ADVERTISEMENT

ನೀರಿಗೆ ಬಾಯ್ಬಿಡುತ್ತಿರುವ ಜನರು

ಖಾಲಿಯಾದ ಕೆರೆಗಳು...ಕೊಳವೆ ಬಾವಿಯಲ್ಲಿ ಬಾರದ ನೀರು

ರಾಮರಡ್ಡಿ ಅಳವಂಡಿ
Published 20 ಮಾರ್ಚ್ 2017, 5:16 IST
Last Updated 20 ಮಾರ್ಚ್ 2017, 5:16 IST
ತುಮಕೂರಿನ ಉಪ್ಪಾರಹಳ್ಳಿಯಲ್ಲಿ ಟ್ಯಾಂಕರ್‌ನಲ್ಲಿ ನೀರು ಹಿಡಿಯಲು ಮುಗಿಬಿದ್ದ ನಿವಾಸಿಗಳು
ತುಮಕೂರಿನ ಉಪ್ಪಾರಹಳ್ಳಿಯಲ್ಲಿ ಟ್ಯಾಂಕರ್‌ನಲ್ಲಿ ನೀರು ಹಿಡಿಯಲು ಮುಗಿಬಿದ್ದ ನಿವಾಸಿಗಳು   

ತುಮಕೂರು: ಹೇಮಾವತಿ ಜಲಾಶಯದಿಂದ ಕೆರೆ ತುಂಬಿಸಿಕೊಂಡು ನೀರಿನ ಸಮಸ್ಯೆಗೆ ಸಿಲುಕದಂತೆ ಇರುತ್ತಿದ್ದ ತುಮಕೂರು ಮಹಾನಗರ ಈ ಬಾರಿ ನೀರಿಗಾಗಿ ಬಾಯ್ಬಿಡುತ್ತಿದೆ.

ತಾಲ್ಲೂಕಿನ ವಿವಿಧ ಗ್ರಾಮಗಳ ಸ್ಥಿತಿ ನಗರದ ಸ್ಥಿತಿಗಿಂತಲೂ ಇನ್ನೂ ಗಂಭೀರವಾಗಿದೆ. ಕೆರೆಗಳು ಬತ್ತಿದ್ದು, ದನಕರುಗಳಿಗೂ ನೀರಿಲ್ಲದಂತಾಗಿದೆ.
ಹೇಮಾವತಿ ನೀರಿನಿಂದ ಕೆರೆಗಳು ತುಂಬಿಕೊಳ್ಳುತ್ತಿದ್ದವು. ಈ ಬಾರಿ ಜಲಾಶಯದಿಂದ ನೀರೇ ಬರಲಿಲ್ಲ. ಹೀಗಾಗಿ ಕೆರೆಗಳು ಖಾಲಿ ಖಾಲಿ.

ತುಮಕೂರು ನಗರಕ್ಕೆ ನೀರು ಪೂರೈಸುವ ಬುಗುಡನಹಳ್ಳಿ ಕೆರೆಯಲ್ಲಿ ಇನ್ನು ಕೇವಲ 10 ದಿನಕ್ಕೆ ಆಗುವಷ್ಟು ಮಾತ್ರ ಇದೆ. ಮೈದಾಳ ಕೆರೆಯಿಂದ ನೀರು ತರಲು ಪಾಲಿಕೆ ಪ್ರಯತ್ನಿಸಿತು. ಆದರೆ, ಇನ್ನೂ ಹನಿ ನೀರೂ ಬಂದಿಲ್ಲ. ಮೈದಾಳ ಕೆರೆಯಿಂದ ತುಮಕೂರು ನಗರಕ್ಕೆ ನೀರು ಪೂರೈಸುವುದಕ್ಕೆ ಮೈದಾಳ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದಲ್ಲಿ ಖಾಸಗಿ ಟ್ಯಾಂಕರ್‌ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಒಂದು ಟ್ಯಾಂಕ್‌ ನೀರಿಗೆ ₹ 300–400 ಕೊಟ್ಟು ತರಿಸಿಕೊಳ್ಳುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕಗಳ ಮುಂದೆ ಜನರು ಸಾಲುಗಟ್ಟಿ ನಿಂತು ನೀರು ಪಡೆಯುತ್ತಿದ್ದಾರೆ.

ನಗರದ ಕೆಲ ಬಡಾವಣೆಗಳಲ್ಲಿ 3ರಿಂದ 4 ದಿನಕ್ಕೆ, ಕೆಲ ಕಡೆ ಒಂದು ವಾರಕ್ಕೆ ನೀರು ಪೂರೈಸಲಾಗುತ್ತಿದೆ. ಪ್ರತಿ ವಾರ್ಡ್‌ನಲ್ಲಿ ಕೊಳವೆ ಬಾವಿ ಕೊರೆಸಲಾಗುತ್ತಿದೆ. ಹಣದ ಕೊರತೆ ಇಲ್ಲ ಎಂದು ಪಾಲಿಕೆ ಆಯುಕ್ತ ಅಷದ್ ಷರೀಫ್ ತಿಳಿಸಿದರು.

