ADVERTISEMENT

ನಮ್ಮ ಕೆರೆ, ನದಿಗಳ ಕಥೆ ಏನಾಯಿತು...

ಜಿಲ್ಲೆಯಲ್ಲಿ 62 ಮೈಲು ದೂರ ಹರಿಯುತ್ತಿದ್ದ ‘ಶಿಂಷಾ’, ಆರು ನದಿಗಳ ನಾಡಲ್ಲಿ ಹಾಳಾದ ಸರಣಿ ಕೆರೆಗಳ ಜಾಲ

ಸಿ.ಕೆ.ಮಹೇಂದ್ರ
Published 20 ಮಾರ್ಚ್ 2017, 5:19 IST
Last Updated 20 ಮಾರ್ಚ್ 2017, 5:19 IST
ಒಣಗಿರುವ ಶಿರಾ ಕೆರೆ
ಒಣಗಿರುವ ಶಿರಾ ಕೆರೆ   

ತುಮಕೂರು: ‘ಕಲ್ಪತರು ನಾಡು’ ಹೆಗ್ಗಳಿಕೆಯ ಜಿಲ್ಲೆಗೆ ‘ಕೆರೆಗಳ ನಾಡು’ ಎನ್ನುವ ಹಿರಿಮೆಯೂ ಇದೆ. ಜಿಲ್ಲೆಯಲ್ಲಿ ಬರೋಬರಿ 2,023 ಕೆರೆಗಳಿವೆ. ಈ ಕೆರೆಗಳನ್ನು ಜೀವಂತವಾಗಿಸಿದರೆ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯೇ ಸುಳಿಯುವುದಿಲ್ಲ.

ಹೆಚ್ಚು ಮಳೆ ಬಂದಿದ್ದರೆ ಕೆರೆಗಳು ಭರ್ತಿಯಾಗುತ್ತಿದ್ದವು ಎಂಬ ವಾದ ಸರಿಯಲ್ಲ ಎನ್ನುತ್ತಾರೆ ನೀರಾವರಿ ತಜ್ಞರು. 1900ರಿಂದ  2000ದ ವರೆಗಿನ ನೂರು ವರ್ಷಗಳ ಮಳೆ ದಾಖಲೆ ಪ್ರಕಾರ ಜಿಲ್ಲೆಯಲ್ಲಿ ಮೂರು–ನಾಲ್ಕು ವರ್ಷಗಳಿಗೆ ಒಮ್ಮೆ ತೀವ್ರ ಮಳೆ ಕೊರತೆ ಕಾಣಿಸಿಕೊಳ್ಳುತ್ತಿದೆ. ವಾರ್ಷಿಕವಾಗಿ 650 ಮಿಲಿ ಮೀಟರ್‌ನಿಂದ 700 ಮಿಲಿ ಮೀಟರ್‌ ಮಳೆ ಸುರಿಯುತ್ತದೆ. 

‌ನೂರು ವರ್ಷಗಳ ಮಳೆ ದಾಖಲೆ ಗಮನಿಸಿದರೆ 100 ಮಿಲಿ ಮೀಟರ್‌ಗಿಂತಲೂ ಕಡಿಮೆಯಾಗಿರುವ ಉದಾಹರಣೆ ಇಲ್ಲವೇ ಇಲ್ಲ. ಹೀಗಿರುವ ಕೆರೆಗಳನ್ನು ಉಳಿಸುವ ಪ್ರಯತ್ನ ಏಕೆ ಮಾಡುತ್ತಿಲ್ಲ ಎಂಬುದನ್ನು ಜಿಲ್ಲೆಯ ನೀರಿನ ಪ್ರಶ್ನೆಯಾಗಿಯೂ ನೋಡಬೇಕಾಗಿದೆ.

