬುವವರ ಮನೆಯ ಎದುರಿನ ಚರಂಡಿ ನೆಲಮಟ್ಟದಿಂದ ಒಂದು ಇಂಚು ಮಾತ್ರ ಮೇಲೆ ಕಾಣುತ್ತದೆ! ರೈಲ್ವೆ ನಿಲ್ದಾಣದ ಎದುರಿನ ಚರಂಡಿಯೇ ಪೂರ್ಣ ನೆಲದೊಳಗೆ ಹುದುಗಿ ಹೋಗಿದೆ.

ವಿನೋಬನಗರ, ಕುರಿಪಾಳ್ಯ, ಟಿಪ್ಪುನಗರದ ಚರಂಡಿಗಳಲ್ಲಿ ನೀರು ಸಂಗ್ರಹವಾಗಿ ವಾಸನೆ ಬರುತ್ತಿದೆ. ಈಗಲಾದರೂ ಪಾಲಿಕೆ  ಎಚ್ಚೆತ್ತು ಹೂಳು ತೆಗೆಯಲು ಮುಂದಾಗದಿದ್ದರೆ ಮುಂದಿನ ಮಳೆಗಳಲ್ಲಿ ಮತ್ತೆ ಇದೇ ಸ್ಥಿತಿ ಖಂಡಿತ ತಲೆದೂರುತ್ತದೆ. ರೋಗ ರುಜಿನಗಳೂ ಹರಡುವ ಸಾಧ್ಯತೆ ದಟ್ಟವಾಗಿಯೇ ಇವೆ.

ಮನವಿ ನೀಡಿದರೂ ಪ್ರಯೋಜನವಾಗಿಲ್ಲ
‘ನಗರದಲ್ಲಿ ಸರ್ಕಾರ 26 ಕೊಳೆಗೇರಿಗಳನ್ನು ಗುರುತಿಸಿದೆ. ಆಶಾ ಕಿರಣ ಸ್ವಯಂ ಸೇವಾ ಸಂಸ್ಥೆ ಪ್ರಕಾರ 37 ಇವೆ. ಕೆಲವು ಸ್ಲಂಗಳು ತಗ್ಗು ಪ್ರದೇಶದಲ್ಲಿ ಇವೆ. ಮಳೆ ನೀರು ಹೊರ ಹೋಗಲು ತೆರೆದ ಚರಂಡಿಯನ್ನು ನಿರ್ಮಿಸಿಲ್ಲ. ಕೆಲವು ಚರಂಡಿಗೆ ಸ್ಲ್ಯಾಬ್ ಅಳವಡಿಸಿದ್ದಾರೆ’ ಎಂದು ಸ್ಲಂ ಜನಾಂದೋಲನ ಸಮಿತಿ ಅಧ್ಯಕ್ಷ ನರಸಿಂಹ ಮೂರ್ತಿ ತಿಳಿಸಿದರು.

‘ಕೆಲವು ಸ್ಲಂಗಳನ್ನು ಸ್ಥಳಾಂತರಿಸಬೇಕು ಎನ್ನುವ ಕಾರಣಕ್ಕೆ ಅವುಗಳಿಗೆ ಮೂಲ ಸೌಲಭ್ಯವನ್ನು ಕಲ್ಪಿಸಿಲ್ಲ. ಆದರೆ ಎಲ್ಲೆಡೆ ಚರಂಡಿಗಳಲ್ಲಿ ಹೂಳು ತುಂಬಿದೆ. ಇದನ್ನು ತೆಗೆಯುವಂತೆ ಜಿಲ್ಲಾಡಳಿತ ಹಾಗೂ ಪಾಲಿಕೆಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ತಗ್ಗು ಪ್ರದೇಶದ ಸ್ಲಂಗಳ ಜನರ ಸ್ಥಿತಿ ಕಷ್ಟದಲ್ಲಿದೆ’ ಎಂದು ಅಸಮಾಧಾನ ವ್ಯಕ್ತಪಡಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.