ತಾಲ್ಲೂಕಿನ ಸ್ಥಿತಿಗತಿ: ತಾಲ್ಲೂಕಿನ ಗ್ರಾಮಗಳಲ್ಲಿನ ನೀರು ಪೂರೈಕೆ ಕೊಳವೆ ಬಾವಿಗಳು ದಿನ ಕಳೆದಂತೆ ಬರಿದಾಗುತ್ತಿವೆ.ಕೊಳವೆ ಬಾವಿ ಇರುವ ತೋಟ, ಕೆರೆ ಕಟ್ಟೆಗಳಿಗೆ ನೀರು ತರಲು ಜನರು ಹೋಗುತ್ತಿದ್ದಾರೆ. ‘ದನಕರುಗಳು ಮೇವಿಲ್ಲದಿದ್ದರೂ ಚಿಂತೆ ಇಲ್ಲ. ಒಂದಿಷ್ಟು ನೀರಾದರೂ ಸಿಕ್ಕರೆ ಸಾಕು. ಕುಡಿದು ಬಾಯಾರಿಕೆ ನೀಗಿಸಿಕೊಳ್ಳುತ್ತವೆ’ ಎಂದು ರೈತರಾದ ಗೋವಿಂದರಾಜ್ ಸಮಸ್ಯೆ ವಿವರಿಸಿದರು.

ತಾಲ್ಲೂಕಿನ  ಒಡೆಯರಪುರ, ತಿಮ್ಮೇಗೌಡ ಪಾಳ್ಯ, ಬಂಗಾರಪ್ಪ ಕಾಲೊನಿ, ಕಲ್ಕಟ್ಕುಂಟೆ, ಬಸವೇಗೌಡಪಾಳ್ಯ, ಜಿ.ಎಸ್.ಪಾಳ್ಯ, ಸೇರಿ ಆರು ಗ್ರಾಮಗಳಿಗೆ ಟ್ಯಾಂಕರ್‌ನಿಂದ ನೀರು ಪೂರೈಸಲಾಗುತ್ತಿದೆ. ತಾಲ್ಲೂಕಿನಲ್ಲಿ ಈ ವರ್ಷ 116 ನೀರಿನ ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಲಾಗಿದೆ.

40 ಕಡೆ ಹೊಸದಾಗಿ ಕೊಳವೆ ಬಾವಿ ಕೊರೆಸಿ ನೀರು ಪೂರೈಸಲಾಗುತ್ತಿದೆ. ಮೊದಲಿದ್ದ 10 ಕೊಳವೆ ಬಾವಿ ಪುನಃ ಕೊರೆಸಿ(ರಿಬೋರ್) ನೀರು ಪಡೆಯಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ನಾಗಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟಾಸ್ಕ್‌ ಪೋರ್ಸ್‌ಗೆ ₹ 40 ಲಕ್ಷ ಅನುದಾನ ಬರಬೇಕಾಗಿದೆ. ಅನುದಾನವನ್ನು ಸಮಸ್ಯಾತ್ಮಕ ಹಳ್ಳಿಗಳಲ್ಲಿನ ನೀರಿನ ಸಮಸ್ಯೆ ಪರಿಹಾರಕ್ಕೆ ಬಳಸಿಕೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

ಹಗಲು ರಾತ್ರಿ ನೀರಿಗೆ ಪರದಾಟ
‘ಪ್ರತಿ ವರ್ಷಕ್ಕಿಂತ ಈ ವರ್ಷ ನೀರಿನ ಸಮಸ್ಯೆ ಗಂಭೀರವಾಗಿದೆ.  ಪ್ರತಿ ಊರಲ್ಲೂ ನೀರಿನ ಸಮಸ್ಯೆ ಇದೆ. ಜನರು ಹಗಲು ರಾತ್ರಿ ನೀರಿಗೆ ಪರದಾಡುತ್ತಿದ್ದಾರೆ. ಹೊಸದಾಗಿ ಕೊರೆದ ಕೊಳವೆ ಬಾವಿ ಒಂದೆರಡು ದಿನದಲ್ಲಿ ಬತ್ತುತ್ತಿವೆ.

ಕನಿಷ್ಠ 800 ಅಡಿ ಮೇಲೆಯೇ ಕೊರೆಸಬೇಕಾಗಿದೆ. ಕೊರೆಸಿದರೂ ನೀರು ಸಿಗುತ್ತಿಲ್ಲ. ಅಧಿಕಾರಿಗಳು ಹಗಲು ರಾತ್ರಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಶಾಸಕ ಬಿ.ಸುರೇಶಗೌಡ ಹೇಳಿದರು.

‘ಟಾಸ್ಕ್‌ಫೋರ್ಸ್‌ಗೆ ಬರಬೇಕಾದ ಹಣವೂ ಬಂದಿಲ್ಲ. ಹೀಗಾಗಿ ಭವಿಷ್ಯದ ದಿನಗಳಲ್ಲಿ ಸಮಸ್ಯೆ ಪರಿಹಾರ ಕಷ್ಟವಾಗಲಿದೆ’ ಎಂದು ಹೇಳಿದರು.
‘ಹೇಮಾವತಿ ಜಲಾಶಯದಿಂದ ನೀರು ಹರಿಸಿ ಜಿಲ್ಲೆಯ ಕೆರೆಗಳನ್ನು ತುಂಬಿಸಿಕೊಂಡಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಾಸನ ಜಿಲ್ಲೆಯ ಪ್ರಭಾವಿಗಳ ಒತ್ತಡಕ್ಕೆ ಮಣಿದಿದ್ದಾರೆ. ಹೀಗಾಗಿ ಜಿಲ್ಲೆಗೆ ನೀರು ಬರಲಿಲ್ಲ’ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.