ಸರಣಿ ಕೆರೆಗಳ ವೈಶಿಷ್ಟ್ಯ: ಒಂದು ಕೆರೆ  ತುಂಬಿ ಕೋಡಿ ಬಿದ್ದರೆ ಆ ನೀರು ಮತ್ತೊಂದು ಕೆರೆಗೆ ಹೋಗುವಂತೆ ಕೆರೆಗಳನ್ನು ಜಿಲ್ಲೆಯಲ್ಲಿ ಕಟ್ಟಲಾಗಿದೆ. ಇದು ಹಿರಿಯರು ನಮಗೆ ಕೊಟ್ಟಿರುವ ವಿಶೇಷ ಬಳುವಳಿ. ಈಗ ಈ ಕೆರೆಯ ಸರಣಿ ಜಾಲವನ್ನೇ ಹಾಳು ಮಾಡಲಾಗಿದೆ. ಇದು ಕೆರೆಗಳು ತುಂಬದೇ ಇರಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜಕಾಲುವೆಗಳು ಅಕ್ರಮ ಮರಳು ಗಣಿಗಾರಿಕೆ, ಒತ್ತುವರಿಗೆ ಸಿಲುಕಿವೆ. ರಾಜ ಕಾಲುವೆಗಳ ತೆರವಿನ ಬಗ್ಗೆ ಯಾವೊಬ್ಬ ಜನಪ್ರತಿನಿಧಿ, ಅಧಿಕಾರಿಯೂ ಮಾತನಾಡುವುದಿಲ್ಲ. ಆದರೆ ಕೆರೆ ಹೂಳೆತ್ತುವ ಬಗ್ಗೆ ವಿಶೇಷ ಉತ್ಸುಕತೆ ತೋರುವರು. 

‘ಹಳ್ಳಿಗಳಲ್ಲಿ ಪ್ರತಿ ವರ್ಷ ತೋಟಗಳಿಗೆ ಕೆರೆ ಮಣ್ಣು (ಗೋಡು)  ಹಾಕುವ ಪರಿಪಾಠ ಈಗಲೂ ನಿಂತಿಲ್ಲ. ಕೆಲವು ಹಳ್ಳಿಗಳ   ಕೆರೆಗಳನ್ನು ಅತಿಯಾಗಿ ಮಣ್ಣು ತೆಗೆದು ಹಾಳು ಮಾಡಲಾಗಿದೆ.   ಹೂಳು ತೆಗೆದ ಬಳಿಕವೂ ಕೆಲವು ಕೆರೆಗಳು ತುಂಬಿಲ್ಲ. ಕೆರೆಗಳಿಗೆ ಮಳೆ ನೀರು ಬರುವ ಕಾಲುವೆ, ಜಲಮೂಲಗಳನ್ನು ಸರಿಪಡಿಸದ ಹೊರತು ಕೆರೆಗಳು ತುಂಬಲಾರವು’ ಎನ್ನುತ್ತಾರೆ ನಿವತ್ತ ಎಂಜಿನಿಯರ್‌ ರಾಮಚಂದ್ರಯ್ಯ.

ಆರು ನದಿಗಳು:  ದೇವರಾಯನದುರ್ಗದಲ್ಲಿ ಹುಟ್ಟುವ ಶಿಂಷಾ ನದಿಯು ತುಮಕೂರು–ಗುಬ್ಬಿ ತಾಲ್ಲೂಕಿನಲ್ಲಿ ಹರಿದು  ಕಲ್ಲೂರು ಕೆರೆ ಸೇರುತ್ತಿತ್ತು. ಅಲ್ಲಿಂದ ನಾಗರಹೊಳೆ ಸೇರಿ  ತುರುವೇಕೆರೆ ಕೆರೆಯನ್ನು ಸೇರುತ್ತಿತ್ತು. ಇಲ್ಲಿಂದ ಕುಣಿಗಲ್‌ಗೆ ಹರಿದು ಅಲ್ಲಿ ನಾಗಿನಿ ನದಿಗೆ ಸೇರುತ್ತಿತ್ತು. ನಂತರ ಈ ನದಿಗಳು ಎರಡಾಗಿ ಸೀಳಿ ಒಂದು ಮಾರ್ಕೋನಳ್ಳಿ ಜಲಾಶಯ ಸೇರಿದರೆ ಇನ್ನೊಂದು ಹುಲಿಯೂರು ದುರ್ಗ ಬೆಟ್ಟ ಸಾಲು ಬಳಸಿ ಮಂಡ್ಯ ಬಳಿ ಕಾವೇರಿ ನದಿಯಲ್ಲಿ ಲೀನವಾಗುತ್ತಿತ್ತು.

ಜಿಲ್ಲೆಯಲ್ಲಿ 62 ಮೈಲು ದೂರ ಹರಿಯುತ್ತಿದ್ದ ಈ ನದಿ ಪಾತ್ರ ಈಗ ಏನಾಗಿದೆ ಎಂದು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಈ ಅಂಶಗಳಲ್ಲಿಯೇ ಜಿಲ್ಲೆಯ ಬರಗಾಲ ನೀಗುವ ಉತ್ತರವೂ ಅಡಗಿದೆ.

