ADVERTISEMENT

ದಡಾರಮುಕ್ತ ದೇಶ ನಿರ್ಮಾಣಕ್ಕೆ ಸಹಕರಿಸಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:28 IST
Last Updated 8 ಫೆಬ್ರುವರಿ 2017, 6:28 IST

ತುಮಕೂರು: ‘ದೇಶವನ್ನು ದಡಾರ- ರುಬೆಲ್ಲಾ್ಲಾ ಮುಕ್ತವಾಗಿಸಲು ಪ್ರತಿಯೊಬ್ಬರೂ ಆರೋಗ್ಯ ಇಲಾಖೆ ಜತೆ ಕೈಜೋಡಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಶಾಂತಾರಾಂ ಹೇಳಿದರು.

ಸಿದ್ದಗಂಗಾ ಮಠದಲ್ಲಿ ಮಂಗಳವಾರ ಡಾ.ಶಿವಕುಮಾರ ಸ್ವಾಮೀಜಿ ಅವರೊಂದಿಗೆ ದಡಾರ– ರುಬೆಲ್ಲಾ ಲಸಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿಸಿದ್ದೇವೆ. ಅದೇ ರೀತಿ ದಡಾರ– ರುಬೆಲ್ಲಾ ಮುಕ್ತ ದೇಶ ಮಾಡಲು ಎಲ್ಲರೂ ಪಣ ತೊಡಬೇಕು’ ಎಂದು ಸಲಹೆ ನೀಡಿದರು.

‘9 ತಿಂಗಳ ಮೇಲ್ಪಟ್ಟ ಮಗುವಿನಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಈಗಾಗಲೇ ಯಾವುದೇ ಲಸಿಕೆ ಕೊಡಿಸಿದ್ದರೂ ದಡಾರ– ರುಬೆಲ್ಲಾ ಲಸಿಕೆಯನ್ನು ಕಡ್ಡಾಯವಾಗಿ ಕೊಡಿಸಬೇಕು’ ಎಂದರು.

ಡಾ. ಕೇಶವರಾಜು ಮಾತನಾಡಿ, ‘ದಡಾರ ಮತ್ತು ರುಬೆಲ್ಲಾ ರೋಗವು ವೈರಸ್‌ನಿಂದ ಬರುತ್ತದೆ. ಗಾಳಿಯಲ್ಲಿ ಹರಡುವ ಈ ಸಾಂಕ್ರಾಮಿಕ ರೋಗವೂ ಗರ್ಭಿಣಿಯರ ಭ್ರೂಣದೊಳಗೆ ಸೇರುವ ಆತಂಕ ಇರುತ್ತದೆ. ಸಂದಿ ನೋವು ಸಹ ಕಾಣಿಸಿಕೊಳ್ಳುತ್ತದೆ’ ಎಂದು ಹೇಳಿದರು.

‘ಮಕ್ಕಳಲ್ಲಿ ಸಣ್ಣ ಪ್ರಮಾಣದಲ್ಲಿ ಇದ್ದರೂ, ಗರ್ಭಿಣಿಯರು ರೋಗಕ್ಕೆ ತುತ್ತಾದಾಗ ಶೇ 90ರಷ್ಟು ಸಂದರ್ಭದಲ್ಲಿ ಮಹಿಳೆಯರ ಭ್ರೂಣಕ್ಕೆ ಸೇರಿಕೊಳ್ಳುತ್ತದೆ. ಇದರಿಂದ ಗರ್ಭಪಾತ, ಸತ್ತ ಸ್ಥಿತಿಯಲ್ಲಿ ಮಗುವಿನ ಜನನ ಆಗಬಹುದು’ ಎಂದು ವಿವರಿಸಿದರು.

‘ರುಬೆಲ್ಲಾ ಕಾಯಿಲೆಗೆ ತುತ್ತಾದ ಮಗುವಿನಲ್ಲಿ ಒಂದು ವರ್ಷದ ತನಕ ವೈರಸ್‌ ವಿಸರ್ಜನೆ ಆಗುತ್ತಿರುತ್ತದೆ. ಇದು ಇತರರ ಮೇಲೂ ಪರಿಣಾಮ ಬೀರಬಹುದು. ಲಸಿಕೆ ಹಾಕಿಸಿಕೊಳ್ಳದ ಮಕ್ಕಳು ಅಥವಾ ವಯಸ್ಕರು ರೋಗದಿಂದ ಬಳಲುತ್ತಿರುವವರ ಸಂಪರ್ಕ ಮಾಡಿದಾಗ ಕಾಯಿಲೆ ಬರುವ ಸಾಧ್ಯತೆ ಇದೆ’ ಎಂದರು.

ಮೇಯರ್ ಯಶೋದಮ್ಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಇಲಾಖೆ ಉಪನಿರ್ದೇಶಕ ನಂಜೇಗೌಡ, ಡಿಡಿಪಿಐ ಮಂಜುನಾಥ ಭಾಗವಹಿಸಿದ್ದರು. ಸಿದ್ದಗಂಗಾ ಮಠದಲ್ಲಿ ಓದುತ್ತಿರುವ 15 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು ಲಸಿಕೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.