ADVERTISEMENT

ದೇವಾಲಯಗಳಿಗೆ ಹರಿದು ಬಂದರು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2017, 9:19 IST
Last Updated 20 ಆಗಸ್ಟ್ 2017, 9:19 IST

ಕುಣಿಗಲ್: ಶ್ರಾವಣ ಮಾಸದ ಕೊನೆ ಶನಿವಾರದ ಪ್ರಯುಕ್ತ ತಾಲ್ಲೂಕಿನ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ಹೋಮ, ಅನ್ನ ಸಂತರ್ಪಣೆಗಳು ನಡೆದು ಭಕ್ತರ ಸಮೂಹ ತಮ್ಮ ಮನೆ ದೇವರುಗಳಿಗೆ ಪೂಜೆ ಸಲ್ಲಿದರು. ರಂಗಸ್ವಾಮಿಗುಡ್ಡದ ರಂಗನಾಥನ ಮತ್ತು ಗುಡ್ಡದ ಕೆಳಭಾಗದ ಆಂಜನೇಯಸ್ವಾಮಿ ದರ್ಶನಕ್ಕೆ ಸಹಸ್ರಾರು ಭಕ್ತರು ವಾಹನಗಳಲ್ಲಿ ಬಂದ ಕಾರಣ ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸ ಪಡಬೇಕಾಯಿತು.

ಮಧ್ಯಾಹ್ನ ನಡೆದ ಆಂಜನೇಯ ಸ್ವಾಮಿ ರಥೋತ್ಸವದಲ್ಲಿ ತಹಶೀಲ್ದಾರ್ ನಾಗರಾಜು ಭಾಗವಹಿಸಿದ್ದರು. 330 ಅಡಿ ಎತ್ತರದ ಬೆಟ್ಟ ಹತ್ತಿ ದೇವರ ದರ್ಶನ ಮಾಡಲು ಬಂದ ಭಕ್ತರಿಗೆ ದಾಸೋಹದ ವ್ಯವಸ್ಥೆಯನ್ನು ಭಕ್ತರೇ ಮಾಡಿದ್ದರು. ‌

ಪೂಜೆಯ ನಂತರ ಬೆಟ್ಟದ ಕೆಳಭಾಗದಲ್ಲಿ ಸಸ್ಯಹಾರ ಮತ್ತು ಮಾಂಸಾಹಾರದ ಹರಿಸೇವೆ ಕಾರ್ಯಕ್ರಮಗಳು ನಡೆದವು. ಕೊರಟಿ ಭಗವಾನ್ ಶನೇಶ್ಚರಸ್ವಾಮಿ ದೇವಾಲಯದಲ್ಲಿ ಸ್ವಾಮಿಯವರಿಗೆ ವಿಶೇಷ ಅಲಂಕಾರ, ಅಭಿಷೇಕ, ಪೂಜೆ ನಡೆದು ಅನ್ನಸಂತರ್ಪಣೆ ಮಾಡಲಾಯಿತು. ಬಿದನಗೆರೆ ಸತ್ಯಶನೇಶ್ಚರ, ತುಮಕೂರು ರಸ್ತೆಯ ಶನೇಶ್ಚರಸ್ವಾಮಿ ದೇವಾಲಯಗಳಲ್ಲಿ ಸಹ ವಿಶೇಷ ಪೂಜೆ ಅಲಂಕಾರ, ಅನ್ನಸಂತರ್ಪಣೆಗಳು ನಡೆಯಿತು.

ADVERTISEMENT

ಕೋಟೆ ತುಡಿಕೆ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ಪುರುಷ ಶ್ರೀ ಸೂಕ್ತ, ಗಣಪತಿ, ನವಗ್ರಹ, ಮೃತ್ಯುಂಜಯ, ವೆಂಕಟೇಶ್ವರ, ಮಹಾಲಕ್ಷ್ಮಿ, ರಾಮತಾರಕ, ಅಷ್ಟಾಯುಧ, ಅಷ್ಟದಿಕಾಲಕ, ಸುದರ್ಶನ, ನರಸಿಂಹ, ಪರಿವಾರ ಶಾಂತಿ ಹೋಮಗಳನ್ನು ನೆರೆವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.