‘ಶಿಂಷಾ ನದಿಯಂತೆಯೇ, ಸುವರ್ಣಮುಖಿ, ಕುಮುದ್ವತಿ, ಜಯಮಂಗಲಿ, ಉತ್ತರ ಪಿನಾಕಿನಿಯ ಕಥೆಯೂ ಆಗಿದೆ. ನಮ್ಮ ನದಿಗಳ ಕಥೆ ವ್ಯಥೆ ಆಲಿಸುವ ಬದಲು ಪಶ್ಚಿಮಘಟ್ಟಗಳಿಂದ ನದಿ ತಿರುಗಿಸಿಕೊಂಡು ಬರುವ ಕಡೆಗೆ ಗಮನ ನೀಡಿದ್ದೇವೆ. ನಮ್ಮ ನದಿಗಳ ಬಗ್ಗೆ ಕಿವಿಯಾನಿಸಿದರೆ ಜಿಲ್ಲೆಯ ಅರ್ಧದಷ್ಟು  ನೀರಿನ ಸಮಸ್ಯೆ ನೀಗಬಹುದು’ ಎನ್ನುತ್ತಾರೆ ಪರಿಸರವಾದಿಗಳು.

ಕೆರೆ ಪುನರುಜ್ಜೀವನಕ್ಕೆ 2004–05ರಲ್ಲೇ ವಿಶ್ವ ಬ್ಯಾಂಕ್‌ನ ಜಲ ಸಂವರ್ಧನಾ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಇದೂ  ಜಿಲ್ಲೆಯ ಜನರ ಕೈ ಹಿಡಿಯಲಿಲ್ಲ. ಕಾವೇರಿ ಕೊಳ್ಳದ ಕೆರೆಗಳನ್ನು ಕೈ ಬಿಟ್ಟು ಕೃಷ್ಣಾ ಕೊಳ್ಳದ ತಾಲ್ಲೂಕುಗಳ ಕೆರೆಗಳ ಹೂಳೆತ್ತಿ  ಸಂರಕ್ಷಿಸುವುದು ಯೋಜನೆಯ ಉದ್ದೇಶವಾಗಿತ್ತು. ಯೋಜನೆ ಅನುಷ್ಠಾನದಲ್ಲಿನ ಲೋಪದ ಕಾರಣ ಕೆರೆಗಳು ತುಂಬಲಿಲ್ಲ. ಬದಲಿಗೆ ಅಂತರ್ಜಲ ಮತ್ತಷ್ಟು ಕುಸಿದು ಈ ಭಾಗದಲ್ಲಿ ರೈತರ ಆತ್ಮಹತ್ಯೆಯನ್ನು ಹೆಚ್ಚಿಸಿತು.

ಈ ಯೋಜನೆಯ ಮೊದಲ ಹಂತದಲ್ಲಿ 340, ಎರಡನೇ ಹಂತದಲ್ಲಿ 119 ಕೆರೆಗಳನ್ನು ಪುನರುಜ್ಜೀವಗೊಳಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಈ ಯೋಜನೆ ಬಳಿಕ ಜಿಲ್ಲೆಯ 50 ಕೆರೆಗಳನ್ನು ಅಭಿವೃದ್ಧಿಗೊಳಿಸಲು ₹ 40 ಕೋಟಿ ವೆಚ್ಚದ ‘ತ್ರಿಬಲ್‌ ಆರ್‌’ ಯೋಜನೆಯೂ ಜಾರಿಯಾಯಿತು. ಆದರೆ ಈ ಎಲ್ಲ  ಅಂಥ ಸುಧಾರಣೆ ತರಲಿಲ್ಲ. ಬರವೂ ನೀಗಲಿಲ್ಲ.

ಕೆರೆಗಳಿಗೆ ಮಳೆ ನೀರು ಬರುವ ಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಿದರೆ ಕೆರೆಗಳು ತುಂಬಲಿವೆ ಎಂದು ಜಿಲ್ಲೆಯ ಅನೇಕ ಗ್ರಾಮಗಳ ಜನರು ತೋರಿಸಿಕೊಟ್ಟಿದ್ದಾರೆ. ಇಷ್ಟಾಗಿಯೂ ರಾಜಕಾಲುವೆಗಳ ಒತ್ತುವರಿ ತೆರವಿಗೆ ಮಾತ್ರ ಗಮನ  ಹರಿಸುತ್ತಿಲ್ಲ ಎನ್ನುತ್ತಾರೆ ಜಿಲ್ಲೆಯ ಜನರು.

