ADVERTISEMENT

ಡೆಂಗಿ ಪತ್ತೆ ಯಂತ್ರಕ್ಕೆ ದೇಣಿಗೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 8:40 IST
Last Updated 5 ಸೆಪ್ಟೆಂಬರ್ 2017, 8:40 IST

ಚಿಕ್ಕನಾಯಕನಹಳ್ಳಿ: ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಡೆಂಗಿ ಪತ್ತೆ ಯಂತ್ರ ಇಲ್ಲದ ಹಿನ್ನೆಲೆಯಲ್ಲಿ ತಾಲ್ಲೂಕಿನ ನೆರಳು ಸಂಘಟನೆ ಹಾಗೂ ಕರ್ನಾಟಕ ಲಂಚಮುಕ್ತ ಆಂದೋಲನದ ಪದಾಧಿಕಾರಿಗಳು ಸೋಮವಾರ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದರು. ತಾತಯ್ಯನ ಗೋರಿಯಿಂದ ದೇಣಿಗೆ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಬಿ.ಎಚ್.ರಸ್ತೆಯಲ್ಲಿ ಹಾಗೂ ವಾರದ ಸಂತೆಯಲ್ಲಿ ದೇಣಿಗೆ ಸಂಗ್ರಹಿಸಲಾಯಿತು.ರೈತರು,ಕೂಲಿ ಕಾರ್ಮಿಕರು, ವರ್ತಕರು ಉದಾರ ದೇಣಿಗೆ ನೀಡಿದರು. ಬೆಳಿಗ್ಗೆ 1.30ರಿಂದ ಪ್ರಾರಂಭವಾದ ದೇಣಿಗೆ ಸಂಗ್ರಹ ಕಾರ್ಯ ಸಂಜೆ 7ಕ್ಕೆ ಮುಕ್ತಾಯವಾಯಿತು.

‘₹ 1ಲಕ್ಷಕ್ಕೂ ಅಧಿಕ ಮೊತ್ತದ ಹಣ ಸಂಗ್ರಹವಾಯಿತು. ದೇಣಿಗೆ ನೀಡಿದವರು ಹೆಸರು ಹಾಗೂ ದೇಣಿಗೆ ಮೊತ್ತವನ್ನು ದಾಖಲಿಸಲಾಗಿದ್ದು ಸಾರ್ವಜನಿಕವಾಗಿ ಲೆಕ್ಕ ನೀಡಲಾಗುವುದು. ಡೆಂಗಿ ಪತ್ತೆ ಯಂತ್ರಕ್ಕೆ ₹ 4 ಲಕ್ಷ ಹಣ ಬೇಕಿದ್ದು ಅಷ್ಟು ಹಣ ಸಂಗ್ರಹವಾಗುವವರೆಗೂ ದೇಣಿಗೆ ಸಂಗ್ರಹ ಕಾರ್ಯ ಮುಂದುವರೆಯುವುದು’ ಎಂದು ಸಂಘಟಕ ಮೊಹಮದ್ ಹುಸೇನ್ ಹೇಳಿದರು.

ಲಂಚಮುಕ್ತ ಕರ್ನಾಟಕದ ಜಿಲ್ಲಾ ಕಾರ್ಯದರ್ಶಿ ಬಟ್ಟರಹಳ್ಳಿ ಮಲ್ಲಿಕಾರ್ಜುನ್‌ ಮಾತನಾಡಿ, ‘ತಾಲ್ಲೂಕಿನಲ್ಲಿ ಡೆಂಗಿ, ಮಲೇರಿಯಾ ಹಾಗೂ ಚಿಕುನ್‌ ಗುನ್ಯಾ ಪ್ರಕರಣಗಳು ಹೆಚ್ಚುತ್ತಿದ್ದು ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ. ಇದೇ ಅವಕಾಶ ಬಳಸಿಕೊಂಡು ಖಾಸಗಿ ಪ್ರಯೋಗಶಾಲೆಗಳು ದುಬಾರಿ ಹಣ ಸುಲಿಗೆ ಮಾಡುತ್ತಿದ್ದಾರೆ. ಡೆಂಗಿ ಪತ್ತೆ ಯಂತ್ರವನ್ನು ತಾಲ್ಲೂಕು ಆಸ್ಪತ್ರೆಗೆ ನೀಡುವ ಉದ್ದೇಶದಿಂದ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದೇವೆ’ ಎಂದರು.

ADVERTISEMENT

‘ಈಗಾಗಲೆ ಡೆಂಗಿ ಪತ್ತೆ ಯಂತ್ರ ಒದಗಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ,ತಾಲ್ಲೂಕು ಹಂತದ ಅಧಿಕಾರಿಗಳು, ತಾಲ್ಲೂಕು ಆಡಳಿತ ಹಾಗೂ ಶಾಸಕರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಆದ್ದರಿಂದ ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದೇವೆ’ ಎಂದರು.

ಈ ಕುರಿತು ಪ್ರಜಾವಾಣಿಯೊಂದಿಗೆ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಣೇಶ್, ಯಂತ್ರ ಖರೀದಿಗೆ ಹಣದ ಕೊರತೆ ಇಲ್ಲ. ಆಸ್ಪತ್ರೆಯ ನಿಧಿಯಲ್ಲೇ ಹಣ ಇದೆ. ಶಾಸಕರು ತಮ್ಮ ನಿಧಿಯಿಂದಲೂ ಹಣ ಒದಗಿಸುವ ಭರವಸೆ ನೀಡಿದ್ದಾರೆ. ಅನಿವಾರ್ಯವಾದರೆ ಕೈಯಿಂದ (ಮ್ಯಾನ್ಯೂಯಲ್ ಆಗಿ) ರೋಗ ಪತ್ತೆ ಮಾಡುವ ವ್ಯವಸ್ಥೆ ಪ್ರಯೋಗಾಲಯದಲ್ಲಿ ಇದೆ. ಆದರೆ ಪ್ರಯೋಗಾಲಯ ತಂತ್ರಜ್ಞರ ಕೊರತೆ ಇದೆ. ಯಂತ್ರಕ್ಕಿಂತಲೂ ಸೂಕ್ತ ಸಿಬ್ಬಂದಿ ಒದಗಿಸುವುದು ಮುಖ್ಯ ಎಂದರು.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.