ADVERTISEMENT

ಜಿಲ್ಲೆಯಲ್ಲಿ ಶೇ 88ರಷ್ಟು ಮತದಾನ

ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ; ಮತಗಟ್ಟೆ ಎದುರು ಮತದಾರರಿಗೆ ಮುಗಿಬಿದ್ದು ಮನವಿ ಮಾಡಿದ ಅಭ್ಯರ್ಥಿಗಳು, ಬೆಂಬಲಿಗರು

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 7:28 IST
Last Updated 9 ಜೂನ್ 2018, 7:28 IST

ತುಮಕೂರು: ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ ಮತದಾನ ಜಿಲ್ಲೆಯ 12 ಮತಗಟ್ಟೆಗಳಲ್ಲಿ ಶುಕ್ರವಾರ ಶಾಂತಿಯುತವಾಗಿ ಮತ್ತು ಯಾವುದೇ ಗೊಂದಲಗಳಿಲ್ಲದೇ ನಡೆಯಿತು.

ಶಿಕ್ಷಕರ ಕ್ಷೇತ್ರ ಚುನಾವಣೆಯಾದರೂ ಬೆಳಿಗ್ಗೆ ಮತದಾನ ನಿಧಾನಗತಿಯಲ್ಲಿ ಆರಂಭವಾಯಿತು. 11 ಗಂಟೆಯ ಬಳಿಕ ಏರಿಕೆ ಕಂಡಿತು. ಮಧ್ಯಾಹ್ನ 2 ಗಂಟೆ ಹೊತ್ತಿಗೆ ಮತದಾರರು ಮತದಾನ ಮಾಡಲು ಮತಗಟ್ಟೆಗಳ ಮುಂದೆ ಉದ್ದದ ಸಾಲಿನಲ್ಲಿ ನಿಂತಿದ್ದು ತುಮಕೂರಿನ ಮೂರು ಮತಗಟ್ಟೆಗಳಲ್ಲಿ ಕಂಡಿತು.

ಸಾಮಾನ್ಯ ಚುನಾವಣೆಯನ್ನು ನಾಚಿಸುವ ಮಟ್ಟಿಗೆ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮತದಾರರನ್ನು ಕಾರು, ಮಿನಿ ಬಸ್, ವ್ಯಾನ್‌ಗಳಲ್ಲಿ ಮತಗಟ್ಟೆಯವರೆಗೂ ಕರೆತಂದು ಬಿಡುತ್ತಿದ್ದುದು ಕಂಡು ಬಂದಿತು.

ADVERTISEMENT

ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು, ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಅವರು ಬೆಳಿಗ್ಗೆಯೇ ತುಮಕೂರಿನ ಮತಗಟ್ಟೆಗಳ ಮುಂದೆ ಮತದಾರರಿಗೆ ಕಾದು ನಿಂತಿದ್ದರು. 12 ಗಂಟೆಯವರೆಗೂ ಮತದಾರರಿಗೆ ಮನವಿ ಮತಯಾಚಿಸಿದ ಬಳಿಕ ಜಿಲ್ಲೆಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತ ಯಾಚನೆ ಮಾಡಿದರು. ಉಭಯ ಅಭ್ಯರ್ಥಿಗಳ ಬೆಂಬಲಿಗರು, ಪಕ್ಷದ ಮುಖಂಡರು ಶಿಕ್ಷಕ ಮತದಾರರಲ್ಲಿ ಮತಯಾಚನೆ ಮಾಡಿದರು.

ತುಮಕೂರಿನಲ್ಲಿ ನಗರ ಶಾಸಕ ಬಿ.ಜಿ.ಜ್ಯೋತಿಗಣೇಶ್, ಮಾಜಿ ಶಾಸಕ ಬಿ.ಸುರೇಶ್‌ಗೌಡ ಸೇರಿದಂತೆ ಹಲವು ಮುಖಂಡರು ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ಸಚಿವ ಎಸ್.ಆರ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ ತೂಪಲ್ಲಿ ಹಾಗೂ ಪಕ್ಷದ ಮುಖಂಡರು ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು ಅವರ ಪರ ಮತಯಾಚನೆ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಎಂ.ರಾಮಪ್ಪ ಅವರ ಪರವಾಗಿ ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್, ಮುಖಂಡರಾದ ಟಿ.ಎಸ್‌. ನಿರಂಜನ್‌ ಸೇರಿದಂತೆ ಹಲವರು ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲು ಮತದಾರರಿಗೆ ಮನವಿ ಮಾಡಿದರು.

ವಿಶೇಷ: ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಹಾಗೂ ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು ಅವರು ಅಕ್ಕಪಕ್ಕವೇ ನಿಂತು ಹಸನ್ಮುಖಿಗಳಾಗಿ ಮತದಾರರಿಗೆ ಮತಯಾಚನೆ ಮಾಡಿದ್ದು ವಿಶೇಷವಾಗಿತ್ತು.