ಸಾಮಾನ್ಯ ಜ್ಞಾನ ಬಳಸಿ; ಕೆರೆ ತುಂಬಿಸಿ
ಮಧುಗಿರಿ ತಾಲ್ಲೂಕಿನ 150 ಮನೆಗಳಿರುವ ಕೂನಳ್ಳಿಯಲ್ಲಿ ತುಂಬದ ಕೆರೆಯನ್ನು ಭರ್ತಿಗೊಳಿಸಲು ಮಾಡಿದ ಪ್ರಯೋಗ  ಯಶಸ್ವಿಯಾಗಿತ್ತು. ಕೆರೆ ತುಂಬಿದ ಬಳಿಕ ಇಲ್ಲಿನ ಅಂತರ್ಜಲ  ಮಟ್ಟ 150 ಅಡಿಗೆ ಏರಿತು. ಮಧುಗಿರಿಯ ಬಸವನಹಳ್ಳಿಯಲ್ಲೂ ಇಂಥ ಪ್ರಯೋಗ ನಡೆದಿತ್ತು.

ಎರಡು ವರ್ಷದ ಹಿಂದೆ ಕೆರೆ ಸುತ್ತಲಿನ ಬೆಟ್ಟ ಸಾಲುಗಳ ನೀರು ಕೆರೆಗೆ ಸೇರುತ್ತಿರಲಿಲ್ಲ. ಆಗ ಇಲ್ಲಿನ ಮಹಿಳೆಯರೇ ಮುಂದೆ ನಿಂತು  ಕೆರೆಗೆ ನೀರು ಹರಿದು ಬರುವ ಕಾಲುವೆಗಳನ್ನು ಸರಿಪಡಿಸಿದರು. ಕಾಲುವೆಯಲ್ಲಿ ತುಂಬಿದ್ದ ಮಣ್ಣು  ತೆಗೆದರು, ಗಿಡಗಂಟೆ ಕಡಿದರು. ಕೆರೆಗಳು ತುಂಬಿದವು. ‘ಕೆರೆಗಳನ್ನು ತುಂಬಿಸುವ ಈ ‘ಸಾಮಾನ್ಯ ಜ್ಞಾನ ದಂಡ’ವನ್ನು ಪ್ರಯೋಗಿಸದ ಹೊರತು ಜಿಲ್ಲೆಯ ಬರ ನೀಗದು.

ಅಡಿಕೆ, ತೆಂಗಿಗೆ ತಟ್ಟಿದ ಬಿಸಿ
ಕೆರೆಗಳಲ್ಲಿ ನೀರಿದ್ದರೆ ಕೊಳವೆಬಾವಿಗಳಲ್ಲಿ ಸ್ವಲ್ಪ ಮಟ್ಟಿಗೆ ನೀರು ದೊರೆಯುತ್ತಿತ್ತು. ಈಗ ಕೆರೆಗಳೇ ಒಣಗಿರುವ ಕಾರಣ ಜಿಲ್ಲೆಯ ಎಲ್ಲ ಭಾಗಗಳಲ್ಲೂ ಅಂತರ್ಜಲ ಬತ್ತಿದೆ. ಜಿಲ್ಲೆಯಲ್ಲಿ ಬಹುವಾರ್ಷಿಕ ಬೆಳೆಗಳಾದ ಅಡಿಕೆ, ತೆಂಗಿನ ತೋಟಗಳ ಮೇಲೆ ನೀರಿನ ಕೊರತೆ ತೀವ್ರವಾದ ಪರಿಣಾಮ ಬೀರಿದೆ.

ADVERTISEMENT

ಅನುಷ್ಠಾನವಾಗದ ಮಳೆ ನೀರು ಸಂಗ್ರಹ
ತುಮಕೂರು ನಗರದಲ್ಲಿ ಮಳೆ ನೀರು ಸಂಗ್ರಹವನ್ನು ಕಡ್ಡಾಯ ಮಾಡಬೇಕು ಎಂಬ ಚರ್ಚೆ ಈವರೆಗೂ ಕಾರ್ಯಗತವಾಗಿಲ್ಲ. ಆರು ವರ್ಷದ ಹಿಂದೆ ಈಗಿನ ಮಹಾನಗರ ಪಾಲಿಕೆ ಕಟ್ಟಡ,  ಸರ್ಕಾರಿ ಕಚೇರಿಗಳಲ್ಲಿ ಮಳೆ ನೀರು ಸಂಗ್ರಹ ಕಡ್ಡಾಯ ಮಾಡಬೇಕು ಎಂಬ ಚರ್ಚೆ ನಗರಸಭೆ ಸಾಮಾನ್ಯ ಸಭೆಯಲ್ಲಿ ನಡೆದಿತ್ತು. ಆದರೆ ಅನುಷ್ಠಾನ ಮಾತ್ರ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.