ADVERTISEMENT

ನೀರು ಮಾಲಿನ್ಯ; ಆಪತ್ತಿನಲ್ಲಿ ಭವಿಷ್ಯ

​ಪ್ರಜಾವಾಣಿ ವಾರ್ತೆ
Published 14 ಮೇ 2017, 5:25 IST
Last Updated 14 ಮೇ 2017, 5:25 IST

ಸಿದ್ಧರಬೆಟ್ಟ(ತೋವಿನಕೆರೆ): ‘ಮನುಷ್ಯನ ದುರಾಸೆ ಕಾರಣಕ್ಕೆ ನೀರು ಹೆಚ್ಚು ಮಾಲಿನ್ಯಕ್ಕೆ ಒಳಗಾಗುತ್ತಿದ್ದು ಭವಿಷ್ಯ ಆಪತ್ತಿನಲ್ಲಿದೆ’ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಎ.ಆರ್.ಶಿವಕುಮಾರ್ ಆತಂಕ ವ್ಯಕ್ತಪಡಿಸಿದರು.

ಸಿದ್ಧರಬೆಟ್ಟದ ರಂಭಾಪುರಿ ಶಾಖಾ ಮಠದಲ್ಲಿ ಇತ್ತೀಚೆಗೆ ನಡೆದ ‘ಬೆಳದಿಂಗಳ ಕೂಟ’ದಲ್ಲಿ ಅವರು ‘ಸದೃಢ ಜೀವನಕ್ಕೆ ಮಳೆ ನೀರು ಸಂಗ್ರಹ’ ವಿಷಯದ ಕುರಿತು ಉಪನ್ಯಾಸ ನೀಡಿದರು. ‘ಜಿಲ್ಲೆಯಲ್ಲಿ ಹತ್ತು ವರ್ಷಗಳಿಂದ ಸುರಿದಿರುವ ಮಳೆಯನ್ನು ಸೂಕ್ತವಾಗಿ ಸಂಗ್ರಹಿಸಿದ್ದರೆ ಹಾಗೂ ಇಂಗಿಸಿದ್ದರೆ ನೆಮ್ಮದಿಯ ಜೀವನ ಸಾಗಿಸಬಹುದಿತ್ತು’ ಎಂದು ಹೇಳಿದರು.

‘ಕುಟುಂಬಗಳು ಮಳೆ ನೀರು ಸಂಗ್ರಹಿಸಿ ನಿತ್ಯದ ಚಟುವಟಿಕೆಗೆ ಬಳಸಬೇಕು. ವೈಜ್ಞಾನಿಕವಾಗಿ ನೀರನ್ನು ಭೂಮಿಗೆ ಸೇರಿಸಬೇಕು.  ಮಳೆ ನೀರು ಸಂಗ್ರಹವನ್ನು ತಾತ್ಸಾರ ಮಾಡಬಾರದು’ ಎಂದು ಸಲಹೆ ನೀಡಿದರು.

ADVERTISEMENT

ಮಠದ ಅಧ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ‘ಸ್ಥಳೀಯರ ಸಹಕಾರದಿಂದ ಕೆಲವು ಕೆರೆಗಳ ಹೂಳು ತೆಗೆದು ಅಭಿವೃದ್ಧಿಗೊಳಿಸಲಾಗುವುದು’ ಎಂದರು. ಕೊರಟಗೆರೆ ತಾಲ್ಲೂಕು ಅಕ್ಕಿರಾಂಪುರದ ಆರ್.ಎಚ್. ನಟರಾಜು ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ಸೈನಿಕ ಸುಬೇದಾರ್ ಲಿಂಗಣ್ಣ, ವಕೀಲರಾದ ಪಂಚಾಕ್ಷರಯ್ಯ, ಕೊರಟಗೆರೆ ಪರ್ವತಯ್ಯ, ಗುಬ್ಬಿ ತಾಲ್ಲೂಕು ಸಾವಯವ ಕೃಷಿ ಪರಿವಾರದ ಶ್ರೀಕಂಠಮೂರ್ತಿ, ಅತ್ತಿಕಟ್ಟೆ ಆನಂದ, ಅಮ್ಮನಘಟ್ಟದ ಶಂಕರಪ್ಪ, ಮಧುಗಿರಿ ರಂಗಾಪುರದ ಮಹಾಲಿಂಗಯ್ಯ, ದೊಡ್ಡೇರಿ ಬಸವರಾಜು, ಸಿದ್ಧಗಿರಿ ನಂಜುಂಡಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.