ಅನಾರೋಗ್ಯದಿಂದ ಬಳಲುತ್ತಿರುವ ಕೆಲ ಮತದಾರರನ್ನು ಸಂಬಂಧಿಕರು, ಅಭ್ಯರ್ಥಿಗಳ ಬೆಂಬಲಿಗರು ಕಾರಿನಲ್ಲಿ ಮತಗಟ್ಟೆಯವರೆಗೆ ಕರೆ ತಂದಿದ್ದು ಕಂಡು ಬಂದಿತು.

ವಾಚು, ಹಣ ಹಂಚಿಕೆ?

ಕುಣಿಗಲ್: ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶೇ 96.96ಷ್ಟು ಮತದಾನ ನಡೆದಿದೆ. ತಾಲ್ಲೂಕಿನಲ್ಲಿ 230 ಮತದಾರರಿದ್ದು, 223 ಮತ ಚಲಾವಣೆಯಾಗಿವೆ. 176 ಪುರುಷರ ಪೈಕಿ 170, 54 ಮಹಿಳೆಯರ ಪೈಕಿ 53 ಮತ ಚಲಾವಣೆಯಾಗಿವೆ.

ಪಟ್ಟಣದ ಹೊರವಲಯದ ಡಾಬಾಗಳು ಕಳೆದ ವಾರದಿಂದ ತುಂಬಿತುಳುಕಿ ಗ್ರಾಹಕರು ಹುಬ್ಬೇರಿಸುವಂತೆ ಕೆಲ ಶಿಕ್ಷಕರು ಮಾಡಿದ್ದಾರೆ. ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳ ಪರವಾಗಿ ಬೆಂಬಲಿಗರು ವಾಚು, ಹಣ ಹಂಚಿದರೆ, ಪ್ರಾದೇಶಿಕ ಪಕ್ಷದ ಅಭ್ಯರ್ಥಿಯ ಪರವಾಗಿಯೂ ಹಣ ಮತ್ತು ವಾಚು ಹಂಚಿಕೆಯಾಗಿವೆ ಎಂದು ಮತದಾರರೇ ಬಹಿರಂಗ ಪಡಿಸಿದ್ದಾರೆ.

ಕೆಲ ಶಿಕ್ಷಕರು ಪಕ್ಷದ ಪರ ಗುರುತಿಸಿಕೊಂಡು ಲಾಭ ಪಡೆದರೆ, ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದ ಮತದಾರರು ಮೂರು ಪಕ್ಷದ ಅಭ್ಯರ್ಥಿಗಳಿಂದ ಲಾಭ ಪಡೆದು ಸಂತೃಪ್ತಿ ಪಟ್ಟಿದ್ದಾರೆ.

ಜಿಲ್ಲೆಯ ಮತಗಟ್ಟೆವಾರು ಮತದಾನ ಪ್ರಮಾಣ (ಶೇಕಡಾವಾರು)

ಮತಗಟ್ಟೆ   ಪ್ರಮಾಣ

ಪಾವಗಡ 94
ಮಧುಗಿರಿ 95
ಶಿರಾ 92
ಚಿ.ನಾ.ಹಳ್ಳಿ 91
ತಿಪಟೂರು 92
ತುರುವೇಕೆರೆ 96
ಕುಣಿಗಲ್ 96
ಗುಬ್ಬಿ 90
ತುಮಕೂರು 87
ತುಮಕೂರು 80
ತುಮಕೂರು 75
ಕೊರಟಗೆರೆ   90

ಮತದಾನ ಪ್ರಮಾಣ

ಜಿಲ್ಲೆಯಲ್ಲಿ ಒಟ್ಟು ಶೇ 87.95 ರಷ್ಟು ಮತದಾನ ಆಗಿದೆ. ಬೆಳಿಗ್ಗೆ 11 ಗಂಟೆ ಹೊತ್ತಿಗೆ 22.76, ಮಧ್ಯಾಹ್ನ 1 ಗಂಟೆಗೆ ಶೇ 48.35, ಮಧ್ಯಾಹ್ನ 3 ಗಂಟೆಗೆ ಶೇ 76.08 ಮತದಾನ ಆಗಿತ್ತು. ಸಂಜೆ 5 ಗಂಟೆಗೆ ಶೇ 87.95 ರಷ್ಟು ಮತದಾನವಾಗಿದೆ. ಕೊನೆಯ ಎರಡು ಗಂಟೆ ಅವಧಿಯಲ್ಲಿ ಶೇ 11ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿ ಗರಿಷ್ಠ ಮತದಾನ ಕುಣಿಗಲ್‌ನಲ್ಲಿ (ಶೇ 96) ಆಗಿದೆ.

ಎಷ್ಟು ಮತದಾರರು: ಜಿಲ್ಲೆಯಲ್ಲಿ ಒಟ್ಟು 6,823 (ಪುರುಷರು– 4837, ಮಹಿಳೆಯರು– 1986) ಮತದಾರರಿದ್ದು, ಇದರಲ್ಲಿ 6001 (ಪುರುಷರು– 4366, ಮಹಿಳೆಯರು– 1635) ಮತದಾರರು ಮತ ಚಲಾಯಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.