ADVERTISEMENT

ಜೆಡಿಎಸ್ ಮುಖಂಡರು, ನಾಗರಿಕರ ಪ್ರತಿಭಟನೆ

ಡೆಂಗಿ ಸಾವು ಪ್ರಕರಣ: ನಗರಸಭೆ ಅಧ್ಯಕ್ಷರ ಮಾತಿಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 10:37 IST
Last Updated 13 ಜುಲೈ 2017, 10:37 IST

ಶಿರಾ: ಇತ್ತೀಚೆಗೆ ಡೆಂಗಿಯಿಂದ ಮೃತಪಟ್ಟ ಮಧುಸೂದನ್ ಅವರ ಕುರಿತು ನಗರಸಭೆ ಅಧ್ಯಕ್ಷ ಅಮಾನುಲ್ಲಾ ಖಾನ್ ಆಡಿದ ಮಾತಿನಿಂದ ಕೆರಳಿದ ಭವಾನಿನಗರ ನಿವಾಸಿಗಳು ಅಧ್ಯಕ್ಷರ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದರು.

ನಗರಸಭೆ ಕಚೇರಿಯಲ್ಲಿ ಮಂಗಳವಾರ ಅಮಾನುಲ್ಲಾಖಾನ್ ಸದಸ್ಯರ ಜೊತೆ ಮಾತುಕತೆ ನಡೆಸುತ್ತಿದ್ದ ವೇಳೆ ‘ಮಧುಸೂದನ್ ಡೆಂಗಿಯಿಂದ ಮೃತಪಟ್ಟಿಲ್ಲ. ಕೆಲವರು ಇದರ ಲಾಭ ಪಡೆಯಲು ನಗರಸಭೆ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರು’ ಎಂದು ಆರೋಪಿಸಿದರು. ಆಗ ಸದಸ್ಯ ಅಂಜಿನಪ್ಪ ಹಾಗೂ ಅಮಾನುಲ್ಲಾ ಖಾನ್ ನಡುವೆ ಮಾತಿನ ಚಕಮುಕಿ ನಡೆಯಿತು. 

‘ಅಧ್ಯಕ್ಷರು ತಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆಯಾಚಿಸಬೇಕು. ಅಲ್ಲಿಯವರೆಗೂ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ’ ಎಂದು ನಾಗರಿಕರು ಪಟ್ಟು ಹಿಡಿದರು.

ADVERTISEMENT

ಜೆಡಿಎಸ್ ಮುಖಂಡ ಬಿ.ಸತ್ಯನಾರಾಯಣ ಮಾತನಾಡಿ, ‘ಜನರು ಸಚಿವ ಟಿ.ಬಿ.ಜಯಚಂದ್ರ ಅವರನ್ನು ಎರಡು ಬಾರಿ ಆಯ್ಕೆ ಮಾಡಿದ್ದಾರೆ. ಆದರೆ ಅವರು ಜನರ ನೋವಿಗೆ ಸ್ವಂದಿಸುತ್ತಿಲ್ಲ. ನಗರಸಭೆ ಅಧ್ಯಕ್ಷರು ತಮ್ಮ ಜವಾಬ್ದಾರಿ ಮರೆತು ಮೃತ ವ್ಯಕ್ತಿಯ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಅವರು ಜನರ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು. 

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಉಗ್ರೇಶ್ ಮಾತನಾಡಿ, ‘ನಗರಸಭೆ ಆಡಳಿತ ನಿರ್ಲಕ್ಷ್ಯ ತಾಳಿದ ಕಾರಣ ಡೆಂಗಿ ಹೆಚ್ಚಿದೆ.  ಮಧುಸೂದನ್ ಸಾವನ್ನಪ್ಪಲು ಕಾರಣವಾಗಿದೆ. ಇದರ ನೇರ ಹೊಣೆಯನ್ನು ನಗರಸಭೆ ಹೊರಬೇಕು’ ಎಂದರು. ಜೆಡಿಎಸ್ ಮುಖಂಡ ಚಿದಾನಂದ ಎಂ.ಗೌಡ, ಮಧಸೂದನ್ ಕುಟುಂಬಕ್ಕೆ ₹ 10 ಸಾವಿರ ವೈಯಕ್ತಿಕ ಪರಿಹಾರ ಘೋಷಿಸಿದರು. 

‘ಮಧುಸೂದನ್ ಬಗ್ಗೆ ಕೇವಲವಾಗಿ ಮಾತನಾಡಿಲ್ಲ. ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆಯಾಚಿಸುವೆ’ ಎಂದು  ಅಮಾನುಲ್ಲಾ ಖಾನ್ ಹೇಳಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ನಗರಸಭೆ ಸದಸ್ಯರಾದ ಅಂಜಿನಪ್ಪ, ಪುಟ್ಟರಾಜು, ಮಂಜುನಾಥ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಟಿ.ಡಿ.ಮಲ್ಲೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಮುಡಿಮಡು ಮಂಜುನಾಥ್, ಹನುಮಂತರಾಜು, ಗೋವಿಂದರಾಜು, ಶಾಂತಕುಮಾರ್, ಹಾಲಪ್ಪ, ಶಿವು, ಬೋಜರಾಜು, ಲಕ್ಷ್ಮಮ್ಮ, ಕರಿಯಮ್ಮ, ರತ್ಮಮ್ಮ, ರೇಖಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.